ಮಂಗಳೂರು ತೈಲಾಗಾರದಲ್ಲಿ ಸ್ಫೋಟ; 3 ಕಾರ್ಮಿಕರ ಸಾವು

ಗುರುವಾರ ಸಂಜೆ 6.30ಕ್ಕೆ ಈ ಪ್ರದೇಶದಲ್ಲಿ ಭಾರಿ ಸ್ಫೋಟ ಸಂಭವಿಸಿದ ಸದ್ದು ಕೇಳಿ ಬಂದಿದೆ. ಸ್ಫೋಟ ಎಷ್ಟು ಜೋರಾಗಿತ್ತೆಂದರೆ ಸದ್ದು ಬಜಪೆ ಪೇಟೆವರೆಗೆ ಕೇಳಿಸಿದೆ. ಸ್ಫೋಟ ನಡೆದಿರುವುದು ಸಂಗ್ರಹಾಗಾರದ ಮೇಲ್ಭಾಗದಲ್ಲಿರುವ ತ್ಯಾಜ್ಯ ಸಂಗ್ರಹ ತಾಣದಲ್ಲಿ. ಲಾರಿಯಲ್ಲಿ ತ್ಯಾಜ್ಯವನ್ನು ತಂದು ಹಾಕುವ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ತ್ಯಾಜ್ಯದಲ್ಲಿ ಸ್ಫೋಟಕ ಸೇರಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ.
ಮೃತರಲ್ಲಿ ಇಬ್ಬರು ಸ್ಥಳೀಯರಾಗಿದ್ದು , ಒಬ್ಬರು ಕಾಟಿಪಳ್ಳದ ನಿವಾಸಿ ಶಿರಾಜುದ್ದೀನ್ (25) , ಇನ್ನೊಬ್ಬರು ಬಜಪೆಯ ನಿವಾಸಿ ಎಂದು ತಿಳಿದು ಬಂದಿದೆ. ಅವರ ಹೆಸರು ತಿಳಿದಿಲ್ಲ. ಮತ್ತೊಬ್ಬರು ಕೊರಿಯಾ ದೇಶದ ಎಂಜಿನಿಯರ್ ಸಾಂಗ್ (40). ಗಾಯಾಳುಗಳು: ಲಾರೆನ್ಸ್ ಪಿರೇರಾ (32), ಸುರಕ್ಷತಾ ಎಂಜಿನಿಯರ್ ಅಬ್ದುಲ್ ಶೇಖ್ ಗನಿ (30), ಶಿವನಾಥ್ ಚೌಹಾಣ್(35) ಮತ್ತು ವಿಕ್ರಂದಾಸ್. ಇವರನ್ನು ಚಿಕಿತ್ಸೆಗಾಗಿ ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಂದ್ರಹಾಸನಗರದ ಸುತ್ತ ಮುತ್ತ ಸುಮಾರು 82 ಎಕರೆ ಪ್ರದೇಶದಲ್ಲಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಭೂಮಿಯೊಳಗೆ ಬಂಡೆಯನ್ನು ಕೊರೆದು ಸುರಂಗ ನಿರ್ಮಿಸಿ, ಅದರಲ್ಲಿ ತೈಲ ಸಂಗ್ರಹಿಸುವುದು ಈ ಯೋಜನೆಯ ಉದ್ದೇಶ. ಕೇಂದ್ರ ಸರಕಾರದ ಆಧೀನದ ಈ ಯೋಜನೆಗಾಗಿ ರಚಿಸಲಾದ ಎಸ್ಪಿವಿ ಸಂಸ್ಥೆಯೇ ISPRL. ಕಳೆದ ನಾಲ್ಕು ವರ್ಷಗಳಿಂದ ಯೋಜನೆಯ ಕಾಮಗಾರಿಗಳು ನಡೆಯುತ್ತಿದೆ. ಈಗಾಗಲೇ ಸುಮಾರು 4 ಕಿ.ಮೀ. ಉದ್ದದ ಸುರಂಗ ನಿರ್ಮಾಣಗೊಂಡಿದೆ.
ಭಾರತ ಸರಕಾರ ದೇಶದ ಮೂರು ಕಡೆಗಳಲ್ಲಿ 5 ದಶಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಸಂಗ್ರಹಿಡುವ ಯೋಜನೆ ರೂಪಿಸಿದೆ. ಯುದ್ದ ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ಬಳಸುವ ಸಲುವಾಗಿ ಇಲ್ಲಿ ತೈಲವನ್ನು ಸಂಗ್ರಹ ಮಾಡಲಾಗುತ್ತದೆ. ಮಂಗಳೂರು, ಪಾದೂರು (ಉಡುಪಿ) ಹಾಗೂ ವಿಶಾಖಪಟ್ಟಣಂಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಮಂಗಳೂರಿನಲ್ಲಿ 82 ಎಕರೆ ಜಮೀನು, ಪಾದೂರಿನಲ್ಲಿ 161 ಎಕರೆ ಜಮೀನನ್ನು ಇದಕ್ಕಾಗಿ ಮೀಸಲಿಡಲಾಗಿದೆ.












Click it and Unblock the Notifications