ರೆಹಮಾನ್ ಶಿಷ್ಯನ ಟ್ಯೂನ್ ಗೆ ತಲೆದೂಗಿದ ಮೆಟ್ರೋ
ಬೆಂಗಳೂರು, ಮಾ. 25: ಆಸ್ಕರ್ ವಿಜೇತ ಎಆರ್ ರೆಹಮಾನ್ ಅವರ ಸಂಗೀತ ಶಾಲೆಯಲ್ಲಿ ತರಬೇತಿ ಪಡೆದು, ಸಂಗೀತ ಸಂಯೋಜಕರಾಗಿರುವ ನೆಹಾರ್ ಕಿರಣ್ ಅವರ ಟ್ಯೂನ್ ಅನ್ನು "ನಮ್ಮ ಮೆಟ್ರೋ" ಅಳವಡಿಸಿಕೊಂಡಿದೆ. ಬಿಎಂಆರ್ ಸಿಎಲ್ ನಡೆಸಿದ್ದ ಸಿಗ್ನೇಚರ್ ಟ್ಯೂನ್ ಸ್ಪರ್ಧೆಯಲ್ಲಿ ಉಡುಪಿ ಮೂಲದ ನೆಹಾರ್ ಅವರ ಟ್ಯೂನ್ ಆಯ್ಕೆಯಾಗಿದ್ದು, ಮೆಟ್ರೋ ರೈಲಿನಲ್ಲಿ ಕಿರಣ್ ಸಂಯೋಜನೆಯ ಗೀತೆ ಮೊಳಗಲಿದೆ.
ಬೆಂಗಳೂರಿನ ಆರ್ ವಿಸಿಇಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿರುವ ನೆಹಾರ್ ಕಿರಣ್, ಸ್ಪರ್ಧೆಯಲ್ಲಿದ್ದ 101 ಮಂದಿಯನ್ನು ಹಿಂದಿಕ್ಕಿ, ಪ್ರಶಸ್ತಿ ಗಳಿಸಿದ್ದಾರೆ. ಮೆಟ್ರೋ ಸಿಗ್ನೇಚರ್ ಟ್ಯೂನ್ ಅನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಇಂಪಾದ ಟ್ಯೂನ್ ನೀಡಿದ ಕಿರಣ್ ಗೆ 1 ಲಕ್ಷ ರು. ಬಹುಮಾನ ಕೂಡಾ ಸಿಕ್ಕಿದೆ. ಏಪ್ರಿಲ್ 4ರ ಯುಗಾದಿ ದಿನದಂದು ಮೆಟ್ರೋ ರೈಲು ಸಂಚಾರ ಆರಂಭಿಸಲಿದ್ದು, ಕಿರಣ್ ಗೀತೆ ಸಾರ್ವಜನಿಕರಿಗೆ ಮುದ ನೀಡಲಿದೆ ಎಂದು ಬಿಎಂಆರ್ ಸಿ ವ್ಯವಸ್ಥಾಪಕ ನಿರ್ದೇಶಕ ಎನ್ ಶಿವಶೈಲಂ ಹೇಳಿದ್ದಾರೆ.
ಸ್ಪರ್ಧೆಯಲ್ಲಿದ್ದ ಸುಮಾರು 415ಕ್ಕೂ ಹೆಚ್ಚು ಟ್ಯೂನ್ ಗಳಲ್ಲಿ ಕಿರಣ್ ಕಳಿಸಿದ ಟ್ಯೂನ್ ಆನ್ನು ಗಾಯಕಿ ಮಾಲತಿ ಶರ್ಮಾ, ಎನ್ ಪ್ರಸಾದ್, ಮುದ್ದು ಮೋಹನ್ ಹಾಗೂ ಆರ್ ಟಿ ಕುಲಕರ್ಣಿ ಅವರಿದ್ದ ಆಯ್ಕೆ ಸಮಿತಿ ಮೆಚ್ಚಿದೆ. ಚೆನ್ನೈನಲ್ಲಿ ಸಂಗೀತ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ಕಿರಣ್ ಅವರ ಈ ಸಾಧನೆಗೆ ಅವರ ತಂದೆ ನಿವೃತ್ತ ಪ್ರೊ.ಕೆಪಿ ದಬಾಡೆ ಹಾಗೂ ತಾಯಿ ಪ್ರೊ.ಅರ್ಚನಾ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications