ಅಂಬಾನಿ ಅರಮನೆ ಮೇಲೆ ರತನ್ ಟಾಟಾ ಕೆಂಗಣ್ಣು

ಅಂಬಾನಿಯ ಶತಕೋಟಿ ವೆಚ್ಚದ ಮನೆಯ ಕುರಿತು ಟಾಟಾ ಟೀಕಿಸುತ್ತ, "ಕೆಲವರು ಯಾಕೆ ಈ ರೀತಿ ಮಾಡುತ್ತಾರೆ ಎಂದು ನನಗರ್ಥವಾಗುತ್ತಿಲ್ಲ. ಸುತ್ತಮುತ್ತಲಿನ ಪರಿವೆಯಿಲ್ಲದೇ ಎಲ್ಲರಿಗಿಂತ ಭಿನ್ನವಾಗಿ ಭಾರಿ ಅರಮನೆಯಂತಹ ಮಹಲ್ಲು ಕಟ್ಟಿಕೊಂಡು ಬದುಕುವುದು ಏತಕೆ?" ಎಂದು ಲಂಡನಿನ ದಿನಪತ್ರಿಕೆ ದಿ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಟಾಟಾ ಟೀಕಿಸಿದ್ದಾರೆ.
"ದೇಶದ ಜನರಿಗೆ ಭಾರೀ ಸಂಪನ್ಮೂಲ ಉಳ್ಳವರು ನೆರವು ನೀಡುವಂತಹ ಕಾರ್ಯ ಮಾಡಬೇಕು. ಕಾರ್ಪೋರೇಟ್ ಗಳು ಬಡವರ ಬಗ್ಗೆ ತುಸು ಯೋಚಿಸಬೇಕು" ಎಂದು ಮುಖೇಶ್ ಅರಮನೆಯನ್ನು ಟೀಕಿಸಿದ್ದಾರೆ. 2ಜಿ ತರಂಗಗುಚ್ಛ ಹಗರಣದಲ್ಲಿ ಟಾಟಾ ಕಂಪನಿಯೇ ಫಲಾನುಭವಿಯಾಗಿರುವುದು ಸೇರಿದಂತೆ ಹಲವು ವಿವಾದಗಳನ್ನು ಟಾಟಾ ಮೆತ್ತಿಕೊಂಡಿರುವಾಗ ಅಂಬಾನಿಯನ್ನು ಟೀಕಿಸಿರುವುದು ಕೆಲವರ ಹುಬ್ಬೇರಿಸುವಂತೆ ಮಾಡಿದೆ.
ಟಾಟಾ ಅಭಿಪ್ರಾಯಕ್ಕೆ ಟ್ವಿಟ್ಟರ್ ನಲ್ಲಿ ವಿವಿಧ ಪ್ರತಿಕ್ರಿಯೆ ಬಂದಿದೆ. "ಹಾಗಾದರೆ ಟಾಟಾ ಬಡವರ ಪರವಾಗಿದ್ದಾರೆಯೇ? ಅವರ ಮರ್ಸಿಡಿಸ್, ರಾಡಿಯಾ ಟೇಪ್, ಜೆಟ್, 2 ಜಿ ಪರವಾನಿಗೆ ಇವೆಲ್ಲವೂ ಬಡವರಿಗಾಗಿ ಮಾಡಿದ್ದಾರೆಯೇ? ಕಡಿಮೆ ದರಕ್ಕೆ ಬಡವರಿಗೆ ಮೊಬೈಲ್ ಸೇವೆಗಳನ್ನು ನೀಡುವ ಮುಖೇಶ್ ಅಂಬಾನಿಯೇ ಬಡವರ ಪರ" ಇತ್ಯಾದಿಗಳನ್ನು ಜನರು ಟ್ವಿಟ್ಟಿಸಿದ್ದಾರೆ. ಅಂಬಾನಿ ಕಡೆಯಿಂದ ಯಾವ ಉತ್ತರ ಬರುತ್ತದೆ ಎಂದು ಕಾದು ನೋಡಬೇಕಿದೆ.
ಅಂಬಾನಿ ಭವ್ಯ ಮನೆಯ ವಿವರ : ಜಗತ್ತಿನ ನಾಲ್ಕನೆ ಅತಿ ಶ್ರೀಮಂತ ಮುಖೇಶ್ ಅಂಬಾನಿ ಜಗತ್ತಿನ ಪ್ರಪ್ರಥಮ ಶತಕೋಟಿ (2 ಶತಕೋಟಿ ಡಾಲರ್) ವೆಚ್ಚದ ಮನೆಯೊಂದನ್ನು ಮುಂಬೈಯಲ್ಲಿ ನಿರ್ಮಿಸಿದ್ದಾರೆ. 27 ಮಹಡಿಗಳ ಈ ಮನೆ 173 ಮೀಟರ್ ಎತ್ತರವಿದೆ. ಸುಮಾರು 630 ಮಿಲಿಯನ್ ಪೌಂಡ್ ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದ್ದು, ಇಷ್ಟು ವೆಚ್ಚದ ಮನೆ ಜಗತ್ತಿನಲ್ಲೇ ಪ್ರಥಮ.
