ಕೆಲಸ ಒತ್ತಡ ತಾಳದೆ ಸಾಫ್ಟ್ ವೇರ್ ಟೆಕ್ಕಿ ಸಾವು

ಕೈಕೊಂಡನಹಳ್ಳಿ ಪುಷ್ಪಾವತಿ ಲೇಔಟ್ ನಲ್ಲಿ ವಾಸವಾಗಿದ್ದ ಚೆನ್ನೈ ಮೂಲದ ಅವಿವಾಹಿತ ಪ್ರಭಾಕರ್ ಇತ್ತೀಚೆಗೆ ಹೊಸ ಮನೆ ಕಟ್ಟಿಸಿದ್ದರು. ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆ ಆಪ್ನೋಮಿಕ್ ಸಿಸ್ಟಮ್ಸ್ ನಲ್ಲಿ ಉತ್ತಮ ಕೆಲಸವಿತ್ತು. ಆದರೆ, ಎರಡು ತಿಂಗಳಿನಿಂದ ಯಾವುದೋ ಪ್ರಾಜೆಕ್ಟ್ ಮುಗಿಸಲಾಗದೆ ಮಾನಸಿಕವಾಗಿ ಸಾಕಷ್ಟು ಬಳಲಿದ್ದರು. ಶನಿವಾರ ಮಧ್ಯರಾತ್ರಿ ಸ್ನೇಹಿತರ ಜೊತೆ ಊಟ ಮುಗಿಸಿ ಮನೆಗೆ ಹಿಂತಿರುಗಿದ ಪ್ರಭಾಕರ್ ಗೆ ಇನ್ನು ಈ ಲೋಕದಲ್ಲಿ ಇದ್ದು ಪ್ರಯೋಜನವಿಲ್ಲ ಎಂದೆನಿಸಿ, ಹರಿತವಾದ ಚಾಕು ತೆಗೆದುಕೊಂಡು ಕೈ ಕುಯ್ದುಕೊಂಡಿದ್ದಾರೆ.
ಉಳಿಸುವ ವಿಫಲ ಯತ್ನ: ಮಧ್ಯರಾತ್ರಿ ಸುಮಾರು ಒಂದು ಗಂಟೆ ವೇಳೆಗೆ ನೋವು ತಾಳಲಾರದ ಮನೆಯಿಂದ ಹೊರ ಬಿದ್ದಿದ್ದಾರೆ. ಇದನ್ನು ಗಮನಿಸಿದ ವಾಚ್ ಮನ್ ಹೊನ್ನಪ್ಪ ಅವರು, ಪ್ರಭಾಕರ್ ಅವರನ್ನು ಪ್ರಶ್ನಿಸಿದ್ದಾರೆ. ಆದರೆ, ಪ್ರಭಾಕರ್ ತಮಿಳಿನಲ್ಲಿ ಉತ್ತರಿಸಿದ್ದು, ಹೊನ್ನಪ್ಪ ಅವರಿಗೆ ಅರ್ಥವಾಗದೆ ಸುಮ್ಮನಾಗಿದ್ದಾರೆ. ಆದರೂ, ಅನುಮಾನ ಬಂದು ಪ್ರಭಾಕರ್ ಮೊಬೈಲ್ ಗೆ ಕರೆ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಪ್ರಭಾಕರ್ ಪಕ್ಕದ ಮನೆಯ ಸುರೇಶ್ ಕುಮಾರ್ ಅವರನ್ನು ಎಬ್ಬಿಸಿ ಇಬ್ಬರು ಹತ್ತಿರ ಆಸ್ಪತ್ರೆ, ಕೆರೆ ಸುತ್ತ ಮುತ್ತ ಹುಡುಕಿದ್ದಾರೆ.
ನಂತರ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸ್ ಸಿಬ್ಬಂದಿಗಳು ಕೂಡಾ ಪ್ರಭಾಕರ್ ಅವರಿಗಾಗಿ ಮುಂಜಾನೆ 5 ಗಂಟೆ ತನಕ ಶೋಧಿಸಿದ್ದಾರೆ. ಆದರೆ, ಮನೆ ಸಮೀವಿದ್ದ ಕೈಕೊಂಡನಹಳ್ಳಿ ಕೆರೆಯಲ್ಲಿ ಪ್ರಭಾಕರ್ ಶವಬೆಳಗ್ಗೆ 8 ಗಂಟೆಗೆ ಸಿಕ್ಕಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಚೆನ್ನೈ ನಿಂದ ಬಂದ ಆತನ ಪೋಷಕರಿಗೆ ಶವವನ್ನು ನೀಡಲಾಗಿದೆ ಎಂದು ಎಚ್ ಆರ್ ಎಸ್ ಠಾಣಾಧಿಕಾರಿ ನಂಜೇಗೌಡ ಹೇಳಿದರು.











Click it and Unblock the Notifications