ಯಡಿಯೂರಪ್ಪ, ವೀರಪ್ಪನ್ ಒಂದೇ: ಕುಮಾರಸ್ವಾಮಿ ಲೇವಡಿ

ಬೆಂಗಳೂರಿನಲ್ಲಿ ಗುರುವಾರ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಇತರೆ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ಹೊಂದಾಣಿಕೆಯ ರಾಜಕಾರಣದ ಫಲವಾಗಿ ಯಡಿಯೂರಪ್ಪ ಉಳಿದಿದ್ದರೂ ಸಹ ಅವಧಿ ಪೂರ್ಣ ಮಾಡುವುದಿಲ್ಲ ಎಂದರು.
ಕಾನೂನಿನ ಚೌಕಟ್ಟಿನಿಂದ ತಪ್ಪು ಮಾಡಿದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ವೀರಪ್ಪನ್ ಸಹ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದಾನೆ. ಯಡಿಯೂರಪ್ಪ ಸಹ ಇದೇ ರೀತಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿಯೇ ಅವಧಿಗೆ ಮುನ್ನ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವ ರೀತಿಯ ಹೊಂದಾಣಿಕೆ ನಡೆದಿದೆಯೋ ಗೊತ್ತಿಲ್ಲ. ಆದರೆ ಹಗರಣಗಳಿಂದ ತುಂಬಿದ್ದ ಯಡಿಯೂರಪ್ಪ ಉಳಿಯಲು ಈ ಹೊಂದಾಣಿಕೆ ಕಾರಣವಾಗಿದೆ. ಆದರೆ ಅವಧಿಗೆ ಮುನ್ನ ಯಡಿಯೂರಪ್ಪ ತಲೆದಂಡ ಮಾತ್ರ ನಿಶ್ಚಿತವೆಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಸಣ್ಣ ಪಕ್ಷಗಳನ್ನು ಬಳಸಿಕೊಂಡು ಬಾವಿಗೆ ತಳ್ಳುತ್ತಿತ್ತು, ಆದರೆ ಈಗ ತಮ್ಮದೇ ಪಕ್ಷದ ರಾಜ್ಯ ಮುಖಂಡರನ್ನು ತಳ್ಳಿದೆ. ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಹೇಗೆ ಮುಖ ತೋರಿಸುವರೋ ಗೊತ್ತಿಲ್ಲವೆಂದು ಲೇವಡಿ ಮಾಡಿದರು.
ಪಕ್ಷದ ಮುಖಂಡರಾದ ಬಸವನಗೌಡ ಪಾಟೀಲ್ ಯತ್ನಾಳ್, ಬಸವರಾಜ ಹೊರಟ್ಟಿ, ಎ.ಬಿ. ಪಾಟೀಲ್, ವೈ.ಎಸ್.ವಿ. ದತ್ತ ಹಾಗೂ ಇತರರು ಉಪಸ್ಥಿತರಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಭೆಯ ಕೊನೆಯಲ್ಲಿ ಆಗಮಿಸಿದರು.












Click it and Unblock the Notifications