ಬಿಜೆಪಿಯಿಂದ ರಾಜ್ಯಾದ್ಯಂತ ರಾಜ್ಯಪಾಲ ಹಠಾವೋ ಚಳವಳಿ

ಇಷ್ಟು ಮಾತ್ರವಲ್ಲ, ಇಂದು ದೆಹಲಿಯಲ್ಲಿ ರಾಷ್ಟ್ರಪತಿಗಳ ಎದುರಿಗೆ 114 ಶಾಸಕರು, ಸಂಸದರು, ಹಿರಿಯ ನಾಯಕರು ಪರೇಡ್ ನಡೆಸಿದ ನಂತರ, ಬೆಂಗಳೂರಿಗೆ ಮೇ 18ರಂದು ವಾಪಸ್ ಬಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಎದುರಿಗೂ ಪರೇಡ್ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಇಂದು ಸುಡುತ್ತಿರುವ ಬಿಜೆಪಿ ನಾಯಕರ ಪ್ರತಿಕೃತಿಗೆ ಪೊರಕೆ ಸೇವೆ ಮಾಡಿದ ಕಾಂಗ್ರೆಸ್ ಮಹಿಳೆಯರನ್ನು ಕಂಡ ರಾಜಭವನದ ರಸ್ತೆ, ನಾಳೆ ಬಿಜೆಪಿ ಶಾಸಕರಿಂದ ಗಿಜಿಗುಡಲಿದೆ. ರಾಜಭವನದ ಕಸ ಗುಡಿಸುವವರಿಗೆ ಕೈತುಂಬ ಕೆಲಸ.
ಏಕಾಂಗಿ ರಾಜ್ಯಪಾಲ : ವಿಧಾನಸಭೆಯನ್ನು ಅಮಾನತಿನಲ್ಲಿಡಲು ವಿಶೇಷ ವರದಿ ಕಳಿಸಿದ್ದರೂ ಕೇಂದ್ರದಿಂದ ಅವಗಣನೆಗೆ ಗುರಿಯಾಗಿರುವ ಮತ್ತು ಬಿಜೆಪಿಯವರಿಗಂತೂ ಬೇಡವೇ ಬೇಡವಾಗಿರುವ 74ರ ಬರ್ತಡೇ ಬಾಯ್ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಹೂಗುಚ್ಛ ಅರ್ಪಿಸಲು ಬಂದವರು ಬೆರಳೆಣಿಕೆಯ ಮಂದಿ ಮಾತ್ರ. ದೇವೇಗೌಡ, ಸಿದ್ದರಾಮಯ್ಯ, ಜಿ ಪರಮೇಶ್ವರ್ ಬಂದು ಶುಭಹಾರೈಸಿ ವಾಪಸಾದರು. ಅಸಂಖ್ಯ ಹೂಗುಚ್ಛಗಳನ್ನು ಇಸಿದುಕೊಂಡು ಬಂದವರಿಗೆಲ್ಲ ಸಿಹಿ ಹಂಚಬೇಕಿದ್ದ ರಾಜ್ಯಪಾಲರು ಸದ್ದುಗದ್ದಲ, ಸಂತಸ ಸಡಗರವಿಲ್ಲದೆ ದಿನವನ್ನು ಕಳೆದಿದ್ದಾರೆ.
ಪಕ್ಷೇತರ ಶಾಸಕರಾದ ಪಿಎಂ ನರೇಂದ್ರಸ್ವಾಮಿ ಮತ್ತು ಶಿವರಾಜ್ ತಂಗಡಗಿಯವರು ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅನರ್ಹರಾಗಿದ್ದ 11 ಬಿಜೆಪಿ ಶಾಸಕರು ಅರ್ಹಗೊಂಡನಂತರ ಬಿಜೆಪಿಗೆ ಬೆಂಬಲ ನೀಡಿದ್ದರೆ, ಪಕ್ಷೇತರರು ಮಾತ್ರ ತಟಸ್ಥರಾಗಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಇವರಿಬ್ಬರು ಬಿಜೆಪಿ ಶಾಸಕರನ್ನು ಹೀನಾಯವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಉಳಿದ ಮೂವರ ಸುದ್ದಿಯಿಲ್ಲ.
ದೆಹಲಿಯಲ್ಲಿ ಪರೇಡ್ : ವಿದೇಶದಲ್ಲಿ ಪ್ರವಾಸವಿರುವ ಐವರು, ಮದುವೆಗೆಂದು ಗೈರಾಗಿರುವ ಇಬ್ಬರು ಶಾಸಕರನ್ನು ಹೊರತುಪಡಿಸಿ 114 ಬಿಜೆಪಿ ಶಾಸಕರು ಇಂದು ಸಂಜೆ ರಾಷ್ಟ್ರಪತಿ ಭವನಕ್ಕೆ ತೆರಳಿ ಪ್ರತಿಭಾ ಪಾಟೀಲ್ ಅವರು ಎದುರಿಗೆ ತಮ್ಮ ಬಲವನ್ನು ತೋರಿಸಿದರು. ಇವರೊಂದಿಗೆ ಹಿರಿಯ ಬಿಜೆಪಿ ನಾಯಕರಾದ ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ಅನಂತ್ ಕುಮಾರ್ ಮತ್ತಿತರ ಸಂಸದರು ಪಾಟೀಲರನ್ನು ಭೇಟಿ ಮಾಡಿ ರಾಜ್ಯಪಾಲರ ವಿರುದ್ಧ ಅಹವಾಲು ಸಲ್ಲಿಸಿದರು.
ಇಷ್ಟೆಲ್ಲ ಬೆಳವಣಿಗೆ ನಡೆದಿದ್ದರೂ ಮುಂದೆ ಏನಾಗುವುದೋ ಏನೋ ಎಂಬ ಅನಿಶ್ಚಿತತೆ ಕಾಡುತ್ತಿದೆ. ರಾಜ್ಯಪಾಲರ ವರದಿಯನ್ನು ಕೇಂದ್ರ ಅಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿರದಿದ್ದರೂ ರಾಜ್ಯಮಟ್ಟದಲ್ಲಿ, ರಾಜಧಾನಿಯಲ್ಲಿ ನಾನಾ ಬಗೆಯ ಚಳವಳಿಗಳು ನಡೆಯುತ್ತಿವೆ. ರಾಜ್ಯಪಾಲರನ್ನು ಹಿಂದಕ್ಕೆ ಕರೆಯಿಸಲು ರಾಷ್ಟ್ರಪತಿಗಳ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಬಿಜೆಪಿ ಶರಣಾಗಿದೆ. ಇನ್ನು ರಾಜ್ಯಾದ್ಯಂತ ಭಾರದ್ವಾಜ್ ಹಠಾವೋ ಚಳವಳಿ ಮಾಡುವ ಕಾರ್ಯಕರ್ತರಿಗೆ ನಾಯಕರ ಅಣತಿಯಂತೆ ನಡೆದುಕೊಳ್ಳುವುದಷ್ಟೇ ಕೆಲಸ. ತೊಂದರೆಗೆ ಸಿಲುಕುವರು ಮತ್ತೆ ಶ್ರೀಸಾಮಾನ್ಯರೆ. [ದಟ್ಸ್ ಕನ್ನಡ ವಾರ್ತೆ]











Click it and Unblock the Notifications