ನಿಮಗೆ ಇವ್ರು ಬೇಕೋ, ನಾನು ಬೇಕೋ: ಭಾರದ್ವಾಜ್ ಧಮಕಿ

ಹಾಗೆ ನೋಡಿದರೆ ಸಾಮಾನ್ಯವಾಗಿ ರಾಜ್ಯಪಾಲರೊಬ್ಬರ ವರದಿಯ ಬಗ್ಗೆ ಅದೂ, ಸರಕಾರವನ್ನು ಕೆಡವಿ ಎಂಬ ಸಂದೇಶಕ್ಕೆ ಪ್ರತಿಕ್ರಿಯಿಸುವುದು ಕೇಂದ್ರ ಸರಕಾರಕ್ಕೆ ಕಷ್ಟವೇನೂ ಅಲ್ಲ. ಒಂದು ಅಥವಾ ಎರಡನೇ ದಿನಕ್ಕೆ ಸರಕಾರವನ್ನು ಖಲಾಸ್ ಎನಿಸಬಹುದು. ಆದರೆ ಭಾರದ್ವಾಜ್ ನಡೆ ಹಾಗಿಲ್ಲ.
ಯಾವುದೇ ರಾಜ್ಯದಲ್ಲಿ ಕಾನೂನು, ಸುವ್ಯಸವ್ಥೆ ಕುಸಿದಿದೆ ಎಂದೋ ಅಥವಾ ಸಂವಿಧಾನಾತ್ಮಕವಾಗಿ ಅಲ್ಪಮತಕ್ಕೆ ಬಂದಿದೆ ಎಂದಾದರೆ ರಾಜ್ಯಪಾಲರ ವರದಿಯನ್ನು ಔಪಚಾರಿಕವಾಗಿ ಪರಿಗಣಿಸಿ, ಕೇಂದ್ರವು ರಾಷ್ಟ್ರಪತಿ ಆಳ್ವಿಕೆಗೆ ತತ್ ಕ್ಷಣ ಅಸ್ತು ಎನ್ನಬಹುದು. ಆದರೆ ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಹಾಗಾಗಿಯೇ ಭಾರದ್ವಾಜ್ ವರದಿ ಕೇಂದ್ರಕ್ಕೆ ಬಿಸಿತುಪ್ಪವಾಗಿದೆ.
ಆದರೆ ಭಾರದ ಧ್ವಜ ಅಲುಗಾಡುತ್ತಿಲ್ಲ. ಪುಣ್ಯಾತ್ನ ತನ್ನ ಪಟ್ಟನ್ನು ಸಡಿಲಿಸಲು ಬಿಲ್ಕುಲ್ ಒಪ್ಪುತ್ತಿಲ್ಲ. ಯಡಿಯೂರಪ್ಪ ಸರಕಾರ ಪತನವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಇವಯ್ಯ, ತನ್ನ ವರದಿಯನ್ನು ಆಧರಿಸಿ ಸರಕಾರವನ್ನು ವಜಾಗೊಳಿಸದಿದ್ದರೆ ನಾನೇ ರಾಜೀನಾಮೆ ಒಗಾಯಿಸಿ ವಾಪಸಾಗುವೆ ಎಂದು ಕೇಂದ್ರ ಸರಕಾರವನ್ನು ಬೆದರಿಸುತ್ತಿದ್ದಾರಂತೆ. [ಕೆಪಿಎಲ್ ಕೂಟ]
ಕಾಂಗ್ರೆಸ್ ಮೂಲಗಳು ಈ ಬೆಳವಣಿಗೆಯನ್ನು ಖಚಿತಪಡಿಸಿದ್ದು, ಈ ಕಾರಣಕ್ಕಾಗಿಯೇ ಆತನ ವರದಿ ಬಗ್ಗೆ ಕೇಂದ್ರವು ಯಾವುದೇ ನಿರ್ಣಯ ತೆಗೆದುಕೊಳ್ಳದೆ ಒದ್ಲಾಡುತ್ತಿದ್ದೆಯಂತೆ. ಆದರೆ ಭಾರದ್ವಾಜ್ ಈಗಾಗಲೇ ರಾಜ್ಯ ಕಾಂಗ್ರೆಸ್ ಗೆ ಸಾಕಷ್ಟು ಡ್ಯಾಮೇಜ್ ಮಾಡಿ ಆಗಿದೆ.
ಒಂದು, ವರದಿಯನ್ನು ಕೇಂದ್ರ ಸರಕಾರ ಒಪ್ಪಿದರೆ ಯಡಿಯೂರಪ್ಪಗೆ ಅನುಕಂಪದ ಅಲೆ ಕಟ್ಟಿಟ್ಟಬುತ್ತಿ. ಇನ್ನು ವರದಿಯನ್ನು ಅಂಗೀಕರಿಸದಿದ್ದರೆ... ಈಗಾಗಲೇ ಪಕ್ಷದಲ್ಲಿನ ಭಿನ್ನಮತವನ್ನು ಸಾಕಷ್ಟು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಯಡಿಯೂರಪ್ಪ ಅವರು ಮುಂದೆ ಈ ವರದಿಯನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡು ಮತದಾರರ ಮುಂದೆ ಬೊಂಬಡಾ ಹೊಡೆಯಬಹುದು.












Click it and Unblock the Notifications