ಎಲ್ಲೆಲ್ಲೂ ಅದೇ ಚರ್ಚೆ... ಭಾರತ ಪಂದ್ಯ ಗೆಲ್ಲತ್ತಾ !?
ಅಹಮದಾಬಾದ್, ಮಾ. 24: ಎಲ್ಲೆಲ್ಲೂ ಅದೇ ಚರ್ಚೆ. ಕ್ರಿಕೆಟ್, ಕ್ರಿಕೆಟ್...ಭಾರತ ಇಂದಿನ ಪಂದ್ಯ ಗೆಲ್ಲುತ್ತಾ!? ಎಂಬುದರತ್ತಲೇ ಚರ್ಚೆ. ಅದರಲ್ಲೂ ನಿನ್ನೆ ಪಾಕಿಸ್ತಾನ ನಿರಾಯಾಸವಾಗಿ ಸೆಮಿಫೈನಲ್-ಗೆ ಲಗ್ಗೆ ಹಾಕಿದ ಮೇಲಂತೂ ಶತಾಯಗತಾಯ ಭಾರತ ಇಂದು ಗೆಲ್ಲಲೇಬೇಕು ಎಂಬುದು ನೂರ್ಕೋಟಿ ಭಾರತೀಯರ ಆಸೆ, ಆಕಾಂಕ್ಷೆಯಾಗಿದೆ. ಜತೆಗೆ ಇಲ್ಲಿ ಗೆದ್ದು ಫೈನಲ್-ಗೂ ಮುನ್ನ ಪಾಕ್ ವಿರುದ್ಧ ಒಂದು ಕೈ ನೋಡಲಿದೆ ಎಂಬುದನ್ನು ಕಲ್ಪಿಸಿಕೊಂಡೇ ಉಪಖಂಡದ ಕ್ರಿಕೆಟ್ ಪ್ರಿಯರು ಥ್ರಿಲ್ ಆಗಿದ್ದಾರೆ. ಭಾರತ ತಂಡ ಈ ಆಸೆಗೆ ನೀರೆರೆಯುತ್ತಾ? ಆಸ್ಟ್ರೇಲಿಯಾ ತಣ್ಣೀರು ಎರಚುತ್ತದಾ? ನೋಡೋಣಾ ಏನೆಲ್ಲ ಅಗುತ್ತೋ!? ಅದಕ್ಕೂ ಮುನ್ನ...
ಇಲ್ಲಿನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ಹಂತದಲ್ಲಿ ಸೆಣೆಸಲಿವೆ. ಅಧಿಪತ್ಯ ಸ್ಥಾಪಿಸಲು ಎರಡೂ ತಂಡಗಳೂ ಸಜ್ಜಾಗಿವೆ. ಮೇಲ್ನೋಟಕ್ಕೆ ಎಂಎಸ್ ಧೋನಿ ಪಡೆ ಮದಗಜದಂತೆ ಘೀಳಿಡುತ್ತಿದ್ದರೆ ಪಾಂಟಿಂಗ್ ಪಡೆಯ ಕಾಂಗರೂಗಳು ಒಂದಷ್ಟು ಪೇಲವವಾಗಿ ಕಾಣುತ್ತಿವೆ. ಆದರೆ ಮೊದಲ ಕ್ವಾರ್ಟರ್ಸ್ ಏಕಪಕ್ಷೀಯವಾಗಿ ಪಾಕ್ ಪಾಲಾದಂತೆ ಈ ಪಂದ್ಯ ಸಪ್ಪೆಯಾಗಿರುವುದಿಲ್ಲ. ಜಿದ್ದಾಜಿದ್ದಿ ಗ್ಯಾರಂಟಿ. ಪ್ರೇಕ್ಷಕರ ಹೃದಯಬಡಿತ ಹೆಚ್ಚೂಕಮ್ಮಿಯಾಗುವುದು ಖಚಿತ. ಭಾರತ, ಆಸ್ಟ್ರೇಲಿಯನ್ನರಿಗೆ ನಾಕೌಟ್ ಪಂಚ್ ನೀಡಲಿದೆಯೇ?
ಎರಡೂ ತಂಡಗಳಲ್ಲಿ ಪೂರ್ಣಪ್ರಮಾಣದಲ್ಲಿ ಬಳಕೆಯಾಗದ ಅಸ್ತ್ರಗಳು ಇವೆ. ಜತೆಗೆ ತಂಡೂಲ್ಕರ್ ಮತ್ತು ಪಾಂಟಿಂಗ್ ನಡುವೆ ನೇರಾನೇರ ಸ್ಪರ್ಧೆಯೂ ಇದೆ. ಕೋಟ್ಯಂತರ ಅಭಿಮಾನಿಗಳ ಆಶೋತ್ತರಕ್ಕೆ ತಕ್ಕಂತೆ ಆಡುವ ಹೊಣೆಗಾರಿಕೆ ಧೋನಿ ಪಡೆಯ ಮೇಲಿದೆ. ಅವರಿಗೆ ಗೆಲುವಷ್ಟೇ ದಕ್ಕಬೇಕು. ಧೋನಿ ಪಡೆಯಲ್ಲಿರುವ ಆರು ಆಟಗಾರರಿಗೆ 2003ರ ವಿಶ್ವಕಪ್ ಫೈನಲ್ಸ್ ದುಃಸ್ವಪ್ನದಿಂದ ಹೊರಬರಬೇಕಾಗಿದೆ. ಆಗಿನ ತಪ್ಪುಗಳನ್ನು ತಿದ್ದಿಕೊಳ್ಳಲು ತಕ್ಕ ಕಾಲ ಇದಾಗಿದೆ. ಇನ್ನು ಸ್ಪಿನ್-ಸ್ನೇಹಿಯಾದ ಒಣ ಮೊಟೇರಾ ಪಿಚ್ ಏನೆಲ್ಲ ಆಟವಾಡಿಸಲಿದೆಯೋ? ಆರತದ ತಂಡದಲ್ಲಿ ... ಜಹೀರ್ ಖಾನ್ ಬಿಟ್ಟು ಉಳಿದವರ ಬೌಲಿಂಗ್ ಮಿಂಚಿಲ್ಲ. ಬ್ಯಾಟಿಂಗ್ ಪವರ್ ಪ್ಲೇನಲ್ಲಿ ಹೀನಾಯಾವಾಗಿ ಆಡಿದೆ. ಎರಡು ಬಾರಿ ಎಡವಿದ್ದು, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಕಾಡುತ್ತಿದೆ. ಈ ಮಧ್ಯೆ ಗಾಯಾಳು ವೀರೇಂದರ್ ಸೆಹ್ವಾಗ್ ಏನು ಮಾಡುತ್ತಾರೋ ಎಂಬ ಸಣ್ಣ ಆತಂಕವೂ ಇದೆ.











Click it and Unblock the Notifications