ಈ ಅರಮನೆಯಲ್ಲಿ ಅಂಬಾನಿ, ಅವರ ಪತ್ನಿ ಮತ್ತು ಮೂವರು ಮಕ್ಕಳು ವಾಸಿಸಲಿದ್ದಾರೆ. ಮನೆಯಲ್ಲಿ ವಿಶಾಲವಾದ ಜಿಮ್ ಮತ್ತು ನೃತ್ಯ ಸ್ಟುಡಿಯೊವನ್ನು ಹೊಂದಿರುವ ಆರೋಗ್ಯ ಕ್ಲಬ್ ಇದೆ. ಒಂದು ಈಜು ಕೊಳ, ಅತಿಥಿ ಕೋಣೆ, ವಿವಿಧ ರೀತಿಯ ಅಂಗಣಗಳು, 50 ಮಂದಿ ಕುಳಿತುಕೊಳ್ಳಬಹುದಾದ ಸಿನೆಮಾ ಮಂದಿರ ಮನೆಯೊಳಗೇ ಇದೆ.
ಮನೆಯ ಛಾವಣಿಯಲ್ಲಿ ಮೂರು ಹೆಲಿಪ್ಯಾಡ್‌ಗಳಿದ್ದು, ಕೆಳಗಿನ ಅಂತಸ್ತಿನಲ್ಲಿ ಸುಮಾರು 160 ವಾಹನಗಳನ್ನು ನಿಲ್ಲಿಸುವ ವಿಶಾಲವಾದ ಸ್ಥಳಾವಕಾಶವಿದೆ. ಅತಿಥಿಗಳನ್ನು ಪ್ರಾಂಗಣದಿಂದ ಕಾರ್ಯಕ್ರಮಗಳು ನಡೆಯುವ ವಿವಿಧ ಮಹಡಿಗಳಿಗೆ ತಲುಪಿಸಲು ಕಟ್ಟಡದಲ್ಲಿ 9 ಲಿಫ್ಟ್‌ಗಳಿವೆ. ಕಟ್ಟಡದ ಮೇಲಿನ ಮಹಡಿಯಲ್ಲಿ 53ರ ಹರೆಯದ ಉದ್ಯಮಿ ಮತ್ತು ಅವರ ಕುಟುಂಬ ಸದಸ್ಯರಿಗೆ ನಗರ ಮತ್ತು ಸಮುದ್ರದ ಸವಿಯನ್ನು ವೀಕ್ಷಿಸಲು ಅನುಕೂಲವಿದೆ.
ಕಟ್ಟಡವು 37,000 ಚದರ ಮೀಟರ್ ವಿಸ್ತಾರವಿದ್ದು, ಇದು ವೆರ್ಸಲಿಸ್ ಅರಮನೆಗೂ ದೊಡ್ಡದಾಗಿದೆ. ಇಷ್ಟು ದೊಡ್ಡ ಮನೆಯನ್ನು ಸರಿಯಾಗಿ ನಿರ್ವಹಿಸಲು ಸುಮಾರು 600 ಸಿಬ್ಬಂದಿ ಸೇವೆಗಿದ್ದಾರೆ. ಈ ಮನೆಯನ್ನು ನಿರ್ಮಿಸಲು 44 ಮಿಲಿಯನ್ ಪೌಂಡ್‌ನಲ್ಲಿ ನಿರ್ಮಿಸಲು ಅಂದಾಜಿಸಲಾಗಿತ್ತು. ಆದರೆ ಮುಂಬೈಯ ಪ್ರಮುಖ ಕೇಂದ್ರದಲ್ಲಿ ಭೂಮಿ ಮತ್ತು ಆಸ್ತಿ ವೌಲ್ಯ ಆ ಅಂದಾಜಿನಿಂದ 15 ಪಟ್ಟು ಅಧಿಕ ವೌಲ್ಯವನ್ನು ಈ ಮನೆಗೆ ನೀಡಿದೆ. ಹೀಗಾಗಿ ಈ ಮನೆಯ ನಿರ್ಮಾಣ ವೆಚ್ಚ 630 ಮಿಲಿಯನ್ ಪೌಂಡ್ ಆಗಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications