ಅರುಣಾಚಲ ಮುಖ್ಯಮಂತ್ರಿ ಸೇರಿ ಐವರ ಶವ ಪತ್ತೆ

ಅರುಣಾಚಲದ ತವಾಂಗ್ ಬಳಿ ಜಂಗ್ ನೀರಿನ ಝರಿ ಬಳಿಯಿರುವ ಲೊಬೊತಾಂಗ್ ಎಂಬಲ್ಲಿ ಹೆಲಿಕಾಪ್ಟರ್ ಅವಶೇಷ ಪತ್ತೆಯಾಗಿದ್ದು, ದೇಹಗಳನ್ನು ಭಾರತೀಯ ಸೇನೆ ವಶಕ್ಕೆ ತೆಗೆದುಕೊಂಡಿದೆ.
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ದೋರ್ಜಿ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮೃತರಾಗಿರುವುದು ಖಚಿತ. ದೋರ್ಜಿ ಅವರ ನೆಂಟರೂ ಹಾಗೂ ಅರುಣಾಚಲ ಪ್ರದೇಶ ಪಂಚಾಯಿತಿ ಮುಖಂಡರೂ ಆಗಿರುವ ಥುಪ್ಟೆನ್ ಎಂಬುವವರು ಡೋರ್ಜಿ ಅವರ ಕಳೇಬರವನ್ನು ಗುರುತಿಸಿ ಸಾವು ಖಚಿತಪಡಿಸಿದರೆಂದು ಕೇಂದ್ರ ಸಚಿವ ಬಿ ಕೆ. ಹಂಡಿಕ್ ಬುಧವಾರ ಮಧ್ಯಾಹ್ನ ತಿಳಿಸಿದರು.
ದೋರ್ಜಿ ಜತೆಗೆ ನಾಪತ್ತೆ ಆಗಿದ್ದ ಇನ್ನಿತರ ಆರು ಪ್ರಯಾಣಿಕರ ಪೈಕಿ ನಾಲಕ್ಕು ಶವಗಳು ದೊರೆತಿವೆ. ಅವು ಸುಟ್ಟು ಕರಕಲಾಗಿರುವುದರಿಂದ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದೆ. ಕಾಪ್ಟರ್ ನಲ್ಲಿದ್ದ ಇನ್ನಿಬ್ಬರ ಬಗ್ಗೆ ಇದುವರೆವಿಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ಮಧ್ಯೆ ಪವನ್ ಹಂಸ್ ಹೆಲಿಕಾಪ್ಟರುಗಳ ಬಳಕೆಯನ್ನು ನಾಗರಿಕ ವಿಮಾನಯಾನ ಇಲಾಖೆ ನಿಷೇಧಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಾಪ್ಟರ್ ನಲ್ಲಿದ್ದವರು ಮುಖ್ಯಮಂತ್ರಿ ದೋರ್ಜಿ ಖಂಡು, ಅವರ ಸಹೋದರಿ ಹಾಗೂ ತವಾಂಗ್ ಶಾಸಕಿ ತ್ಸವೋಂಗ್ ಧೋಂಪಡ್, ಕ್ಯಾಪ್ಟನ್ ಜೆ ಎಸ್ ಬಬ್ಬರ್, ಕ್ಯಾಪ್ಟನ್ ಕೆ ಎಸ್ ಮಾಲಿಖ್, ಖಂಡು ಅವರ ಭದ್ರತಾಕಾರಿ ಯಶಿ ಛೋಂಡಕ್ ಮತ್ತು ಯೇಶಿ ಲಮು.
ಶನಿವಾರ ಬೆಳಗ್ಗೆ 9.56ಕ್ಕೆ ತವಾಂಗ್ ಬಿಟ್ಟ ಖಂಡು ಪ್ರಯಾಣಿಸುತ್ತಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ 11.30ಕ್ಕೆ ಇಟಾನಗರದಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ ತವಾಂಗ್ ಬಿಟ್ಟ 20 ನಿಮಿಷಗಳಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತ್ತು. ಹವಾಮಾನ ವೈಪರೀತ್ಯದಿಂದ ಶೋಧ ಕಾರ್ಯಕ್ಕೆ ತೀವ್ರ ಅಡಚಣೆಯಾಗಿತ್ತು. ಇಸ್ರೋ ನೆರವನ್ನು ಪಡೆದ ನಂತರ ಹೆಲಿಕಾಪ್ಟರ್ ಬಿದ್ದಿರಬಹುದಾದ ಮೂರು ಸ್ಥಳಗಳನ್ನು ಗುರುತಿಸಲಾಗಿತ್ತು. 30 ಸೇನಾ ತುಕಡಿಗಳಿಂದ ಶೋಧ ಕಾರ್ಯಾಚರಣೆ ನಡೆದಿತ್ತು.












Click it and Unblock the Notifications