ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರ ಮಳೆ ಬಿಬಿಎಂಪಿಯನ್ನು ಬಡಿದೆಬ್ಬಿಸಲಿ

By Prasad
|
Google Oneindia Kannada News

Heavy rain lashes Bangalore
ಬೆಂಗಳೂರು, ಏ. 23 : ಇನ್ನೂ ಬೇಸಿಗೆಕಾಲ, ಮಳೆಗಾಲ ಇನ್ನೂ ದೂರವಿದೆ ಎಂದು ಉಸ್ಸಂತ ಬಿದ್ದುಕೊಂಡಿರುವ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯನ್ನು ಕುಂಭಕರ್ಣ ನಿದ್ದೆಯಿಂದ ಬಡಿದೆಬ್ಬಿಸಬೇಕಿದೆ. ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಕುಂಭದ್ರೋಣ ಮಳೆ ತಂದ ಹಾವಳಿ ಬೆಂಗಳೂರೆಂಬ ಬೆಂಗಳೂರನ್ನೇ ಅಲ್ಲೋಲಕಲ್ಲೋಲಗೊಳಿಸಿದೆ.

ಬೇಸಿಗೆ ಮುಗಿಯುವ ಮೊದಲೇ ಮಳೆಗಾಲ ಬಂತೆಂಬಂತೆ ಮಳೆ ರುದ್ರ ನರ್ತನ ಮಾಡಿದೆ. ಸಂಜೆ 4 ಗಂಟೆ ಸುಮಾರಿಗೆ ಶುರುವಾದ ಮಳೆ ನಗರದಾದ್ಯಂತ ವ್ಯಾಪಿಸಿ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಬೆಳಗಿನ ಜಾವದವರೆಗೂ ಜಿಟಿಜಿಟಿ ಸುರಿಯುತ್ತಲೇ ಇದ್ದ ಮಳೆಯಿಂದಾಗಿ ನಗರದ ಜೀವನ ಅಸ್ಯವ್ಯಸ್ತಗೊಂಡಿರುವುದಂತೂ ಸತ್ಯ. ಹವಾಮಾನ ಇಲಾಖೆಯ ಪ್ರಕಾರ ಕೇವಲ 4 ಗಂಟೆಯ ಅವಧಿಯಲ್ಲಿ 9 ಸೆಂ.ಮೀ. ಮಳೆ ಸುರಿದಿದೆ. ಮಳೆಗಾಲದಲ್ಲೂ ಈಪಾಟಿ ಮಳೆ ಇತ್ತೀಚೆಗೆ ಸುರಿದಿರುವುದನ್ನು ಇಲ್ಲಿ ಜನತೆ ಕಂಡಿಲ್ಲ.

ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಪ್ಯಾಲೇಸ್ ರಸ್ತೆಯಲ್ಲಿ ಭಾರೀ ವಾಹನದಟ್ಟಣೆ ಸಂಭವಿಸಿ ಜನ ಪರದಾಡುವಾತಾಯಿತು. ತೊಯ್ದು ತೊಪ್ಪೆಯಾಗಿ ಒಂಬತ್ತು ಗಂಟೆಗೆಲ್ಲ ಮನೆ ಸೇರಿಬೇಕಾದವರು ಹನ್ನೆರಡು ಗಂಟೆಗೆ ಮನೆ ತಲುಪಿಕೊಂಡಿದ್ದಾರೆ. ತೆರವಾಗಿರಬೇಕಾದ ಚರಂಡಿಗಳು ತುಂಬಿದ್ದರಿಂದ, ಮುಚ್ಚಿಕೊಂಡಿರಬೇಕಾಗಿದ್ದ ಚರಂಡಿಗಳ ಬಾಯಿ ತೆರೆದುಕೊಂಡಿದ್ದರಿಂದ ಮಳೆ ನೀರು ಚರಂಡಿ ರಸ್ತೆಯನ್ನು ಒಂದು ಮಾಡಿತ್ತು. ಇದರಿಂದಾಗಿ ನಾಲ್ಕು ಚಕ್ರದ ವಾಹನಗಳೆಲ್ಲೆಲ್ಲ ನೀರು ತುಂಬಿಕೊಂಡಿತು.

ಬಾಪುಜಿನಗರದಲ್ಲಿ ಮನೆಯೊಂದರಲ್ಲಿ ನೀರಿನಲ್ಲಿ ಸಿಲುಕಿದ್ದ ಮೂವರು ಕಾಪಾಡಲಾಗಿದೆ. ಡಿಜೆ ಹಳ್ಳಿಯಲ್ಲಿ ಕಾರಿನಲ್ಲಿದ್ದ ಮೂವರನ್ನು ರಕ್ಷಿಸಲಾಗಿದೆ. ಪುಲಿಕೇಶಿ ನಗರದಲ್ಲಿ ಕೂಡ ನೀರಿಗೆ ಹಾರವಾಗಬೇಕಿದ್ದ ಏಳು ಮಕ್ಕಳನ್ನು ರಕ್ಷಿಸಲಾಯಿತು. ಗುಡ್ಡದಹಳ್ಳಿಯಲ್ಲಿ ಮೂರು ವರ್ಷದ ಮಗುವೊಂದು ಕಾಣೆಯಾಗಿರುವುದು, ಹಲವರ್ಷಗಳ ಹಿಂದೆ ನೀರಿನಲ್ಲಿ ಕೊಚ್ಚಿಹೋಗಿದ್ದ ಅಭಿಷೇಕ್ ಘಟನೆ ನೆನಪಿಸುವಂತೆ ಮಾಡಿದೆ. ಬಿಬಿಎಂಪಿ ಈಗಲೇ ಎಚ್ಚೆತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಇನ್ನೆಷ್ಟು 'ಅಭಿಷೇಕ್'ರು ಚರಂಡಿ ಪಾಲಾಗುತ್ತಾರೋ?

