ಏನ್ ಕುಮಾರಣ್ಣ ಯಾಕ್ ಹಿಂಗ್ ಮಾಡ್ಬಿಟ್ರಿ?

ಕುಮಾರಸ್ವಾಮಿ ಒಮ್ಮೆ ಹಾಗೆ ಇನ್ನೊಮ್ಮೆ ಹೀಗೆ ಹೇಳಿದರೂ, ಚುನಾವಣೆ ದಿನ ಘೋಷಣೆಯಾದ ದಿನದಂದೇ ಸಾಮಾನ್ಯ ಅಭ್ಯರ್ಥಿಯನ್ನು ನಿಲ್ಲಿಸಲು ಎಚ್ ಡಿ ದೇವೇಗೌಡರು ನಿರ್ಧರಿಸಿಯಾಗಿತ್ತು. ಮೊದಲಿಗೆ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ನಿಲ್ಲಿಸಲು ಮನಸ್ಸು ಮಾಡಲಾಗಿತ್ತಾದರೂ ನಂತರ ಪಕ್ಷದ ಹಿರಿಯ ಕಾರ್ಯಕರ್ತ ಸಿಂಲಿಂ ನಾಗರಾಜ ಅವರಿಗೆ ಆ ಭಾಗ್ಯ ದೊರಕಿದೆ. ಈ ವಿಷಯ ಎಲ್ಲಾ ಕುಮಾರಸ್ವಾಮಿಗೆ ಗೊತ್ತಿದ್ದರೂ, ಅಭಿಮಾನಗಳ ಒತ್ತಡಕ್ಕೆ ಮಣಿದು, ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರು. ಇದೇ ರೀತಿ ಜಗಳೂರಿನಲ್ಲಿ ಹುಚ್ಚವನಹಳ್ಳಿ ಮಂಜುನಾಥ ಹಾಗೂ ಬಂಗಾರಪೇಟೆಯಲ್ಲಿ ವೆಂಕಟೇಶಪ್ಪ ಸ್ಪರ್ಧಿಸುವುದು ಖಚಿತವಾಗಿದೆ.
ಹಿಂದೊಮ್ಮೆ ಚನ್ನಪಟ್ಟಣದ ಕಾರ್ಯಕರ್ತರ ಸಭೆಯಲ್ಲಿ ಗೊಳೋ ಎಂದು ಕಣ್ಣೀರು ಸುರಿಸಿದ್ದ, ಕುಮಾರಣ್ಣಗೆ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದ್ದ ಒಡಕು ಸರಿ ಪಡಿಸಲು ಉಪ ಚುನಾವಣೆ ಸೂಕ್ತ ವೇದಿಕೆಯಾಗಿ ಪರಿಣಮಿಸಿತು. ಮೊದಲೇ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುವುದಾಗಿ ಘೋಷಿಸಿದ್ದರೆ, ಈ ಪಾಟಿ ಜೋಶ್ ಉಂಟಾಗಲು ಸಾಧ್ಯವಿರಲಿಲ್ಲ. ಅಪ್ಪನ ಮಾತು ಮೀರಲು ಸಾಧ್ಯವಿಲ್ಲ ಎನ್ನುವ ಕುಮಾರಸ್ವಾಮಿಗೆ ಅಸಲಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಮನಸ್ಸೇ ಇಲ್ಲ. ಹಳ್ಳಿಗಿಂತ ದಿಲ್ಲಿಯೇ ವಾಸಿ ಎನ್ನುವ ಮನಸ್ಥಿತಿಯಲ್ಲಿದ್ದಾರೆ.
ಕುಟುಂಬ ಕಲಹ ತಪ್ಪಿಸಲು ಈ ಕ್ರಮ? : ಚನ್ನಪಟ್ಟಣದಿಂದ ಕುಮಾರಸ್ವಾಮಿ ಸ್ಪರ್ಧಿಸಿ, ವಿಧಾನಸಭೆಗೆ ಆಯ್ಕೆಯಾದರೆ ಗೊಂದಲ ಉಂಟಾಗುವ ಸಾಧ್ಯತೆಯಿತ್ತು. ಜೆಡಿಎಸ್ ಕಾರ್ಯಕರ್ತರು ಎಚ್ ಡಿ ರೇವಣ್ಣ, ಕುಮಾರಸ್ವಾಮಿ ಇಬ್ಬರಲ್ಲಿ ಯಾರನ್ನು ಬೆಂಬಲಿಸಬೇಕು ಎಂದು ತಿಳಿಯದೇ ಗೊಂದಲವಾಗುತ್ತಿತ್ತು. ಮಧುಗಿರಿ ಶಾಸಕ ಅನಿತಾ ಕುಮಾರಸ್ವಾಮಿ, ರೇವಣ್ಣ ಅವರ ಧರ್ಮಪತ್ನಿ ಭವಾನಿ ಅವರ ಹೆಸರು ಕೇಳಿ ಬಂದಿತ್ತು. ಅನಿತಾ ಮೇಡಂ ಕಸ್ತೂರಿ ಚಾನೆಲ್ ರಿಪೇರಿ ಕೆಲ್ಸದಲ್ಲಿ ನಿರತರಾಗಿದ್ದಾರೆ. ಭವಾನಿ ಅವರು ಇನ್ನೆರಡು ವರ್ಷ ರಾಜಕೀಯಕ್ಕೆ ಇಳಿಯಲಾರೆ ಎಂದಿದ್ದಾರೆ. ಕೊನೆಗೆ ದೇವೇಗೌಡರ ಮಾತಿನ ಪ್ರಕಾರವೇ ಎಲ್ಲಾ ನಡೆದಿದೆ.











Click it and Unblock the Notifications