ವೇಶ್ಯಾವಾಟಿಕೆ ಜಾಲದಿಂದ ಪಾರು ಮಾಡಿದ ಹಿಂದಿ ಜ್ಞಾನ

ತಿಂಗಳಿಗೆ ಹತ್ತು ಸಾವಿರ ರು. ಸಿಗುವ ಕೆಲಸ ಕೊಡುಸುತ್ತೇನೆಂದು ಆಮಿಷ ಒಡ್ಡಿ ವೇಶ್ಯಾವಾಟಿಕೆಗೆ ತಳ್ಳಲು ಆಕೆಯನ್ನು ಮುಂಬೈಗೆ ಗೌಡಾ ಎಂಬ ಪಿಂಪ್ ಒಬ್ಬಳು ಕರೆತಂದಿದ್ದಳು. ಹಿಂದಿಯಲ್ಲಿ ಆಡಿದ ಮಾತುಗಳಿಂದ ಜಾಗೃತಳಾದ ಹುಡುಗಿ ಅತ್ತುಕರೆದು, ಸುತ್ತಲಿನವರಿಗೆ ಕರೆದುಕೊಂಡು ಬಂದವಳ ದುರುದ್ದೇಶ ತಿಳಿಯುವಂತೆ ಮಾಡಿದ್ದಾಳೆ. ಪೊಲೀಸರು ಬಂದು ವಿಚಾರಣೆ ಮಾಡಿದ ಮೇಲೆ, ಸತ್ಯ ಬಯಲಾಗಿದೆ.
ಕಿತ್ತುತಿನ್ನುವ ಬಡತನ ಜೀವನವನ್ನು ಎಲ್ಲೆಲ್ಲಿಗೆ ಎಳೆದುಕೊಂಡು ಹೋಗುತ್ತದೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಆವರ್ತಿ ವಾಸಿಯಾಗಿರುವ ಹುಡುಗಿ ಓದಿದ್ದು ಬರೀ 9ನೇ ಕ್ಲಾಸು. ಕಳೆದ ತಿಂಗಳಷ್ಟೆ ಆಕೆಯ ತಂದೆ ತೀರಿದ್ದರಿಂದ ಕೆಲಸ ಮಾಡದೆ ಜೀವನ ಸಾಗುವಂತಿರಲಿಲ್ಲ. ಪರಿಚಯದವರೊಬ್ಬರು 5 ಸಾವಿರ ರು. ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.
ಬೆಂಗಳೂರಿಗೆ ಬಂದು ಕಚೇರಿ ಹುಡುಕುತ್ತಿದ್ದಾಗ ಆ ಹುಡುಗಿಗೆ ಸಂತೋಷ್ ಎಂಬವರೊಬ್ಬರು ಪರಿಚಯವಾಗಿದ್ದಾರೆ. ಮುಂಬೈನಲ್ಲಿರುವ ಇಂಜಿನಿಯರ್ ಸಹಾಯಕಿಯಾಗಿ ಕೆಲಸ ಮಾಡಿದರೆ 10 ಸಾವಿರ ರು. ಕೊಡಿಸುವುದಾಗಿ ಆಕೆಗೆ ಸಂತೋಷ್ ಮನವರಿಕೆ ಮಾಡಿಕೊಟ್ಟಿದ್ದಾನೆ. ಆತನ ಮಾತನ್ನು ನಂಬಿದ ಹುಡುಗಿ ಪಿಂಪ್ ಜೊತೆ ಮುಂಬೈ ತಲುಪಿದ್ದಾಳೆ.
ಅಲ್ಲಿ ಹಿಂದಿ ಬರುತ್ತದಾ ಎಂಬು ಹುಡುಗಿಯನ್ನು ಪಿಂಪ್ ಕೇಳಿದ್ದಾಳೆ. ಇಲ್ಲವೆಂದಾಗ, ಹಿಂದಿಯಲ್ಲಿ ಮಾತನಾಡುತ್ತ 10 ಸಾವಿರಕ್ಕೆ ಮಾರಾಟ ಮಾಡುತ್ತಿರುವ ವಿಷಯ ತಿಳಿದುಬಂದಿದೆ. ವೇಶ್ಯಾವಾಟಿಕೆಯ ಜಾಲದಲ್ಲಿ ಬೀಳುತ್ತಿರುವುದು ಗಮನಕ್ಕೆ ಬಂದು ದಾರಿಹೋಕರನ್ನು ಅತ್ತು ಆಕೆ ಸೆಳೆದಿದ್ದಾಳೆ. ವಿಚಾರಣೆ ಮುಗಿದ ನಂತರ ಸತ್ಯ ಬಯಲಾಗಿ ಗೌಡಾ ಮತ್ತು ಕೊಳ್ಳಲು ಯತ್ನಿಸಿದ್ದ ಜೆಲಗಮ್ಮ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಮಯಸ್ಫೂರ್ತಿಯಿಂದ ಪಾರಾದ ಹುಡುಗಿಯನ್ನು ಡೊಂಗ್ರಿ ಮಕ್ಕಳ ಆಲಯಕ್ಕೆ ಕಳುಹಿಸಲಾಗಿದೆ. ಹಿಂದಿ ಭಾಷೆ ಗೊತ್ತಿದ್ದರಿಂದಲೇ ಆಕೆ ಪಾರಾಗಲು ಸಾಧ್ಯವಾಯಿತು. ಇಲ್ಲದಿದ್ದರೆ, ಮಾಂಸ ದಂಧೆಗೆ ಆಕೆ ಬಲಿಯಾಗುತ್ತಿದ್ದಳು ಎಂದು ಪೊಲೀಸರು ಆಕೆಯನ್ನು ಶ್ಲಾಘಿಸಿದ್ದಾರೆ.












Click it and Unblock the Notifications