ಧೈರ್ಯವಿದ್ದರೆ ಮುಖ್ಯಮಂತ್ರಿ ಅಣ್ಣಾ ಕಾರ್ಯಕ್ರಮಕ್ಕೆ ಬರಲಿ

ಸಾವಿರ ಸಾವಿರ ಯುವಕರ ಪಡೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ತಂಡಗಳನ್ನು ಕಟ್ಟಿಕೊಳ್ಳುತ್ತಿವೆ. ಅನೇಕ ಕಡೆಗಳಲ್ಲಿ ಕಾರ್ಮಿಕರು, ಆಟೋ ಚಾಲಕರು, ಕೂಲಿಗಳು, ಐಟಿ ಯುವಕ ಯುವತಿಯರು, ಬಡವರು ಶ್ರೀಮಂತರು ದೇಣಿಗಳನ್ನು ನೀಡುತ್ತಿದ್ದಾರೆ. ನಗರದೆಲ್ಲೆಡೆ ಸಂವಾದಗಳು ನಡೆಯುತ್ತಿವೆ. ಮನೆಮನೆಯಲ್ಲೂ ಚರ್ಚೆಗಳು ನಡೆಯುತ್ತಿವೆ. ಅಣ್ಣಾ ಎಂಬ ಹೆಸರೇ ಕೇಳದಿದ್ದ ಗೃಹಿಣಿಯರೆಲ್ಲ ಟಿವಿ ಮುಂದೆ ಬಂದು ಕೂಡುತ್ತಿದ್ದಾರೆ.
ನಗರದಲ್ಲಿ ಇಷ್ಟೆಲ್ಲ ಸದ್ದುಗದ್ದಲಗಳೆದ್ದಿದ್ದರೂ ಕಿವಿಗೆ ಹತ್ತಿ ತುಂಬಿಕೊಂಡು ಕೂತವರೆಂದರೆ ಕರ್ನಾಟಕದ ಹಾಲಿ ಮುಖ್ಯಮಂತ್ರಿ, ಮಾಜಿ ಮುಖ್ಯಗಳು ಸೇರಿದಂತೆ ಎಲ್ಲಾ ರಾಜಕಾರಣಿಗಳು. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಎಲ್ಲರೂ ಬೊಂಬಡಾ ಬಜಾಯಿಸುತ್ತಾರೆ. ಜೆಡಿಎಸ್ ಅಂತೂ ಶಿವಮೊಗ್ಗದವರೆಗೂ ಪಾದಯಾತ್ರೆಯನ್ನೇ ಮಾಡಿತು. ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೆಸೆಯಿರಿ ಎಂದು ಕಾಂಗ್ರೆಸ್ ಕೂಡ ಪಾದಯಾತ್ರೆ ಮಾಡಿತ್ತು.
ಆದರೆ, ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೋರಾಡುತ್ತಿರುವ ಅಗಾಧ ಶಕ್ತಿಯ ಅಣ್ಣಾ ಹಜಾರೆ ಅವರೇ ಇಲ್ಲಿಗೆ ಬಂದಾಗ ಎಲ್ಲರೂ ಬಾಯಿಗೆ ಬೀಗ ಜಡಿದು ಕುಳಿತಿದ್ದಾರೆ. ವಿದೇಶಿ ರಾಜಕಾರಣಿಗಳು ಬಂದರೆ ಸಾಷ್ಟಾಂಗ ನಮಸ್ಕಾರ ಹಾಕುವ ಇವರು ಅಟ್ಲೀಸ್ಟ್ ಅಣ್ಣಾ ಹಜಾರೆಯವರನ್ನು ಕರೆದು ಸನ್ಮಾನಿಸುವ ಮಾತಿರಲಿ, ಉಭಯ ಕುಶಲೋಪರಿ ವಿಚಾರಿಸುವ ಗೋಜಿಗೆ ಹೋಗುತ್ತಿಲ್ಲ. ಸನ್ಮಾನಗಳು ಅಣ್ಣಾಗೆ ಬೇಕಾಗಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ರಾಜಕಾರಣಿಗಳಿಗೆ ಬೇಕಾಗಿಲ್ಲ!
ನಮ್ಮ ರಾಜಕಾರಣಿಗಳಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆಯಿದ್ದರೆ, ಧೈರ್ಯವಿದ್ದರೆ ಇಂದು ಬಸವನಗುಡಿಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಭೆಗೆ ಮುಖಕ್ಕೆ ಮಫ್ಲರ್ ಸುತ್ತಿಕೊಂಡಾದರೂ ಬರಲಿ. ಇದೊಂದು ಸಾರ್ವಜನಿಕ ಸಭೆ. ಯಾರು ಬೇಕಾದರೂ ಬರಬಹುದು. ಆಮಂತ್ರಣ ಪತ್ರಿಕೆ ಯಾರಿಗೂ ನೀಡಬೇಕಾಗಿಲ್ಲ. ಭ್ರಷ್ಟಾಚಾರ ತೊಗಬೇಕು ಎಂದು ಆಶಿಸುವವರಿಗೆ ಸ್ವಾಗತ. ಕನಿಷ್ಠಪಕ್ಷ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಾದರೂ ಈ ಸಭೆಗೆ ಬಂದು ಅಣ್ಣಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವರೆ? ಎಲ್ಲಿ ದೇವೇಗೌಡ, ಎಲ್ಲಿ ಕುಮಾರಸ್ವಾಮಿ, ಎಲ್ಲಿ ಸಿದ್ದರಾಮಯ್ಯ, ಎಲ್ಲಿ ಉಗ್ರಪ್ಪ, ಎಲ್ಲಿ...(ಕ್ಷಮಿಸಿ ಎಲ್ಲರ ಹೆಸರೂ ಬರೆಯಲು ಇಲ್ಲಿ ಸ್ಥಳವಿಲ್ಲ)?












Click it and Unblock the Notifications