ಹವಾಮಾನ ಇಲಾಖೆಯ ಪ್ರಕಾರ, ನಗರದಲ್ಲಿ ಇನ್ನೆರಡು ದಿನ ಹೀಗೆಯೇ ಮಳೆ ಸುರಿಯಲಿದೆ. ಇದು ವಾರಾಂತ್ಯವಾದ್ದರಿಂದ ಸಂಜೆ ಸಿನೆಮಾ, ಕ್ಲಬ್ಬು, ವೀಕೆಂಡ್ ಮೀಟಿಂಗೆಂದು ಹೊರಬರುವ ಬದಲು ಮನೆಯಲ್ಲಿಯೇ ಕುಳಿತು, ಬಿಸಿಬಿಸಿ ಕಾಂದಾ ಬಜಿ ತಿಂದುಕೊಂಡು ರಾಜಕುಮಾರ್ ಚಿತ್ರಗಳನ್ನು ವೀಕ್ಷಿಸುವುದು ಒಳಿತು. ಮನೆಯಿಂದ ಹೊರಹೋಗಲೇಬೇಕಿದ್ದವರು ಛತ್ರಿ, ರೈನ್ ಕೋಟ್, ಜರ್ಕಿನ್ ವಗೈರೆಗಳನ್ನು ತೆಗೆದುಕೊಂಡು ಹೋಗಬೇಕಾಗಿ ವಿನಂತಿ.

ಉತ್ತರ ಪತ್ರಿಕೆ ನೀರು ಪಾಲು :
ಭಾರೀ ಮಳೆಯಿಂದಾಗಿ ನೀರು ನುಗ್ಗಿದ್ದರಿಂದ ರಾಜಾಜಿನಗರದ 4ನೇ ಬ್ಲಾಕ್ ನಲ್ಲಿರುವ ಕೆಟಿಎಸ್ ಸಿ ಪಿಯು ಕಾಲೇಜಿನಲ್ಲಿ ಮೌಲ್ಯ ಮಾಪನಕ್ಕೆಂದು ಇಟ್ಟಿದ್ದ ಎಸ್ಎಸ್ಎಲ್ ಸಿ ಉತ್ತರ ಪತ್ರಿಕೆಗಳು ನೀರಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಧಾವಿಸಿರುವ ನಗರಾಭಿವೃದ್ಧಿ ಸಚಿವ ಎಸ್ ಸುರೇಶ್ ಅವರು ಹಾನಿಯ ಪ್ರಮಾಣವನ್ನು ಪರಿಶೀಲಿಸುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಶಿವಮೊಗ್ಗದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಎಸ್ಎಸ್ಎಲ್ ಸಿ ಹಿಂದಿ ಉತ್ತರ ಪತ್ರಿಕೆಗಳು ಸುಟ್ಟು ಭಸ್ಮವಾಗಿದ್ದವು. ಈ ಕಾರಣ, ಮೈಸೂರಿನ ವಿದ್ಯಾರ್ಥಿಗಳು ಏ.27ರಂದು ಮರುಪರೀಕ್ಷೆ ಬರೆಯುವಂತಾಗಿದೆ. ಈಗ ಈ ಉತ್ತರ ಪತ್ರಿಕೆಗಳೂ ಹಾನಿಯಾಗಿ ಮರುಪರೀಕ್ಷೆ ಬರೆಯುವಂಥ ಪರಿಸ್ಥಿತಿ ಬಾರದಿರಲೆಂದು ವಿದ್ಯಾರ್ಥಿಗಳು ಗಾಳಿ ಆಂಜನೇಯನ ಮೊರೆ ಹೋಗಿದ್ದಾರೆ. ಆದರೆ ಏನು ಮಾಡುವುದು, ಮೈಸೂರು ರಸ್ತೆಯಲ್ಲಿರುವ ದೇವಸ್ಥಾನಕ್ಕೆ ನೀರು ನುಗ್ಗಿದ್ದರಿಂದ ಗಾಳಿ ಆಂಜನೇಯನೂ ಸಂಕಷ್ಟಕ್ಕೊಳಗಾಗಿದ್ದಾನೆ.

English summary
Heavy to very heavy rain lashed Bangalore city on Apr 22. Normal life in the city thrown out of gear. Many children were rescued in various areas. Met department has said that the rain will continue for another two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X