ಮೇ 16ರಿಂದ ಗಣಿ ಸರ್ವೆ, ಬಳ್ಳಾರಿಯಲ್ಲಿ ಏರಿದ ಕಾವು

ಬಳ್ಳಾರಿ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಅರಣ್ಯ ಇಲಾಖೆಯ ಪಿಸಿಸಿಎಫ್ ದೀಪಕ್ ಶರ್ಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಪಾಲ್ಗೊಂಡಿದ್ದರು. ಬಳ್ಳಾರಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಬಿ.ಎನ್. ಶಂಕರ್, ಹೊಸಪೇಟೆ ಸಹಾಯಕ ಆಯುಕ್ತ ಮಂಜುನಾಥ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ 30ಕ್ಕೂ ಹೆಚ್ಚಿನ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಡಿಜಿಪಿಎಸ್ ಮತ್ತು ಟೋಟಲ್ ಸ್ಟೇಷನ್ ತಂತ್ರಜ್ಞಾನವನ್ನು ಬಳಕೆ ಮಾಡಿ ಗಣಿಗಳ ಸರ್ವೆಯನ್ನು ನಡೆಸಲಾಗುತ್ತದೆ. ಸರ್ವೆಯನ್ನು 10 ತಂಡಗಳು ನಿರ್ವಹಿಸಲಿವೆ. ಪ್ರತಿ ತಂಡಕ್ಕೆ ಓರ್ವ ನೋಡಲ್ ಅಧಿಕಾರಿ ನೇಮಕವಾಗಲಿದ್ದಾರೆ. ಈ ಅಧಿಕಾರಿ ಆಯಾ ತಂಡಗಳ ಸರ್ವೆಯ ಸಮಗ್ರ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಸರ್ವೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳ ಕಂದಾಯ, ಅರಣ್ಯ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸರ್ವೆ ಸಿಬ್ಬಂದಿಯನ್ನು ಕರೆಸಲಾಗುತ್ತದೆ. 100ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ ಸರ್ವೆಯನ್ನು ನಿರ್ವಹಿಸಲಿದೆ.
ಆತಂಕ, ನಿಗೂಢತೆ : ಸೋಮವಾರದಿಂದ ಪ್ರಾರಂಭವಾಗಲಿರುವ 99 ಗಣಿಗಳ ಸರ್ವೆ ಕುರಿತು ಗಣಿ ಮಾಲೀಕರು ಮತ್ತು ಉದ್ಯಮದ ಮೇಲೆ ಪ್ರತ್ಯಕ್ಷವಾಗಿ - ಪರೋಕ್ಷವಾಗಿ ಅವಲಂಬನೆ ಆದವರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಕೆಲ ಗಣಿಗಳ ಭವಿಷ್ಯ ಸಂಪೂರ್ಣ ನಿಗೂಢವಾಗಿದೆ. ಬಂಡವಾಳಗಾರರು, ಉದ್ಯಮಿಗಳು ಮತ್ತು ಕೆಲ ಅಧಿಕಾರಿಗಳಲ್ಲಿ ಸರ್ವೆ ತಲ್ಲಣಗಳನ್ನು ಸೃಷ್ಟಿಸಿದೆ.












Click it and Unblock the Notifications