ಲವ್ವು ಲವ್ವು ಲವ್ವು ಅಂತಾ ಪ್ರಾಣ ಬಿಡ್ತಾರೋ

ಈ ಘಟನೆಯಲ್ಲಿ ಯುವತಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾಳೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಸಕಲೇಶಪುರದಿಂದ ವಿಟ್ಲಕ್ಕೆ ಮರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಹದಿಹರೆಯದ ಜೋಡಿ ಅಂತಿಮ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಂಡು ಹೊರಟಿದ್ದರು.
ಶಿರಾಡಿ ಘಾಟಿ ಹತ್ತಿರವಾಗುತ್ತಿದ್ದಂತೆ ಯುವತಿ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾಳೆ. ಏನೆಂದು ಅರ್ಥವಾಗದ ಕಂಡೆಕ್ಟರ್ ಬಸ್ ನಿಲ್ಲಿಸಿ ಪರಿಶೀಲಿಸಿದಾಗ ಈ ಅಮರ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಬೆಳಕಿಗೆ ಬಂದಿದೆ. ಅಲ್ಲಿಂದ ವೇಗವಾಗಿ ಗುಂಡ್ಯ ಚೆಕ್ ಪೋಸ್ಟ್ ವರೆಗೂ ಬಸ್ ಕೊಂಡೊಯ್ದ ಚಾಲಕ, ಅಲ್ಲಿದ್ದ ಪೊಲೀಸರಿಗೆ ವಿಷಯ ತಿಳಿಸಿ, ಅಂಬ್ಯುಲೆನ್ಸ್ ಹೊಂದಿಸಿಕೊಂಡು ಪ್ರೇಮಿಗಳನ್ನು ಪುತ್ತೂರಿಗೆ ಸಾಗಿಸಲಾಗಿದೆ.
ಆದರೆ, ಮಾರ್ಗಮಧ್ಯೆದಲ್ಲೇ ಯುವತಿ ಜೀವ ಹಾರಿ ಹೋಗಿದ್ದು, ಯುವಕ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದಾನೆ. ಈ ದುರಂತ ಪ್ರೇಮಿಗಳನ್ನು ವಿಟ್ಲ-ಮಂಗಿಲಪದವು ನಿವಾಸಿ ಯತೀಶ್(18) ಹಾಗೂ ವಿಟ್ಲ ನಿವಾಸಿ ಭವ್ಯ(18) ಎಂದು ಗುರುತಿಸಲಾಗಿದೆ.
ಸಂಬಂಧಿಕರಾದ ಈ ಇಬ್ಬರು ಮನೆಯಲ್ಲಿ ಸುಳ್ಳು ಹೇಳಿ ಸಕಲೇಶಪುರಕ್ಕೆ ಬಂದು, ಬಗೆಹರಿಯದ ಪ್ರೇಮ ಕಥೆಗೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಯುವತಿಯ ಶವ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿದೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.












Click it and Unblock the Notifications