ಲೊಕೇಶನ್ ಶಿಫ್ಟ್: ರಾಜಭವನದಲ್ಲಿ ನಾಳೆ ಶಾಸಕರ ಪೆರೇಡ್

ಯಡಿಯೂರಪ್ಪ ಸರಕಾರದ ವಜಾ ವಿಷಯದಲ್ಲಿ ಕೇಂದ್ರ ಸರಕಾರವು ಯಾವುದೇ ತೀರ್ಮಾನಕ್ಕೆ ಬಾರದೆ 'ನೀವು, ನೀವೇ ಬಗೆಹರಿಸಿಕೊಳ್ಳಿ' ಎಂದು ಬಿಜೆಪಿ ಮತ್ತು ರಾಜ್ಯಪಾಲ ಭಾರದ್ವಾಜ್ ಗೆ ಪರೋಕ್ಷವಾಗಿ ಸೂಚಿಸಿದಂತಿದೆ. ಆದ್ದರಿಂದ ಲೊಕೇಶನ್ ಶಿಫ್ಟ್ ಮಾಡಿ ರಾಜ್ಯಪಾಲರ ಅಂಗಳದಲ್ಲಿ ಶಾಸಕರ ಪೆರೇಡ್ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಎಸ್. ಈಶ್ವರಪ್ಪ ಅವರು ದೆಹಲಿಯಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಎಲ್ಲ ಶಾಸಕರು ಬುಧವಾರ ಬೆಳಗ್ಗೆಯೇ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ನೇರವಾಗಿ ರಾಜಭವನಕ್ಕೆ ತೆರಳಿ, ರಾಜ್ಯಪಾಲರ ಅಂಗಳದಲ್ಲಿ ಆಡಳಿತಾರೂಢ ಸರಕಾರದ ಬಲವನ್ನು ಪ್ರದರ್ಶಿಸುವುದಾಗಿ ಅವರು ಹೇಳಿದ್ದಾರೆ.
ಪೂರ್ವ ನಿರ್ಧಾರದಂತೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ಸಂಜೆ 5.30ಕ್ಕೆ ಬಿಜೆಪಿ ತನ್ನ ಶಾಸಕರನ್ನು ಪೆರೇಡ್ ಮಾಡಲಿದೆ. ಆದರೆ ಇದರಿಂದ ಏನೂ ಉಪಯೋಗವಿಲ್ಲ ಎಂಬುದು ಬಿಜೆಪಿಗೆ ಅನಿಸತೊಡಗಿದೆ. ಆದ್ದರಿಂದ ಈ ಕ್ರಮ ಅನಿವಾರದ್ಯವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.











Click it and Unblock the Notifications