ಜೆಸಿಬಿ ಆರ್ಭಟ: ಮಾಗಡಿ ರಸ್ತೆಯಲ್ಲಿ ಉದ್ವಿಗ್ನತೆ ನಿರ್ಮಾಣ

ಸೋಮವಾರ ನಡೆದಿರುವ ಈ ಕಾರ್ಯಾಚರಣೆಯಲ್ಲಿ ಕೊನೇಹಳ್ಳಿ ಆಸುಪಾಸು ಸುಮಾರು 50 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಚಿಕ್ಕ ಮನೆಗಳನ್ನು ಸುಮಾರು 20-25 ಜೆಸಿಬಿ ಯಂತ್ರಗಳು ನೆಲಸಮಗೊಳಿಸಿವೆ. ಸುಮಾರು 60 ಕೋಟಿ ರುಪಾಯಿ ಮೌಲ್ಯದ ನಿವೇಶನಗಳನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದೆ. ಇದರಿಂದ ನೂರಾರು ಕುಟುಂಬಗಳು ಬೀದಿಪಾಲಾಗಿವೆ. ಸುಮಾರು 20-30 ವರ್ಷದಿಂದ ಇಲ್ಲಿ ನೆಲೆಸಿದ್ದ ಹಿರಿಯ ನಾಗರಿಕರು ಕಂಗಾಲಾಗಿದ್ದಾರೆ. ಜೆಸಿಬಿಗಳು ಬಡವರ ಮನೆಯ ಅಂಗಳದಲ್ಲಿ ಗರ್ಜಿಸುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿಯೂ ಜನರ ನೆರವಿಗೆ ಧಾವಿಸಿಲ್ಲ.
10 ವರ್ಷಗಳ ಹಿಂದೆ ಕಟ್ಟಿದ್ದ ಪುಟ್ಟ ಮನೆ ಕಣ್ಣೆದುರಿಗೇ ನೆಲಕಚ್ಚಿದ್ದನ್ನು ಕಂಡು ವಯೋವೃದ್ಧರೊಬ್ಬರು ಕಣ್ಣೀರು ಹರಿಸುತ್ತಿದ್ದರು. ಬಿಬಿಎಂಪಿಯಿಂದ ಪ್ಲಾನ್ ಸ್ಯಾಂಕ್ಷನ್ ಮಾಡಿಸಿಕೊಂಡೇ ಮನೆ ಕಟ್ಟಿದ್ದಿವಿ. ಆದರೆ ಈಗ ಬಿಡಿಎ ಈ ಜಾಗವೆಲ್ಲ ತನ್ನದು ಎನ್ನುತ್ತಿದೆ. ಇದ್ಯಾವ ನ್ಯಾಯ ಎಂದು ಗೋಳಾಡುತ್ತಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಇಡೀ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಮಧ್ಯೆ ನಿವೇಶನ ಹಂಚಿದ್ದ ಸರಕಾರವೂ ಅಧಿಕೃತವಾಗಿ ಏನೂ ಹೇಳಿಲ್ಲ. ಆದರೆ ಬಿಡಿಎ ಅಧಿಕಾರಿಗಳು ಮಾತ್ರ ಮಗುಮ್ಮಾಗಿ ತಮ್ಮ ಕಾರ್ಯಾಚರಣೆ ಮುಂದುವರಿಸಿದ್ದಾರೆ.
'ಸ್ವಾತಂತ್ರ್ಯದ ನೆನಪಿಗಾಗಿ ಸುಮಾರು 30 ವರ್ಷಗಳ ಹಿಂದೆ ಸರಕಾರವೇ ಇಲ್ಲಿ ನಿವೇಶನ ಹಂಚಿತ್ತು. ಕೆಲವರು ಮನೆ ತಾಪತ್ರಯ, ಮಗಳ ಮದುವೆ ಎಂದು ಹೇಳಿ ಮಾರಿಕೊಂಡಿದ್ದಾರೆ. ಆದರೆ ಮೂಲಸ್ಥರು ಇನ್ನೂ ಅನೇಕರಿದ್ದಾರೆ. ವಾಸ್ತವವಾಗಿ ಬಿಡಿಎ ಈ ಹಿಂದೆಯೇ ಇಲ್ಲಿನ ಜಾಗಕ್ಕಾಗಿ ಖ್ಯಾತೆ ತೆಗೆದಿತ್ತು. ತಕ್ಷಣ ನಾವೆಲ್ಲ ಒಗ್ಗೂಡಿ ನ್ಯಾಯಾಲಯದ ಮೆಟ್ಟಿಲೇರಿದ್ದಿವಿ. ಪ್ರಕರಣ ಈಗ ಸುಪ್ರೀಂಕೋರ್ಟ್-ನಲ್ಲಿದ್ದು, ಮುಂದಿನ ವಾರ ತೀರ್ಪು ಬರುವ ಸಾಧ್ಯತೆ ಇದೆ. ಆದರೆ ಈ ಮಧ್ಯೆ, ಅಧಿಕಾರಿಗಳು ಏಕಾಏಕಿ ಬಂದು ಮನೆಗಳನ್ನು ಧ್ವಂಸಗೊಳಿಸಿದ್ದಾರೆ' ಎಂದು ವೆಂಕಟೇಶ್ ಎಂಬ ಸ್ಥಳೀಯರು ಇಲ್ಲಿನ ವಿವಾದದ ಎಳೆಯನ್ನು ಬಿಚ್ಚಿಟ್ಟರು.












Click it and Unblock the Notifications