ಬೇರ್ಪಟ್ಟ ಹಂಪೆ ಅಕ್ಕ-ತಂಗಿ ಸಯಾಮಿ

ಕಮಲಾಪುರದಿಂದ ಹಂಪೆಗೆ ಹೋಗುವ ದಾರಿಯಲ್ಲಿ ನೆಲ ಶಿವಾಲಯ ಸಮೀಪ ರಸ್ತೆಯ ಬದಿಯಲ್ಲಿ ಬರುವ ಎರಡು ಬೃಹತ್ ಕಲ್ಲುಗುಂಡುಗಳು ಒಂದನ್ನೊಂದು ಆತು ನಿಂತಿದ್ದವು. ಇದನ್ನು ಜನಪದರು ಅಕ್ಕತಂಗಿಯರ ಗುಂಡು ಎಂದು ಕರೆಯುತ್ತಾರೆ. ಈ ಬೃಹತ್ ಬಂಡೆಯೊಂದರ ಮೇಲಿನ ಭಾಗ ಸೀಳಿ, ಒಂದು ಭಾಗ ನೆಲಕ್ಕೆ ಕುಸಿದು ಬಿದ್ದಿದೆ. 8ಕ್ಕೂ ಹೆಚ್ಚು ಚೂರು ಬಂಡೆಗಳು ಸಿಡಿದು ಬಿದ್ದಿವೆ.
ಹಂಪೆಯ ಅಕ್ಕತಂಗಿಯರ ಗುಂಡು ಒಡೆಯಲು ಕಾರಣವೇನು ?
ಹಂಪೆಯ ಅಕ್ಕತಂಗಿಯರ ಗುಡ್ಡ ಎಂದೇ ಕರೆಯಲ್ಪಡುವ ಎರಡು ಬೃಹತ್ ಬಂಡೆಗಳಲ್ಲಿ ಒಂದು ಬೃಹತ್ ಬಂಡೆಯಲ್ಲಿ ಸೀಳು ಉಂಟಾಗಲು ಕಾರಣವೇನು ಎಂಬ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. 14 ಕಿ.ಮೀ. ದೂರದಲ್ಲಿಯೇ ಗುಡ್ಡಗಳಲ್ಲಿ ಮೈನಿಂಗ್ ಬ್ಲಾಸ್ಟಿಂಗ್ ನಡೆಯುತ್ತಿರುವುದರಿಂದ ಗಣಿಗಾರಿಕೆಯಿಂದಲೇ ಐತಿಹಾಸಿಕ ಈ ಬೃಹತ್ ಬಂಡೆಯಲ್ಲಿ ಸೀಳು ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಬೃಹತ್ ಬಂಡೆಯಲ್ಲಿ ಅಲ್ಲಲ್ಲಿ ಸೀಳು ಉಂಟಾಗಿದ್ದು, ಸುತ್ತಮುತ್ತಲಿನ ಗಿಡಗಂಟಿಗಳು ಬೆಳೆದು, ಅವುಗಳಲ್ಲಿ ಬೇರು ಸೇರಿಕೊಂಡು ಈ ಅನಾಹುತ ಘಟಿಸಿರಬಹುದು ಎಂಬ ಮಾತು ಕೇಳಿ ಬರುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬಂಡೆಯಲ್ಲಿ ಬೇರುಗಳು ಕಾಣಿಸುತ್ತಿವೆ. ರಸ್ತೆಯ ಪಕ್ಕವೇ ಈ ಬಂಡೆಗಳು ಇರುವುದರಿಂದ ಭಾರಿ ವಾಹನಗಳ ಓಡಾಟ ಮತ್ತೊಂದು ಕಾರಣವಿರಬಹುದು ಎಂದು ಕೆಲವರು ಹೇಳುತ್ತಾರೆ. ಹಂಪೆ ಉತ್ಸವದಲ್ಲಿ ಸಾಹಸ ಕ್ರೀಡೆಗಾಗಿ ಬಂಡೆ ಹತ್ತಲಿಕ್ಕಾಗಿ ಈ ಬೃಹತ್ ಬಂಡೆಗೆ ತೂತು ಹಾಕಿ, ಟ್ರಕ್ಕಿಂಗ್ ನಡೆಸಿದ್ದು ಮತ್ತೊಂದು ಕಾರಣ ಎಂದು ಸಹ ಹೇಳಲಾಗುತ್ತಿದೆ.
ನೈಸರ್ಗಿಕ ಕಾರಣದಿಂದ ಈ ಬೃಹತ್ ಬಂಡೆ ಸೀಳಿದೆ. 1970ರಲ್ಲಿಯೇ ಈ ಬಂಡೆಯಲ್ಲಿ ಸೀಳು ಕಾಣಿಸಿಕೊಂಡಿದ್ದವು ಎಂದು ರಾಜ್ಯ ಪುರಾತತ್ವ ಇಲಾಖೆಯ ಮೂಲಗಳು ತಿಳಿಸುತ್ತವೆ. ಅಕ್ಕತಂಗಿಯರ ಗುಡ್ಡ ಬಿದ್ದಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಕಮಲಾಪುರ, ಹಂಪಿ, ಕಡ್ಡಿರಾಂ ಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಹೊಸಪೇಟೆಯಿಂದಲೂ ಜನರು ತಂಡೋಪತಂಡವಾಗಿ ಜನರು ಬಂದು ವೀಕ್ಷಿಸುತ್ತಾ ತಮಗೆ ತೋಚಿದ ರೀತಿಯಲ್ಲಿ ಮಾತನಾಡುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು. ಪೊಲೀಸರು ಜನರನ್ನು ಬಂಡೆಯ ಬಳಿಗೆ ಹೋಗದಂತೆ ತಡೆದರು.
ಒಟ್ಟಿನಲ್ಲಿ ಜನಪದಕ್ಕೆ ಹಾಡಾಗಿದ್ದ, ಎಲ್ಲರ ಗಮನ ಸೆಳೆಯುತ್ತಿದ್ದ ಅಕ್ಕತಂಗಿಯರ ಗುಡ್ಡ ಒಡೆದು, ತನ್ನ ಸಹಜ ಸೌಂದರ್ಯ ಕಳೆದು ಕೊಂಡು ಕರೂಪಿಯಾಗಿ ಈ ಎಲ್ಲದಕ್ಕೂ ಸಾಕ್ಷಿಯಾಗಿ ನಿಂತಿರುವುದು ಮಾತ್ರ ಸತ್ಯವಾಗಿದೆ. ಕಮಲಾಪುರ ಹಂಪಿಯ ರಸ್ತೆಯ ಪಕ್ಕವೇ ಈ ಬೃಹತ್ ಬಂಡೆ ಸೀಳಿ ಬಿದ್ದಿದ್ದರಿಂದ ಈ ರಸ್ತೆಯಲ್ಲಿ ಸಂಚಾರವನ್ನು ಹಂಪಿ ಹಾಗೂ ಕಮಲಾಪುರ ಪೊಲೀಸರು ತಾತ್ಕಾಲಿಕ ನಿಲುಗಡೆ ಮಾಡಿದ್ದಾರೆ. ಸ್ಥಳಕ್ಕೆ ಶಾಸಕ ಆನಂದ್ ಸಿಂಗ್, ತಹಶೀಲ್ದಾರ್ ಪಿ.ಎಸ್. ಮಂಜುನಾಥ, ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿ ಕೆಂಪೇಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.











Click it and Unblock the Notifications