ಯಾದಗಿರಿ ಜೀಪುಗಳಲ್ಲಿ ಕಚ್ಚೆ ಮಂತ್ರಿಗಳು ಸಂಚರಿಸಲಿ!

ಹಳ್ಳಿಗಾಡಿನ ಜನರು ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಿಗೆ ಹೋಗಿ ಬರಲು ಈ ಖಾಸಗಿ ಜೀಪುಗಳನ್ನೇ ಅವಲಂಬಿಸಬೇಕಾಗಿದೆ. ಖಾಸಗಿ ಜೀಪುಗಳು ಜೋಲಿ ಹೊಡೆಯುತ್ತಲೇ ಸಾಗುತ್ತವೆ. ಒಳಗೆ ಕುಳಿತಷ್ಟೇ ಪ್ರಯಾಣಿಕರು ಟಾಪ್ ಮೇಲೆ ಕುಳಿತುಕೊಳ್ಳುತ್ತಾರೆ. ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಯಾಗಾರ ಇದ್ದರೂ ಹಳ್ಳಿಗಳಿಗೆ ಬಸ್ಸುಗಳು ಬರುತ್ತಿಲ್ಲ ಎಂಬ ನೋವು ಹಳ್ಳಿ ಜನರದು.
ಗುರುಮಿಠಕಲ್ ನಿಂದ ಕೆಲವು ಹಳ್ಳಿಗಳಿಗೆ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳೇ ಬರುವುದಿಲ್ಲ. ವಾಹನಗಳ ಟಾಪ್ ಮೇಲೆ ಕುಳಿತು ಪ್ರಯಾಣಿಸುವುದು ಇಲ್ಲಿನ ಜನರಿಗೆ ರೂಢಿಯಾಗಿ ಬಿಟ್ಟಿದೆ. ಚಿಕಿತ್ಸೆ, ಶಾಲೆ, ಕಚೇರಿ ಕೆಲಸ ಹೀಗೆ ಹತ್ತಾರು ಕಾರ್ಯಗಳಿಗೆ ಹೋಗುವ ಪ್ರಯಾಣಿಕರು ಅನಿವಾರ್ಯವಾಗಿ ಜೀಪುಗಳನ್ನೇ ಅವಲಂಬಿಸುವಂತಾಗಿದೆ. ಜೀಪಿನಲ್ಲಿ ಯಾವ ರೀತಿ ಜನರನ್ನು ತುರುಕಿರುತ್ತಾರೆಂದರೆ ಒಳಗೆ ಕುಳಿತವರಿಗೆ ಉಸಿರಾಡಲೂ ಗಾಳಿಯಿರುವುದಿಲ್ಲ.
ಅಪಘಾತಕ್ಕೆ ಆಹ್ವಾನ : ಖಾಸಗಿ ವಾಹನಗಳ ಟಾಪ್ ಸರ್ವಿಸ್‌ನಿಂದ ಇಲ್ಲಿ ಪಲ್ಟಿಯಾಗಿ ಮೃತಪಟ್ಟ ಪ್ರಕರಣಗಳು ಈಗ ನಿತ್ಯ ನಡೆಯುತ್ತಿವೆ. ಇಂಥ ಟ್ರಿಪ್ ಗಳನ್ನು ಮಾತ್ರವಲ್ಲ ಈ ವಾಹನಗಳನ್ನು ಚಲಾಯಿಸುವ ಚಾಲಕರ ಲೈಸನ್ಸನ್ನೇ ರದ್ದುಪಡಿಸಬೇಕೆಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಳ್ಳಿಗರ ಮೊರೆ ಬೆಂಗಳೂರಿನಲ್ಲಿ ಕುಳಿತ ದೊರೆಗೆ ಕೇಳುವುದೆ?
ಟ್ರಾಫಿಕ್ ಪೊಲೀಸರೇ ಇಲ್ಲ : ಜಿಲ್ಲೆಯಾಗಿ ಒಂದೂವರೆ ವರ್ಷವಾದರೂ ಇಲ್ಲಿ ಇನ್ನೂ ಟ್ರಾಫಿಕ್ ಪೊಲೀಸ್ ಠಾಣೆ ಪ್ರಾರಂಭವಾಗಿಲ್ಲ. ಈಗಿನ ಪೊಲೀಸರಿಂದ ಎಲ್ಲ ವಾಹನಗಳ ತಪಾಸಣೆ ಮಾಡುವುದು, ಅವರಿಗೆ ದಂಡ ಹಾಕುವ ಕಾರ್ಯ ಆಗುತ್ತಿಲ್ಲ. ಟಾಪ್ ಮೇಲೆ ಕೂಡಿಸಿಕೊಂಡು ವಾಹನ ಓಡಿಸುತ್ತಿದ್ದರೂ ಪೊಲೀಸರು ಕಣ್ಣುಮುಚ್ಚಿ ಕುಳಿತಿದ್ದಾರೆ. ಹೇಗೆ ಮಾಡಿದರೂ ಹಿಡಿಯುವವರಿಲ್ಲ ಎಂಬ ಹುಂಬ ಧೈರ್ಯ ಯಾದಗಿರಿ ಮತ್ತು ಗುರುಮಿಠಕಲ್ ಜನರಿಗೆ ಬಂದಿದೆ.
ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಟಾಪ್ ಸರ್ವಿಸ್ ನಂತಹ ಅಪಾಯಕಾರಿ ಚಟುವಟಿಕೆಗಳಿಗೆ ಪೊಲೀಸರು ನಿಯಂತ್ರಣ ಹಾಕುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ. ಹಳ್ಳಿಜನರ ಜೀವ ಕಾಪಾಡುವ ಜವಾಬ್ದಾರಿ ಸದ್ಯಕ್ಕೆ ಪೊಲೀಸರ ಕೈಯಲ್ಲಿದೆ.












Click it and Unblock the Notifications