ಅಧ್ಯಕ್ಷ ಮಹೋದಯ್ ಪರಮೇಶ್ವರಪ್ಪಗೆ ತಾಕತ್ತೇ ಇಲ್ಲ: ಡಿಕೆಶಿ

ನನ್ನ ಮೇಲಿನ ಆರೋಪ ಸಾಬೀತುಪಡಿಸುವಂತೆ ವಿಶ್ವನಾಥ್ ಗೆ ತಿಳಿಯ ಹೇಳಿ ಎಂದು ನಮ್ಮ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಆದರೆ ಪರಮೇಶ್ವರಪ್ಪನವರೇನೋ ಈ ಬಗ್ಗೆ ಗಮನ ನೀಡುತ್ತಿಲ್ಲ. ಬಹುಶಃ ಅವರಿಗೆ ಆ ನಾಯಕರನ್ನು ಕೇಳೋ ಧೈರ್ಯ ಇಲ್ಲ ಅಂತ ಕಾಣುತ್ತೆ. ಅದಕ್ಕೆ ನಾನು ನನ್ನ ಕ್ಷೇತ್ರಕ್ಕೆ ಸೀಮಿತನಾಗಿದ್ದೇನೆ' ಎಂದು ಡಿಕೆಶಿ ಅವರು ನೇರವಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರಪ್ಪ ಅವರತ್ತ ಚಾಟಿ ಬೀಸಿದ್ದಾರೆ.
ನಾನು ಭೂಬಕಾಸುರ ಎಂದು ಆ ವಿಶ್ವನಾಥ್ ಹೇಳ್ತಾನೆ. ಆತನ ಪ್ರಕಾರ ನನಗೆ ಇಮೇಜ್ ಇಲ್ವಂತೆ. ನಾನು ಲ್ಯಾಂಡೆ ಗ್ರ್ಯಾಬರ್ ಅಂತೆ. ಆ ಇನ್ನೊಬ್ಬ ಮಹಿಳೆಯಂತೂ ನನ್ನದು ಜೈಲಿಗೆ ಹಾಕಬೇಕಾದ ವ್ಯಕ್ತಿತ್ವ ಎಂದು ಟಿವಿಗಳಲ್ಲಿ ಹೇಳುತ್ತಾಳೆ. ಹೀಗೆ ಯಾರು ಬೇಕಾದರೂ ಟಿವಿ ಮುಂದೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ.
ಈ ಆರೋಪಗಳ ಬಗ್ಗೆ ಪುರಾವೆ ಒದಗಿಸಲು ಹೇಳಿ. ಅದನ್ನು ಹೈಕಮಾಂಡ್ ಗಮನಕ್ಕೂ ತನ್ನಿ ಎಂದು ಪರಮೇಶ್ವರಪ್ಪನವರಿಗೆ ಅನೇಕ ಬಾರಿ ಹೇಳಿರುವೆ. ಆದರೆ ಪಕ್ಷದ ಅಧ್ಯಕ್ಷರು ಅದೇಕೋ ಮೌನಂ... ಬಹುಶಃ ಅವರಿಗೆ ಆ ನಾಯಕರನ್ನು ಕೇಳೋ ತಾಕತ್ತಿಲ್ಲ ಎಂದು ಪತ್ರಿಕಾ ಸಂದರ್ಶನದಲ್ಲಿ ಡಿಕೆಶಿ ತಮ್ಮ ದುಗುಡ ತೋಡಿಕೊಂಡಿದ್ದಾರೆ.
ಯಡಿಯೂರಪ್ಪನವರ ಹಣೆಬರಹ ಗಟ್ಟಿ: ಯಡಿಯೂರಪ್ಪನವರ ಹಣೆಬರಹ ಹಾಗೂ ಧೈರ್ಯ ಎರಡೂ ಗಟ್ಟಿಯಾಗಿವೆ. ಹೀಗಾಗಿ ಅವರ ಸರಕಾರ ನಡೆದಿದೆ. ಅಲ್ಲದೆ ಪ್ರತಿಪಕ್ಷಗಳು ಮಾಡಿದ ಹಲವು ತಪ್ಪುನಿರ್ಧಾರಗಳಿಂದ ಬಿಜೆಪಿಯಲ್ಲಿ ಒಗ್ಗಟ್ಟು ಮೂಡಲು ಕಾರಣವಾಗಿದೆ ಎಂದು ಬಿ. ಎಸ್. ಯಡಿಯೂರಪ್ಪ ಅವರ ಆಡಳಿತದ ಬಗ್ಗೆಯೂ ಡಿಕೆಶಿ ಷರಾ ಬರೆದಿದ್ದಾರೆ.











Click it and Unblock the Notifications