ಕಾಂಗರೂ ಎದುರು ಎಚ್ಚರಾ ಭಾರತ, ಎಚ್ಚರ !
ಅಹಮದಾಬಾದ್, ಮಾ. 24: ಏಕ ದಿನ ಕ್ರಿಕೆಟ್-ನಲ್ಲಿ ಅಧಿಪತ್ಯ ಸ್ಥಾಪಿಸುವ ನಿಟ್ಟಿನಲ್ಲಿ ಆತಿಥೇಯ ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ಹಂತದಲ್ಲಿ ಇಲ್ಲಿನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಇನ್ನೇನು ಕೆಲವೇ ಗಂಟೆಗಳಲ್ಲಿ ಸೆಣೆಸಲಿವೆ. ಭಾರತ ವಿರೋಧಿ ಪಾಳಯದ ಬಗ್ಗೆ ಈ ನಾಲ್ಕಾರು ಅಂಶಗಳತ್ತ ಎಚ್ಚರ ವಹಿಸಬೇಕು.
ಕ್ಷೇತ್ರ ಪಾಳೆಗಾರರು: ಹೌದು, ಆಸ್ಟ್ರೇಲಿಯಾ ತಂಡದ ಕ್ಷೇತ್ರ ರಕ್ಷಣೆ ಈ ಹಿಂದಿನಂತೆ ವಿಜೃಂಭಿಸುತ್ತಿಲ್ಲ. ಆದರೂ ಕೆಲವು ಅದ್ಭುತ ಕ್ಷಣಗಳನ್ನು ಜ್ಞಾಪಿಸಿಕೊಳ್ಳಿ. ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಆಡುತ್ತಾ ಸ್ಟೀವ್ ಸ್ಮಿತ್ ಹಿಡಿದ ಕ್ಯಾಚ್ ಆಗಲಿ ಅಥವಾ ಅವರು ರನ್ ಔಟ್ ಮಾಡಿದ್ದಾಗಲಿ ನೆನಪಿಸಿಕೊಂಡರೆ... ಭಾರತದವರು ಸಾಕಷ್ಟು ಸಾವರಿಸಿಕೊಳ್ಳಬೇಕಾಗುತ್ತದೆ. ಮಹತ್ವದ ಘಟ್ಟಗಳಲ್ಲಿ ಇಂತಹ ಒಂದೆರಡು ಸಾಧನೆಗಳು ಸಾಕು ಆಸ್ಟ್ರೇಲಿಯಾಕ್ಕೆ ಪಂದ್ಯ ದಕ್ಕಿಸಿಕೊಡಲು.
ಬಂದಾ ಜೋಡಿ: ಶೇನ್ ವ್ಯಾಟ್ಸನ್ ಮತ್ತು ಮೈಖೇಲ್ ಹಸ್ಸಿ ಜೋಡಿನ ಇದೆಯಲ್ಲಾ, ಅದು ಅರಿಭಯಂಕರ. ಆಸ್ಟ್ರೇಲಿಯಾದ ಏಕದಿನ ಕ್ರಿಕೆಟ್-ನಲ್ಲಿ ಇವರ ಕರಾಮತ್ತು ಅದ್ಭುತ. ವ್ಯಾಟ್ಸನ್-ಗೆ ಬೌಲರ್-ಗಳನ್ನು ಗೋಳುಹೊಯ್ದುಕೊಳ್ಳುವ ಅತ್ಯುತ್ತಮ ದಾಂಡಿಗ. ಇನ್ನು ಹಸ್ಸೆ, ವ್ಯಾಟ್ಸನ್-ನ ಬೋರ್ಗರೆತಕ್ಕೆ ತಕ್ಕಂತೆ ತಂಡಕ್ಕೆ ಪಂದ್ಯ ದಕ್ಕಿಸಿಕೊಡುವಲ್ಲಿ ಮಹತ್ತರ ಕಾಣಿಕೆ ಸಲ್ಲಿಸುತ್ತಾರೆ. ಪ್ರಸಕ್ತ ವಿಶ್ವಕಪ್-ನಲ್ಲಿ ವ್ಯಾಟ್ಸನ್ ಅತ್ಯುತ್ತಮ ಅಲ್-ರೌಂಡರ್ ಎನಿಸಿದ್ದಾರೆ.
ಬೌಲಿಂಗ್ ದೈತ್ಯರು: ಬ್ರೆಟ್ ಲಿ, ಮಿಶೆಲ್ ಜಾನ್ಸನ್ ಮತ್ತು ಶಾನ್ ಟೈಟ್ ಅವರನ್ನು ನೆನೆಸಿಕೊಂಡರೇನೇ ಚಡ್ಡಿ ನೆನೆಯುತ್ತದೆ. ಅತ್ಯುತ್ತಮ ದಾಂಡಿಗರಿಗೂ ಇವರೆಂದರೆ ದುಃಸ್ವಪ್ನ. ಅಂದಹಾಗೆ ಭಾರತ ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಇಂತಹ ದೈತ್ಯ ಸಂಹಾರಿಗಳನ್ನು ಎದುರಿಸಬೇಕಾಗಿದೆ. ಲೀ ಮತ್ತು ಟೈಟ್ ರುದ್ರನರ್ತನ ಮಾಡತೊಡಗಿದರೆ ಜಾನ್ಸನ್ ಅದಕ್ಕೆ ತಕ್ಕಂತೆ ಅಪಾಯಕಾರಿಯಾಗಿ ಹೆಜ್ಜೆ ಹಾಕಬಲ್ಲರು.
ದೊಡ್ಡ ಮ್ಯಾಚ್ ಅನುಭವ: ಆಸ್ಟ್ರೇಲಿಯಾ ತಂಡ ಸತತವಾಗಿ ಮೂರು ಜತೆಗೊಂದು ಬಾರಿ ವಿಶ್ವ ಕಪ್-ಅನ್ನು ಮುಡಿಗೇರಿಸಿಕೊಂಡಿದೆ. ಹಾಗೆಯೇ ಎರಡು ಬಾರಿ ಫೈನಲ್ಸ್ ಹಂತಕ್ಕೂ ಪ್ರವೇಶಿದೆ. ಇನ್ನು, ನಾಯಕ ಪಾಂಟಿಂಗ್ ಅಂತೂ (ಭಾರತ ಪ್ರಯತ್ನಪೂರ್ವಕವಾಗಿ ಜೊಹಾನ್ಸ್-ಬರ್ಗ್ ಫೈನಲ್ಸ್ ಅನ್ನು ಮರೆಯುವುದು ಒಳಿತು, ಹಾಗಿತ್ತು ಪಾಂಟಿಂಗ್ ಆರ್ಭಟ) ನಾಲ್ಕು ಬಾರಿ ವಿಶ್ವ ಕಪ್ ಫೈನಲ್ಸ್-ನಲ್ಲಿ ಆಡಿದ್ದಾರೆ. ಅದರಲ್ಲಿ ಮೂರನ್ನು ತಂಡಕ್ಕೂ ದಕ್ಕಿಸಿಕೊಟ್ಟಿದ್ದಾರೆ. ಬಿಗ್ ಮ್ಯಾಚ್-ಗಳಲ್ಲಿ ಆಸ್ಟ್ರೇಲಿಯಾ ದರ್ಬಾರು ನೋಡಲೆರಡು ಕಣ್ಣುಗಳು ಸಾಲದಮ್ಮಾ ... ಸೊ, ಎಚ್ಚರಾ ಭಾರತ ಎಚ್ಚರ!











Click it and Unblock the Notifications