14 ಗಣಿಗಳ ಪೈಕಿ 11 ಬಂದ್ : ಗಣಿ ಗಡಿ ಒತ್ತುವರಿ ಕಾರಣ

ಈ ಕುರಿತು ಉನ್ನತ ಮೂಲಗಳು ಮಾಹಿತಿ ನೀಡಿದ್ದು, ಜಿಲ್ಲೆಯ 99 ಗಣಿಗಳ ಸರ್ವೆಗೆ ಸುಪ್ರೀಂ ಕೋರ್ಟ್ ಸಿಇಸಿಗೆ ನೀಡಿರುವ ಅಧಿಕಾರದಂತೆ ಜಿಲ್ಲೆಯ ಸಂಡೂರು ಮತ್ತು ಹೊಸಪೇಟೆ ತಾಲೂಕಿನ ಸ್ವಾಮಿಮಲೈ ಬ್ಲಾಕ್, ನಾರ್ಥಈಸ್ಟ್ ಬ್ಲಾಕ್ ಮತ್ತು ರಮಣಮಲೈ ಬ್ಲಾಕ್‌ನ ಒಟ್ಟು 14 ಗಣಿಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ.
ಸಿಇಸಿಯ ನೇತೃತ್ವ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ನಿರ್ದೇಶನದಲ್ಲಿ ನಡೆದ ಗಣಿ ಸರ್ವೆಯಲ್ಲಿ 14 ಗಣಿಗಳ ಪೈಕಿ 11 ಗಣಿಗಳು ಗಡಿಯನ್ನು ಒತ್ತುವರಿ ಮಾಡಿ ವ್ಯಾಪಕ ಗಣಿಗಾರಿಕೆ ನಡೆಸಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ, ಗಣಿ ಒತ್ತುವರಿ ಮಾಡಿರುವ ಗಣಿಗಳ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲು ಆದೇಶ ಜಾರಿ ಆಗಲಿದೆ.
ವೀರಭದ್ರಪ್ಪ ಅಂಡ್ ಸನ್ಸ್‌ನ (ವೆಸ್ಕೋಸ್)ನ ಒಂದು ಲೀಸ್, ವಿಎಂಕೆ ಮೆನನ್ ಮತ್ತು ವಿಕೆಜಿ ಮೈನ್ಸ್‌ಗಳು ಸರ್ಕಾರ ನೀಡಿರುವ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಸುತ್ತಿವೆ. ಈ ಕಂಪನಿಗಳು ಎಲ್ಲಿಯೂ ಗಣಿ ಗಡಿ ಒತ್ತುವರಿ ಮಾಡಿಲ್ಲ. ಈ ಹಿನ್ನಲೆಯಲ್ಲಿ ಈ ಮೂರು ಗಣಿಗಳು ಚಟುವಟಿಕೆಗಳನ್ನು ಮುಂದುವರೆಸಲಿವೆ.
ಹೊತ್ತೂರು ಟ್ರೇಡರ‍್ಸ್, ವಿಎಸ್ ಲಾಡ್‌ನ ಒಂದು ಲೀಸ್, ಶ್ರೀ ಕುಮಾರಸ್ವಾಮಿ ಮೈನ್ಸ್ ಅಂಡ್ ಮಿನರಲ್ಸ್, ಚೌಗಲೆ, ಲಕ್ಷ್ಮೀನಾರಾಯಣ ಮೈನಿಂಗ್ ಕಂಪನಿ, ಟಿಫಿನ್ ಬ್ಯಾರಟೀಸ್, ಬಿ.ಆರ್. ಯೋಗರಾಜ್ ಸಿಂಗ್, ಎಚ್.ಆರ್. ಗವಿಯಪ್ಪ ಮೈನ್ಸ್, ಬಿಎಂಎಂ ಮತ್ತು ವೀರಭದ್ರಪ್ಪ ಅಂಡ್ ಸನ್ಸ್‌ನ ಮತ್ತೊಂದು ಲೀಸ್ (ವೆಸ್ಕೋಸ್)ಗಳ ರದ್ದತಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಆದೇಶ ನೀಡಲಿದ್ದಾರೆ.
ಕಾನೂನು ಸಮರ : ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಅವರು ಪ್ರಕಟಿಸಲಿರುವ ಗಣಿ ಚಟುವಟಿಕೆಗಳ ರದ್ದು ಮತ್ತು ಅನುಮತಿ ರದ್ದತಿ ಆದೇಶವನ್ನು ಪ್ರಶ್ನಿಸಿ ಗಣಿ ಕಂಪನಿಗಳು ಹೊಸ ಕಾನೂನು ಸಮರ ನಡೆಸಲಿವೆ. ಅಲ್ಲದೇ, ಈ ಗಣಿ ಸಮರ ಇಷ್ಟಕ್ಕೇ ನಿಲ್ಲದೇ ಹೊಸ ತಿರುವುಗಳನ್ನು ಪಡೆಯಲಿದೆ ಎಂದೇ ವಿಶ್ಲೇಷಿಸಲಾಗಿದೆ.












Click it and Unblock the Notifications