ಅಣ್ಣಾ ಹಜಾರೆ ಹೋರಾಟಕ್ಕೆ ಸರಕಾರ ಮಣಿಯುವುದೇ !?

ಈ ಮಧ್ಯೆ, ಜನ ಲೋಕಪಾಲ್ ಮಸೂದೆ ಅಳವಡಿಕೆಗೆ ಸಹಮತ ವ್ಯಕ್ತಪಡಿಸಲು ಸರಕಾರ ಹಿಂಜರಿಯುತ್ತಿರುವುದರಿಂದ ಉಪವಾಸ ಹೋರಾಟದ ನಡುವೆಯೇ ಏಪ್ರಿಲ್ 12ರಿಂದ 'ಜೈಲ್ ಭರೋ ಆಂದೋಲನ' ಕ್ಕೆ ಕರೆ ನೀಡಿದ್ದಾರೆ. ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಇಂದು ಬೆಳಗ್ಗೆ ಅಣ್ಣಾ ನಿರಶನ ಕೈಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ, ಸರಕಾರದ ನಿಲುವನ್ನು ತಿಳಿಸಿದರು.
ಭ್ರಷ್ಟಾಚಾರ ವಿರೋಧಿ ಸಮಿತಿಗೆ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಮತ್ತು ಅಣ್ಣಾ ಅವರ ಸೂಚನೆಯಂತೆ ನ್ಯಾಯಮೂರ್ತಿಗಳಾದ ಜೆ. ಎಸ್. ವರ್ಮಾ ಮತ್ತು ಸಂತೋಷ್ ಹೆಗ್ಡೆ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವುದು ಅಸಾಧ್ಯ ಎಂದು ಸಚಿವ ಸಿಬಲ್ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಂತೆ 72 ವರ್ಷದ ಅಣ್ಣಾ ಜೈಲ್ ಭರೋ ಚಳವಳಿಗೆ ಕರೆ ನೀಡಿದರು.
ಇದರಿಂದ ಮತ್ತಷ್ಟು ಗೊಂದಲಕ್ಕೆ ಸಿಕ್ಕಿದ ಸರಕಾರ ಪ್ರಧಾನಿ ನಿವಾಸದಲ್ಲಿ ಉನ್ನತ ಸಭೆ ನಡೆಸುತ್ತಿದೆ. ಅಣ್ಣಾ ಒತ್ತಾಸೆಗೆ ಪರೋಕ್ಷ ಬೆಂಬಲ ಸೂಚಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಮತ್ತು ಸರಕಾರದ ಪರ ಅಣ್ಣಾ ಅವರ ಜತೆ ಸಂಧಾನ ನಡೆಸುತ್ತಿರುವ ಸಚಿವ ಕಪಿಲ್ ಸಿಬಲ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ, ಹಜಾರೆ ಅವರ ಪ್ರತಿನಿಧಿಗಳಾದ ಸ್ವಾಮಿ ಅಗ್ನಿವೇಶ್, ಅರವಿಂದ್ ಕೇಜ್ರಿವಾಲ್ ಮತ್ತು ಸಚಿವ ಕಪಿಲ್ ಸಿಬಲ್ ಮಧ್ಯೆ ಇಂದು ಸಂಜೆ 6 ಗಂಟೆಗೆ ಮಾತುಕತೆ ನಿಗದಿಯಾಗಿದೆ.












Click it and Unblock the Notifications