ಲೋಕಪಾಲ ಮಸೂದೆ ನಾಗರಿಕ ಸಮಿತಿ ನಿರರ್ಥಕ

ಪ್ರಮುಖ ಶಾಸನಗಳ ರಚನೆಗೆ ನಾಗರಿಕ ಸಮಾಜದ ಪ್ರತಿನಿಧಿಗಳು ಪರ್ಯಾಯ ಮೂಲಗಳಲ್ಲ. ಶಾಸನವೊಂದನ್ನು ನಿರ್ಧರಿಸುವಾಗ ಸಂಸತ್ತಿನ ಅಭಿಪ್ರಾಯವನ್ನು ಪಡೆದುಕೊಳ್ಳುವಂತಹ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಪಾಲಿಸುವ ಅಗತ್ಯವಿದೆ.
ನಾಗರಿಕ ಸಮಾಜದ ಪ್ರತಿನಿಧಿಗಳು ಹೇಳುವುದನ್ನು ಸಲಹೆಯಾಗಿ ಪರಿಗಣಿಸಬಹುದೇ ಹೊರತು ಅದುವೇ ಶಾಸನವಾಗುವುದಿಲ್ಲ. ನಮ್ಮದು ನಾಮ್ ಕೆ ವಾಸ್ತೆ ಗಣತಂತ್ರವಲ್ಲ. ನಾವು ಭಾರತದ ಸಂವಿಧಾನದಡಿ ಆಳ್ವಿಕೆ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದಾರೆ.
ನ್ಯಾ. ಎಂ ವೆಂಕಟಾಚಲಯ್ಯ ನೇತೃತ್ವದ ಸಂವಿಧಾನ ಪರಾಮರ್ಶೆ ಸಮಿತಿ ಕೂಡ ಪ್ರಧಾನ ಮಂತ್ರಿಯನ್ನು ಲೋಕಪಾಲ ವ್ಯಾಪ್ತಿಗೆ ತರುವುದಕ್ಕೆ ವಿರೋಧಿಸಿದೆ ಎನ್ನುವ ಮೂಲಕ ಜಯಂತಿ ನಟರಾಜನ್ ಈ ಕುರಿತಾಗಿ ಕೇಳಿದ ಪ್ರಶ್ನೆಯನ್ನು ನಿರ್ಲಕ್ಷಿಸಿದರು.
ತಾವು ಜಂಟಿ ಸಮಿತಿಯ ಮುಂದಿನ ಸಭೆಗಳಲ್ಲಿ ಭಾಗವಹಿಸುತ್ತೇವೆ ಎಂದು ಅಣ್ಣಾ ತಂಡ ಘೋಷಿಸಿದ ಬೆನ್ನಲ್ಲೇ ಜಯಂತಿ ನಟರಾಜನ್, ಸಮಿತಿಯ ಪ್ರಾಮುಖ್ಯತೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆಯಿಟ್ಟಿರುವುದು ಗಮನಾರ್ಹವಾಗಿದೆ. ಕಾಂಗ್ರೆಸಿನ ಹಿರಿಯ ನಾಯಕ ಪ್ರಣವ್ ಮುಖರ್ಜಿ ಈ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಉಪಾಧ್ಯಕ್ಷರಾಗಿದ್ದಾರೆ.
ಸಶಸ್ತ್ರ ಬಂಡುಕೋರರ ಪಡೆ ಕಟ್ಟುತ್ತೇನೆ ಎಂದು ಬಾಬಾ ರಾಮದೇವ್ ಹೇಳಿರುವ ಸಂಗತಿ ಗಾಂಧೀವಾದಿಗೆ ತಿಳಿದಂತಿಲ್ಲ ಎನ್ನುವ ಮೂಲಕ ಜಯಂತಿ ನಟರಾಜನ್, ಬಾಬಾ ಮತ್ತು ಅಣ್ಣಾ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡಿದರು. ಅಣ್ಣಾ ಹಜಾರೆಯ ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮ ಕರೆಯನ್ನು ಜಯಂತಿ ಸ್ವೀಕಾರಾರ್ಹವಲ್ಲ ಎಂದು ಹೇಳಿ ತಳ್ಳಿ ಹಾಕಿದ್ದಾರೆ.












Click it and Unblock the Notifications