ಠುಸ್ಸೆಂದ ಸೂಪರ್ ಮೂನ್ ಗುಮ್ಮ

'ಚಂದ ಮಾಮ, ಚಕ್ಕುಲಿ ಮಾಮ, ನಿನ್ನನ್ನು ನೋಡಿ ನಗುತಿರುವಾ' ಎನ್ನುವಂತೆ ಇಂತಹ ಆಧುನಿಕ ಕಾಲದಲ್ಲೂ ತನ್ನ ಬಗ್ಗೆ ಸುಳ್ಳುಗಳ ಕಂತೆ ತೇಲಿಬಿಟ್ಟಿರುವುದನ್ನು ಕಂಡು ಚಂದ್ರ ಗೊಳ್ಳನೆ ನಕ್ಕಿದ್ದಾನೆ. ಆ ನಗುವಿನಲ್ಲಿ ಸ್ಮೈಲಿ ಚಂದ್ರ ಫಳಫಳ ಹೊಳೆದಿದ್ದಾನೆ. ಇನ್ನು, ತೀಕ್ಷ್ಣ ಒಳನೋಟದ ವ್ಯಂಗ್ಯಚಿತ್ರಕಾರ ಎಸ್.ವಿ. ಪದ್ಮನಾಭ್ ಅವರು ಕನ್ನಡಪ್ರಭದ ಪಂಚ್ ಮುಖಿಯಲ್ಲಿ (ಭಾನುವಾರ) ಕೆತ್ತಿರುವಂತೆ ಭೂಮಂಡಲದ ಕೊಳಕನ್ನು ನೋಡಿ 'ಛೇ... ಕೆಟ್ಟ ವಾಸನೆ. ನಾನು ಇಷ್ಟು ಹತ್ತಿರ ಬರಲೇ ಬಾರದಿತ್ತು' ಎಂದು ಸೂಪರ್ ಮೂನ್ ವಿಷಾದ ವ್ಯಕ್ತಪಡಿಸಿದ್ದರೂ ಅಚ್ಚರಿಯೇನಿಲ್ಲ.
18 ವರ್ಷಗಳ ಬಳಿಕ ಚಂದ್ರ ಭೂಮಿಗೆ ಸಮೀಪವಾಗಿ ಕಾಣಿಸಿಕೊಂಡಿದ್ದಾನೆ. ಶೇ. 14ರಷ್ಟು ದೊಡ್ಡದಾಗಿ ಮತ್ತು ಶೇ. 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದ ಎಂದು ದೆಹಲಿಯ ನೆಹರೂ ಪ್ಲಾನಿಟೋರಿಯಂನ ನಿರ್ದೇಶಕ ಎನ್. ರತ್ನಶ್ರೀ ಹೇಳಿದ್ದಾರೆ. ಇಂತಿಪ್ಪ ನಮ್ಮ ಚಂದದ ಚಂದಿರ ಕೇವಲ 3,56,577 ಕಿ.ಮೀ. ದೂರದಲ್ಲಿ ದೇದೀಪ್ಯಮಾನವಾಗಿದ್ದ. ಮಾರ್ಚ್ 19ರಂದು ಇಡೀ ಭೂಮಂಡಲ ನಾಶವಾಗಲಿದೆ. ಬರೀ ಮಳೆ, ಭೂಕಂಪ, ಅಗ್ನಿಪರ್ವತಗಳ ರುದ್ರ ನರ್ತನ ಮುಂತಾದ ಮಹಾ ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ. ಏಕೆಂದರೆ ಆವತ್ತು ಚಂದ್ರ ಭೂಮಿಗೆ ಅತ್ಯಂತ ಸನಿಹಕ್ಕೆ ಬರಲಿದ್ದಾನೆ. ಇದೇ ಕಾರಣ ಇಟ್ಟುಕೊಂಡು ಜ್ಯೋತಿಷಿಗಳ ವರ್ಗ ಆತಂಕದ ಸುದ್ದಿ ತೇಲಿಬಿಟ್ಟಿತ್ತು.
ಈ ಸುನಾಮಿ ಮತ್ತು ಸೂಪರ್ ಮೂನ್ ನಡುವೆ ಭೂಮ್ಯಾಕಾಶದಷ್ಟು ಅಂತರವಿದೆ. ಅಸಲಿಗೆ ಭೂಕಂಪ, ಸುನಾಮಿ ಭೂಮಿಯೊಳಗಿನ ವ್ಯತ್ಯಯಗಳು. ಅದಕ್ಕೂ ಚಂದ್ರನಿಗೂ ಥಳುಕು ಹಾಕುವುದಾದರೂ ಹೇಗೆ? ಎಂದು ವಿಜ್ಞಾನಿಗಳು ಜ್ಯೋತಿಷಿಗಳ ತರಲೆಯನ್ನು ಸಾರಸಗಟಾಗಿ ಮಿಥ್ಯಗೊಳಿಸಲು ಕಳೆದೊಂದು ವಾರದಲ್ಲಿ ಹರಸಾಹಸ ಪಟ್ಟಿದ್ದಾರೆ. ಯಾವ ಮಾಧ್ಯಮಗಳು ಜ್ಯೋತಿಷಿಗಳ ಪ್ರಮೇಯಕ್ಕೆ ಮಣೆ ಹಾಕಿದ್ದವೋ ಅವೇ ಮಾಧ್ಯಮಗಳು ವಿಜ್ಞಾನಿಗಳ ಭವಿಷ್ಯವಾಣಿಗೂ ವೇದಿಕೆ ಒದಗಿಸಿ, ಕೃತಾರ್ಥವಾಗಿವೆ. ಅಷ್ಟರಮಟ್ಟಿಗೆ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಿವೆ. ಇನ್ನಾದರೂ ಜ್ಯೋತಿಷಿಗಳ ಸೊಕಾಲ್ಡ್ ಭವಿಷ್ಯವಾಣಿಗೆ ಕಿವಿಗೊಡದಿರುವಷ್ಟು ಪ್ರಜ್ಞಾವಂತಿಕೆ ಮೆರೆಯಬೇಕಿದೆ.
ಅಂದಹಾಗೆ ಸೂಪರ್ ಮೂನ್ ಬಗ್ಗೆ ನಮ್ಮ ಕವಿವರ್ಯರು ಚಂದಿರನ ಕಂಡು ಕಡಲು ಉಕ್ಕುವುದು ಸಹಜ ಎಂದು ಹಾಡಿಹೊಗಳುತ್ತಿದದ್ದರೆ ಪಾಶ್ಚಾತ್ಯ ಜ್ಯೋತಿಷಿಗಳೇ ಸೂಪರ್ ಮೂನ್ ಬಗ್ಗೆ ಇಲ್ಲಸಲ್ಲದ ಆತಂಕ ವ್ಯಕ್ತಪಡಿಸುತ್ತಾ ಬಂದಿರುವುದು. 1979ರಲ್ಲಿ ರಿಚರ್ಡ್ ನೊಲ್ಲೆ ಎಂಬ ಜ್ಯೋತಿಷಿ ಚಂದ್ರ ಭೂಮಿಯ ಹತ್ತಿರಕ್ಕೆ ಬರುವುದನ್ನು ಗಮನಿಸಿ ಸೂಪರ್ ಮೂನ್ ಎಂದು ಮೊದಲ ಬಾರಿಗೆ ಉದ್ಘರಿಸಿದ್ದ.











Click it and Unblock the Notifications