ಜೂ.18ರಂದು ವಾಟಾಳ್ ನಾಗರಾಜ್ ಢಂಕಣಕ್ಕ ಚಳವಳಿ!

ಕೆಂಪೇಗೌಡರು ನಿರ್ಮಿಸಿದ ನಾಲ್ಕು ಗೋಡೆಗಳನ್ನು ಮೀರಿ ಬೆಂಗಳೂರು ಬೆಳೆದಿದೆ. ಆದರೆ ಕನ್ನಡ ಭಾಷೆಯ ಬೆಳವಣಿಗೆ ಮಾತ್ರ ಶೂನ್ಯ. ಎಲ್ಲಿ ನೋಡಿದರಲ್ಲಿ ಇಂಗ್ಲಿಷ್ ಮತ್ತು ಇತರ ಭಾಷೆಗಳ ಪ್ರಭಾವ ಹೆಚ್ಚುತ್ತಿದೆ. ನಮ್ಮ ನಾಡಿನ ಸಂಸ್ಕೃತಿ, ವೈಭವ, ಭಾಷೆ, ಇತಿಹಾಸ ಉಳಿಸಲು ಜೂನ್ 18ರಂದು ಬಿಬಿಎಂಪಿ ಕಚೇರಿಯ ಮುಂದೆ ತಮಟೆ ಚಳವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ, ಸಂಸ್ಥಾಪಕ ಆಲ್ ಇನ್ ಒನ್ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಈ ಮೂಲಕ ಸರಕಾರ ಮತ್ತು ಜನಪ್ರತಿನಿಧಿಗಳಿಗೂ ಬಿಸಿ ಮುಟ್ಟಿಸಲು ನಿರ್ಧರಿಸಿದ್ದೇವೆ. ರಾಜಧಾನಿ ಬೆಂಗಳೂರು ಪರಭಾಷಿಗರ ಪಾಲಾಗುತ್ತಿದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳಿಗೆ ಬೆಲೆ ಇಲ್ಲದಂತಾಗಿದೆ. ನಮ್ಮ ರಾಜಕಾರಿಣಿಗಳಿಗೆ ಈ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲ. ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಈ ಚಳವಳಿಗೆ ಚಾಲನೆ ನೀಡಲಾಗುವುದೆಂದು ವಾಟಾಳ್ ನಾಗರಾಜ್ ತಮ್ಮ ಹೋರಾಟದ ರೂಪುರೇಷೆಯನ್ನು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾದರೂ ಸಾಹಿತಿಗಳು ಮೌನ ವಹಿಸಿರುವುದು ಆಶ್ಚರ್ಯ. ಸಾಹಿತಿಗಳು ಹೋರಾಟಕ್ಕೆ ಇಳಿಯಬೇಕು. ಪರಿಸ್ಥತಿ ಇದೇ ರೀತಿ ಮುಂದುವರೆದರೆ ಕನ್ನಡ ಮರೆಯಾಗಿಬಿಡುವ ಕಾಲ ದೂರವಿಲ್ಲ. ನಗರದಲ್ಲಿದ್ದ ಮಠಗಳನ್ನು ಯಾರೋ ಗುಳುಂ ಮಾಡಿದ್ದಾರೆ. ಸರಕಾರ ಈ ಬಗ್ಗೆ ತನಿಖೆ ನಡೆಸಲಿ. ನಗರದ ರಸ್ತೆಗಳಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ, ಸಾಹಿತಿಗಳ ಹೆಸರಿಡಲಿ. ತಮಟೆ ಚಳವಳಿಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ವಾಟಾಳ್ ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.












Click it and Unblock the Notifications