ಮಲ್ಲಿಕಾರ್ಜುನ ಖರ್ಗೆ ಪ್ರಾಣಾಪಾಯದಿಂದ ಪಾರು

ಅದೃಷ್ಟವಶಾತ್ ಖರ್ಗೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಚಾಲಕನಿಗೆ ದಿಢೀರ್ ಎಂದು ಆರೋಗ್ಯದಲ್ಲಿ ಏರುಪೇರಾಗಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಗುಲ್ಬರ್ಗದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಖರ್ಗೆ "ಅದೃಷ್ಟವಶಾತ್ ತಾನು ಜೀವಂತವಾಗಿ ಉಳಿದಿದ್ದೇನೆ" ಎಂದರು. ಘಟನೆಯನ್ನು ಅವರು ವಿವರಿಸಿದ್ದು ಹೀಗೆ.
ಆಂಧ್ರಪ್ರದೇಶ ಸರಕಾರದ ಪ್ರೊಟೋಕಾಲ್ ವಿಭಾಗಕ್ಕೆ ಸೇರಿದ್ದ ಚಾಲಕ, ಖರ್ಗೆ ಅವರನ್ನು ಏರ್‌ಪೋರ್ಟ್‌ನಿಂದ ಗುಲ್ಬರ್ಗಕ್ಕೆ ಕರೆದೊಯ್ಯುತ್ತಿದ್ದ. ಖರ್ಗೆ ಅವರಿಗೆ ಭದ್ರತೆ ಒದಗಿಸಲು ಗುಲ್ಬರ್ಗದ ಎರಡು ಕಾರುಗಳು ಅವರನ್ನು ಹಿಂಬಾಲಿಸುತ್ತಿದ್ದವು. ಪಟಾನ್‌ಚೆರು ಹಾದುಹೋಗುತ್ತಿದ್ದಂತೆ, ಕಾರಿನ ಚಾಲಕನ ವರ್ತನೆಯಲ್ಲಿ ದಿಢೀರ್ ಬದಲಾವಣೆ ಕಂಡುಬಂತು. ಆತ ಕಾರನ್ನು ಅಡ್ಡಾದಿಡ್ಡಿಯಾಗಿ ಓಡಿಸಿದ.
"ಅವನನ್ನು ಎಳೆದು ನಿಧಾನಕ್ಕೆ, ಸರಿಯಾಗಿ ಓಡಿಸುವಂತೆ ಹೇಳಿದೆ. ಸ್ಪೀಡ್ ಕೊಂಚ ಕಡಿಮೆ ಮಾಡಿದರೂ ಬಳಿಕ ಮತ್ತೆ ಕಾರನ್ನು ವೇಗವಾಗಿ ಓಡಿಸಿದ. ನಮ್ಮ ಕಾರಿನ ವೇಗಕ್ಕೆ ಎದುರುಗಡೆಯಿಂದ ಬರುತ್ತಿದ್ದ ಟ್ರಕ್ ಕೂಡ ಪಕ್ಕಕ್ಕೆ ಸರಿಯಿತು. ಬಳಿಕ ಕಾರೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾವು ಪ್ರಯಾಣಿಸುತ್ತಿದ್ದ ಕಾರು ರಸ್ತೆಯಿಂದ ಪಕ್ಕಕ್ಕೆ ಸರಿದು ಹಳ್ಳಕ್ಕೆ ಬಿತ್ತು." ಬಳಿಕ ಕಾರಿನ ಚಾಲನಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವನ ರಕ್ತದ ಒತ್ತಡ ಅಧಿಕವಾಗಿದ್ದು ಸೂಕ್ತ ಚಿಕಿತ್ಸೆ ಕೊಡಿಸಲಾಯಿತು ಎಂದು ಖರ್ಗೆ ವಿವರಿಸಿದರು. (ಏಜೆನ್ಸೀಸ್)












Click it and Unblock the Notifications