Yash: ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶ್ ಅಬ್ಬರ: ಪ್ರತಿಷ್ಠಿತ 'ವೆರೈಟಿ' ಮ್ಯಾಗಜೀನ್ ಮುಖಪುಟದಲ್ಲಿ ಮಿಂಚಿದ ರಾಕಿಂಗ್ ಸ್ಟಾರ್
ಕನ್ನಡ ಚಿತ್ರರಂಗದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್, ಇದೀಗ ಮತ್ತೊಂದು ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಅತ್ಯಂತ ಪ್ರಭಾವಶಾಲಿ ಸಿನಿಮಾ ಮತ್ತು ಮನರಂಜನಾ ಮ್ಯಾಗಜೀನ್ 'ವೆರೈಟಿ' (Variety) ಮುಖಪುಟದಲ್ಲಿ ಯಶ್ ರಾರಾಜಿಸಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ಯಶ್ ಅವರ ಆಕರ್ಷಕ ಫೋಟೋ 'ವೆರೈಟಿ' ಮ್ಯಾಗಜೀನ್‌ನ ಮುಖಪುಟವನ್ನು ಅಲಂಕರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಸದ್ಯ ಹರಿದಾಡುತ್ತಿದ್ದು, ಸ್ಯಾಂಡಲ್‌ವುಡ್ ಅಭಿಮಾನಿಗಳು ಹೆಮ್ಮೆಯಿಂದ ಈ ಸಾಧನೆಯನ್ನು ಸಂಭ್ರಮಿಸುತ್ತಿದ್ದಾರೆ. ಹಾಲಿವುಡ್ ಸ್ಟಾರ್‌ಗಳು ಮತ್ತು ಜಾಗತಿಕ ಮಟ್ಟದ ಸಾಧಕರು ಮಾತ್ರ ಕಾಣಿಸಿಕೊಳ್ಳುವ ಈ ಮ್ಯಾಗಜೀನ್‌ನಲ್ಲಿ ಯಶ್ ಸ್ಥಾನ ಪಡೆದಿರುವುದು ಅವರ ಜಾಗತಿಕ ಮಾರುಕಟ್ಟೆಯ ವ್ಯಾಪ್ತಿಯನ್ನು ಸಾಬೀತುಪಡಿಸಿದೆ.

ಸಿನಿಮಾ ಪ್ರಯಾಣದ ಬಗ್ಗೆ ಚರ್ಚೆ
ಮ್ಯಾಗಜೀನ್ ಈ ಆವೃತ್ತಿಯಲ್ಲಿ ಯಶ್ ಅವರ ಸಿನಿಮಾ ಪಯಣ, 'ಕೆಜಿಎಫ್' ಸೃಷ್ಟಿಸಿದ ಸಂಚಲನ ಹಾಗೂ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' (Toxic) ಬಗ್ಗೆ ವಿಶೇಷ ಲೇಖನವನ್ನೂ ಪ್ರಕಟಿಸಲಾಗಿದೆ ಎನ್ನಲಾಗಿದೆ. ಭಾರತೀಯ ಚಿತ್ರರಂಗದ ಪ್ರಭಾವಿ ನಟರಲ್ಲಿ ಒಬ್ಬರಾಗಿ ಯಶ್ ಹೊರಹೊಮ್ಮಿರುವುದನ್ನು ಈ ಲೇಖನವು ಶ್ಲಾಘಿಸಿದೆ. ಈ ಸಾಧನೆಯ ಮೂಲಕ ಯಶ್ ಅವರು ಕನ್ನಡ ಚಿತ್ರರಂಗದ ಗಡಿಗಳನ್ನು ದಾಟಿ, ಅಂತರರಾಷ್ಟ್ರೀಯ ಮಟ್ಟದ ತಾರೆಯಾಗಿ ಹೊರಹೊಮ್ಮಿದ್ದಾರೆ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
#sponsored by @KvnProductions | #Toxic: A Fairytale for Grown-Ups marks a shift for #Yash. After #KGF, he returns as actor-producer, backing a wild, dark, and unapologetic vision from Geetu Mohandas, alongside #KVNProductions & #MonsterMindCreations—something rarely seen in… pic.twitter.com/zKOaZ5iX6g
— Variety (@Variety) May 6, 2026
ಭರದಿಂದ ಸಾಗಿದ ರಾಮಾಯಣ ಶೂಟಿಂಗ್
ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಚಿತ್ರೀಕರಣವು ಅದ್ದೂರಿಯಾಗಿ ಸಾಗುತ್ತಿದ್ದು, ಚಿತ್ರತಂಡ ಈಗ ಈ ಮಹಾಕಾವ್ಯದ ಅತ್ಯಂತ ಪ್ರಮುಖ ಭಾಗವಾದ 'ಸೀತಾ ಸ್ವಯಂವರ' ಸನ್ನಿವೇಶದ ಶೂಟಿಂಗ್‌ನಲ್ಲಿ ತೊಡಗಿದೆ. ಮುಂಬೈನ ಗೋರೆಗಾಂವ್‌ನಲ್ಲಿರುವ ಫಿಲ್ಮ್ ಸಿಟಿಯಲ್ಲಿ ಈ ಭಾಗದ ಚಿತ್ರೀಕರಣ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಸನ್ನಿವೇಶಕ್ಕಾಗಿ ಚಿತ್ರತಂಡ ಫಿಲ್ಮ್ ಸಿಟಿಯಲ್ಲಿ ಅತ್ಯಂತ ಭವ್ಯವಾದ ಮತ್ತು ಶ್ರೀಮಂತವಾದ ಸೆಟ್ ಅನ್ನು ನಿರ್ಮಿಸಿದೆ. ರಾಜಕುಮಾರಿ ಸೀತೆಯ ತವರು ಮನೆ ಮಿಥಿಲಾ ಸಾಮ್ರಾಜ್ಯವನ್ನು ಮರುಸೃಷ್ಟಿಸಲು ಚಿತ್ರತಂಡ ಭಾರಿ ಶ್ರಮವಹಿಸಿದೆ. ವಿಶಾಲವಾದ ಅರಮನೆಯ ಅಂಗಳಗಳು, ಕೆತ್ತನೆಗಳಿಂದ ಕೂಡಿದ ರಾಜಮನೆತನದ ಬಾಲ್ಕನಿಗಳು ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟ ಸಾಂಪ್ರದಾಯಿಕ ನೆಲದ ವಿನ್ಯಾಸಗಳು ಸೆಟ್‌ಗೆ ಜೀವ ತುಂಬಿವೆ.
ಈ ಸ್ವಯಂವರದ ದೃಶ್ಯವು ದೃಶ್ಯಕಾವ್ಯದಂತೆ ಮೂಡಿಬರುತ್ತಿದ್ದು, ಪುರಾತನ ಭಾರತದ ಸಂಸ್ಕೃತಿಯನ್ನು ಅತ್ಯಂತ ನೈಜವಾಗಿ ತೆರೆಯ ಮೇಲೆ ತರಲು ನಿರ್ದೇಶಕರು ನಿರ್ಧರಿಸಿದ್ದಾರೆ. ಸೀತಾ ಸ್ವಯಂವರದ ಈ ಭಾಗವು ಸಿನಿಮಾದ ಹೈಲೈಟ್ ಆಗಿರಲಿದ್ದು, ವೀಕ್ಷಕರಿಗೆ ಒಂದು ಹೊಸ ಜಗತ್ತನ್ನು ಪರಿಚಯಿಸಲಿದೆ. ಪ್ರಸ್ತುತ ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯಿಸುತ್ತಿರುವ ಈ ಸಿನಿಮಾದ ಮೇಲೆ ದೇಶಾದ್ಯಂತ ಭಾರಿ ನಿರೀಕ್ಷೆಗಳಿದ್ದು, ಸ್ವಯಂವರದ ಈ ಅದ್ದೂರಿ ಚಿತ್ರೀಕರಣವು ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಸೀತಾ ಸ್ವಯಂವರದ ಈ ಅದ್ಧೂರಿ ಚಿತ್ರೀಕರಣದಲ್ಲಿ ನೂರಾರು ಜೂನಿಯರ್ ಆರ್ಟಿಸ್ಟ್‌ಗಳು ಭಾಗವಹಿಸಿದ್ದು, ಪುರಾತನ ಕಾಲದ ರಾಜಸಭೆಯ ವೈಭವವನ್ನು ಮರುಸೃಷ್ಟಿಸಲಾಗಿದೆ. ಆದರೆ, ಈ ಇಡೀ ಚಿತ್ರೀಕರಣದ ಅಸಲಿ ಆಕರ್ಷಣೆ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್. ರಾವಣನ ಪಾತ್ರಕ್ಕೆ ಯಶ್ ಅವರ ಎಂಟ್ರಿ ಮತ್ತು ಅವರ ಗಾಂಭೀರ್ಯದ ನಟನೆ ಈ ದೃಶ್ಯದ ಹೈಲೈಟ್ ಆಗಿರಲಿದೆ ಎಂದು ಮೂಲಗಳು ತಿಳಿಸಿವೆ. ಕೆಜಿಎಫ್ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯಶ್, ಈಗ ರಾವಣನಾಗಿ ಯಾವ ರೀತಿ ಅಬ್ಬರಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.













Click it and Unblock the Notifications