ನಮ್ಮ ದುಡ್ಡಿನಲ್ಲಿ ಮಜಾಮಾಡುವ ಶಾಸಕರ ಮೇಲೆ ಕೇಸ್

ಬರೀ 114 ಜನ ಒಂದು ಸಾರಿ ನವದೆಹಲಿಗೆ ವಿಮಾನದಲ್ಲಿ ಪಯಣ ಬೆಳೆಸಿದರೆ 20 ಲಕ್ಷ ರು. ಬೇಕಾಗುತ್ತದೆ. ಹೋಗಿ ಬಂದು ಮಾಡಿದರೆ ಇನ್ನಿಪ್ಪತ್ತು ಲಕ್ಷ. ಇದೆಲ್ಲ ಯಾರ ದುಡ್ಡು? ಇವರ ರಾಜಕೀಯ ದೊಂಬರಾಟಗಳಿಂದ ಆಗುವ ಖರ್ಚು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಆಗುವ ನಷ್ಟಗಳ ಲೆಕ್ಕ ಇಡುವವರು ಯಾರು? ಒಂದು ವೇಳೆ ಬಿಜೆಪಿ ಅಥವಾ ಇನ್ನಾವುದೇ ರಾಜಕೀಯ ಪಕ್ಷವೇ ಈ ಎಲ್ಲ ಖರ್ಚುವೆಚ್ಚಗಳನ್ನು ನೋಡಿಕೊಂಡರೂ, ಕೊನೆಗೆ ತೂತು ಬೀಳುವುದು ಯಾರ ಜೇಬಿಗೆ? ಇದೆಲ್ಲದರ ಬಗ್ಗೆ ಕನಿಷ್ಠ ಅರಿವು, ಶ್ರೀಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ನಮ್ಮ ಪ್ರತಿನಿಧಿಗಳಿಗೆ ಇದೆಯಾ? ಹೋಗಲಿ, ಈ ಎಲ್ಲ ಲೆಕ್ಕಾಚಾರಗಳ ಬಗ್ಗೆ ಜನಸಾಮಾನ್ಯರಿಗಾದರೂ ತಿಳಿವಳಿಕೆ ಇದೆಯಾ? [ಯಡಿಯೂರಪ್ಪ vs ಭಾರದ್ವಾಜ್]
ಉತ್ತರ ಮಾತ್ರ ಯಾರಿಗೂ ಗೊತ್ತಿಲ್ಲ. ಉತ್ತರ ಕೊಡುವ ಸಂಯಮ ಮತ್ತು ಅವಶ್ಯಕತೆ ನಮ್ಮ ರಾಜಕಾರಣಿಗಳೂ ಇಲ್ಲ. ಕಾಮನ್ ವೆಲ್ತ್ ಗೇಮ್ಸ್ ಹಗರಣ, 26 ತರಂಗಗುಚ್ಛ ಹಗರಣಗಳಿಗೆ ಬಿರಡೆ ಹಾಕುವ ಅಥವಾ ಒಂದು ಚುನಾವಣೆ ನಡೆದರೆ ನೀರಿನಂತೆ ಪೋಲಾಗುವ ಹಣಕ್ಕೆ ಅಣೆಕಟ್ಟುವ ಮಾತು ಒತ್ತಟ್ಟಿಗಿರಲಿ, ನಮ್ಮ ರಾಜಕಾರಣಿಗಳು ಓಡಾಡುವ ಖರ್ಚುಗಳನ್ನು ತಾವೇ ನೋಡಿಕೊಂಡರೆ ಬೊಕ್ಕಸಕ್ಕೆ (ನಮ್ಮ ಹಣ) ಎಷ್ಟೋ ಉಳಿತಾಯವಾಗುತ್ತದೆ. ಇನ್ನು ಅವರಿಗೆ ಸಿಗುವ ಸೌಲಭ್ಯಗಳು, ಟೇಬಲ್ ಕೆಳಗಿನ ವ್ಯವಹಾರಗಳು, ಗಳು.. ಗಳು.. ಗಳು.. ಈ ಗಳುಗಳಿಗೆ ಲೆಕ್ಕವೇ ಇಲ್ಲ.
ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ 71 ರು. ದಾಟಿದೆ. ಹಾಲು, ಹಣ್ಣು, ತರಕಾರಿ, ಬಸ್ ಸಾರಿಗೆ, ಆಹಾರ ಧಾನ್ಯ, ವಾಹನ ಸಾಲ, ಮನೆ ಸಾಲದ ಇಎಂಐ... ಕೊನೆಗೆ ಒಂದು ಮೊಳ ಮಲ್ಲಿಗೆ ಹೂವಿನ ಬೆಲೆ ಕೂಡ ಬಡವರ ಕಣ್ಣೀರನ್ನು ಕಪಾಳಕ್ಕೆ ತರಿಸುತ್ತಿದೆ. ಶ್ರೀಮಂತರರು ಶ್ರೀಮಂತರಾಗಿಯೇ ಇರುತ್ತಾರೆ, ಬಡವರು ಬಡತನದ ರೇಖೆಗಿಂತ ಕೆಳಗಡೆಯೇ ಇರುತ್ತಾರೆ. ಅಯ್ಯೋ ಮಗಳ ಮದುವೆ ಬರುವ ಹೊತ್ತಿಗೆ ಬಂಗಾರದ ಬೆಲೆ ಎಷ್ಟಾಗಿರುತ್ತೋ ಈಗಲೇ ಕೊಂಡರೆ ಒಳ್ಳೆಯದೆಂದು ಚಿನ್ನ ಕೊಳ್ಳಲು ದುಂಬಾಲು ಬೀಳುತ್ತಾರೆ. ಬೇಡಿಕೆ ಜಾಸ್ತಿಯಾದಂತೆಲ್ಲ ಚಿನ್ನದ ಬೆಲೆಯೂ ಮೇಲೇರುತ್ತಾ ಸಾಗುತ್ತದೆ. ಲೈಫು ಇಷ್ಟೇನೆ!
ತಾವು ಆರಿಸಿ ಬಂದ ವಿಧಾನಸಭಾ ಕ್ಷೇತ್ರಗಳನ್ನು ಮರೆತು, ಸದಾ ರೆಸಾರ್ಟ್ ರಾಜಕೀಯದಲ್ಲಿ ಮುಳುಗಿ ಪ್ರಜಾಪ್ರಭುತ್ವದ ಪ್ರಹಸನ ಮಾಡುತ್ತಿರುವ ಎಂಎಲ್ಎಗಳ ಸಂತತಿ ವಿರುದ್ಧ ತಿರುಗಿ ಬೀಳುವ ಶಕ್ತಿ ಯಾರಿಗಿದೆ? ಇದಕ್ಕೆಲ್ಲಾ ಕೊನೆ ಇಲ್ಲವೆ? ಯಾರಾದರೂ ಮಹಾನುಭಾವರು ಮುಂದೆ ಬಂದು ಹೈಕೋರ್ಟಿನಲ್ಲಿ, ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಚುನಾಯಿತ ಶಾಸಕರ ಕೊಬ್ಬನ್ನು ಇಳಿಸಬೇಕಾಗಿದೆ? ಇಂಥವರು ಯಾರಾದರೂ ಇದ್ದಾರಾ ಇಲ್ಲಿ? ಈ ಕನ್ನಡ ನಾಡಿನಲ್ಲಿ?











Click it and Unblock the Notifications