ವಿಶ್ವಕಪ್ 2011 ಮೇಲೆ ಲಷ್ಕರ್ ಉಗ್ರರ ಕಾರ್ಮೋಡ
ಬೆಂಗಳೂರು, ಮಾ.8: ಭಾರತ ಸೇರಿದಂತೆ ಉಪಖಂಡದಲ್ಲಿ ನಡೆದಿರುವ ವಿಶ್ವಕಪ್ 2011 ಟೂರ್ನಿಮೆಂಟ್ ಮೇಲೆ ಪಾಕಿಸ್ತಾನದ ಲಷ್ಕರ್ ಇ ತೋಯ್ಬಾ ಉಗ್ರರ ಕರಿ ನೆರಳು ಬಿದ್ದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಪ್ರಮುಖ ಸ್ಟೇಡಿಯಂಗೆ ಬಿಗಿ ಭದ್ರತೆ ಒದಗಿಸಲು ಕೇಂದ್ರ ಗುಪ್ತಚರ ಇಲಾಖೆ ಸೂಚಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ಒದಗಿಸಲಾಗಿದೆ. ಸಂಭಾವ್ಯ ಉಗ್ರರ ದಾಳಿ ಭೀತಿಯನ್ನು ಮನಗಂಡ ಬಿಸಿಸಿಐ ವಿಶ್ವಕಪ್ ಟೂರ್ನಿಮೆಂಟ್ ಮೇಲೆ ಸುಮಾರು 246 ಕೋಟಿ ರು ಗಳ ವಿಮೆ ಮಾಡಿಸಿದೆ.
ಕೆಎಸ್ ಸಿಎ ಸ್ಟೇಡಿಯಂ ಅಲ್ಲದೆ, ಅಹಮದಾಬಾದ್, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಕ್ರಿಕೆಟ್ ಮೈದಾನಗಳನ್ನು ಕೆಮಿಕಲ್ ಬಾಂಬ್ ಗಳ ಮೂಲಕ ಚಿಂದಿ ಮಾಡಲು ಉಗ್ರರು ಸ್ಕೆಚ್ ಹಾಕಿದ್ದಾರೆ ಎಂದು ಮಾಹಿತಿಯಲ್ಲಿ ಸೂಚಿಸಲಾಗಿದೆ. ಉಗ್ರರು 2010ರ ಅಕ್ಟೋಬರ್ ನಲ್ಲೇ ರಹಸ್ಯವಾಗಿ ಈ ಬಗ್ಗೆ ಸಭೆ ನಡೆಸಿದ್ದಾರೆ. ಪ್ರಮುಖ ಕ್ರೀಡಾಂಗಣಗಳ ನೀಲನಕ್ಷೆ, ರೇಖಾಚಿತ್ರಗಳನ್ನು ಸಂಗ್ರಹಿಸಿ ಸಂಚು ರೂಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಸೇನಾನಿ ಜಿಯಾವುದ್ದೀನ್ ಎನ್ನುವವನ್ನು ಬಂಧಿಸಿರುವ ದೆಹಲಿ ಪೊಲೀಸರಿಗೆ ಇತ್ತೀಚಿಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಗುಪ್ತಚರ ಇಲಾಖೆ ಈ ಸೂಚನೆ ನೀಡಿದೆ. ವಿಶ್ವಕಪ್ ಸಂದರ್ಭದಲ್ಲಿ ದಾಳಿಯ ಸಂಚು ರೂಪಿಸುತ್ತಿರುವುದು ದೆಹಲಿ ಪೊಲೀಸರ ತನಿಖೆ ವೇಳೆಯಲ್ಲಿ ಬಯಲಾಗಿದೆ. ಉಗ್ರರ ಹಿಟ್ ಲಿಸ್ಟ್ ನಲ್ಲಿ ಬೆಂಗಳೂರು ಅಗ್ರಪಂಕ್ತಿಯಲ್ಲಿರುವುದು ಆತಂಕಕಾರಿ ವಿಷಯವಾಗಿದೆ.











Click it and Unblock the Notifications