ಎನ್ನಾರೈಗಳೇ ತಾಯ್ನಾಡಿಗೆ ಬರುವ ಮುನ್ನ ಒಮ್ಮೆ ಯೋಚಿಸಿ

ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ಯಾನವನ್ನು ತುಸು ದುಬಾರಿ ಮಾಡಲಾಗಿದೆ. ಆಯ್ತು ಹೇಗೋ ಅಲ್ಲಿಂದ ಹಾರಿಕೊಡು ಬರುವಿರಿ ಎಂದಿಟ್ಟುಕೊಳ್ಳಿ. ಆ ನಂತರ ಇಲ್ಲಿ ಉಳಿದುಕೊಳ್ಳಲು ಲಕ್ಷುರಿ ಹೋಟೆಲ್ ಗಳು, ಅತಿಥಿ ಗೃಹಗಳು ಮತ್ತು ಉತ್ತಮ ರೆಸ್ಟೋರೆಂಟ್ ಗಳು ದುಬಾರಿಯಾಗಲಿವೆ. ಇಲ್ಲಿ ನಿಮಗೊಂದು ಗುಟ್ಟು ಹೇಳಲೇಬೇಕು. ಏನೆಂದರೆ ಭಾರತದಲ್ಲಿ ಬೆಲೆಗಳು ಈಗಾಗಲೇ ಗಗನದಲ್ಲಿವೆ. ಇಲ್ಲಿರುವ ಭಾರತೀಯರಿಗೆ ಎಲ್ಲವೂ ದುಬಾರಿಯಾಗಿದೆ. ಆದ್ದರಿಂದ ಏರಿರುವ ಬೆಲೆಗಳ ಜತೆಗೆ ನಿಮಗೆ ಆ ಎಕ್ಸ್ ಟ್ರಾ ಟ್ಯಾಕ್ಸ್ ವಿಧಿಸಲಾಗಿದೆ. ಆದ್ದರಿಂದ ಭಾರವಾದ ಪರ್ಸ್ ನೊಂದಿಗೆ ಬಂದು ಸ್ವಲ್ಪ ಹಗುರ ಮಾಡಿಕೊಂಡು ವಾಪಸಾಗಿ.
ಇನ್ನು ನಿಮ್ಮ ಆರೋಗ್ಯದ ಬಗ್ಗೆ ಕಳಕಳಿ ಇರಲಿ. ಶಸ್ತ್ರಚಿಕಿತ್ಸೆ ಅದೂ ಇದು ಅಂತ ಎಲ್ಲ ಅಲ್ಲೇ ಮುಗಿಸಿಕೊಂಡು ಬನ್ನಿ. ಏಕೆಂದರೆ ಇಲ್ಲಿ ಏರ್ ಕಂಡೀಷನ್ ಹೊಂದಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಸೇವಾ ತೆರಿಗೆಯನ್ನು ಸರಿಯಾಗಿ ಜಡಿಯಲಾಗಿದೆ.
ಸ್ವಲ್ಪ ಸಮಾಧಾನ'ಕರ' :
ಸ್ವಲ್ಪ ಸಮಾಧಾನ'ಕರ' ಎಂದರೆ ಆದಾಯ ತೆರಿಗೆಯದ್ದು. ಆದರೆ ಇಲ್ಲಿನ ಹಣದುಬ್ಬರ ಅದನ್ನೂ ತಿಂದುಹಾಕುತ್ತದೆ. ಮೂರು ವರ್ಷಗಳ ಹಿಂದೆಯೇ ನಿಮ್ಮ ವಾಸಸ್ಥಳದ ಪರದೇಶಗಳು ನಿಮಗಾಗಿಯೇ ವಿಶೇಷ ತೆರಿಗೆ ನೀತಿಗಳನ್ನು ಜಾರಿಗೊಳಿಸಿವೆ. ಸೊ ಭಾರತಕ್ಕೆ ಇನ್ನೂ ಆ ಭಾಗ್ಯ ಬಂದಿಲ್ಲ. ಆದ್ದರಿಂದ ಆದಾಯ ತೆರಿಗೆ ವಿನಾಯಿತಿಯಲ್ಲಿ ನಿಮಗೆ ಹೇಳಿಕೊಳ್ಳುವಂತಹುದೇನೂ ಇಲ್ಲ.
ಆದರೆ ನಿವೇಶನ, ಮನೆ ಖರೀದಿ ನಿಮಗೆ ಭಾರತ ನಿಮಗೆ ಪ್ರಶಸ್ತವಾಗಿದೆ. ಹಾಗೆಂದು ಇಲ್ಲಿ ಸ್ಥಿರಾಸ್ತಿಗಳ ಬೆಲೆ ಇಳಿದಿದೆ ಎಂದಲ್ಲ. ಮುದ್ರಾಂಕ ಶುಲ್ಕ ದೇಶಾದ್ಯಂತ ತರಹೇವಾರಿ ಇದೆ. ಆದಾಗ್ಯೂ, ನೀವು ಒಂದು ಕೈ ನೋಡಬಹುದು. ಇನ್ನು ಷೇರು, ಮ್ಯೂಚುಯಲ್ ಫಂಡ್ ಗಳಲ್ಲಿ ನೀವು ಹೂಡಿಕೆ ಮಾಡಿದರೆ ರಿಟರ್ನ್ ಗಳು ಚೆನ್ನಾಗಿಯೇ ಇವೆ. ಆದರೆ ಒಂದು ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ಮಾಡಿಸಬೇಕೆಂದರೆ ಎನ್ನಾರೈಗಳು ಹರಸಾಹಸ ಪಡಬೇಕಾಗಿದೆ. ಆದರೂ ಹೂಡಿಕೆಗಳ ಮೇಲಿನ ರಿಟರ್ನ್ ಗಳು ಚೆನ್ನಾಗಿವೆ. ವಿದೇಶಿ ಹೂಡಿಕೆದಾರರಿಗೆ ಭಾರತೀಯ ಬಂಡವಾಳ ಮಾರುಕಟ್ಟೆಯನ್ನು ಹೆಚ್ಚು ಮುಕ್ತಗೊಳಿಸಲಾಗಿದೆ. ಅದಕ್ಕೆ ಹೇಳೀದ್ದು ಭಾರತ ನಿಮಗೆ ಇನ್ನೂ ಪ್ರಶಸ್ತವಾಗಿದೆ ಎಂದು. ಹೆಚ್ಚು ಸ್ಥಿತಿವಂತ
ಮತ್ತು ಮಧ್ಯಮವರ್ಗದ ಎನ್ನಾರೈಗಳು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಭಾರತದಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭ ತಂದುಕೊಡಲಿದೆ.
ಪಾಶ್ಚಾತ್ಯ ರಾಷ್ಟ್ರಗಳು ಮಹಾ ಆರ್ಥಿಕ ಕುಸಿತದಿಂದ ಇನ್ನೂ ಚೇತರಿಸಿಕೊಳ್ಳದಿರುವಾಗ, ಉತ್ತರ ಆಫ್ರಿಕಾ, ಮಧ್ಯ ಪ್ರಾಚ್ಯ ರಾಷ್ಟ್ರಗಳು ಅಶಾಂತಿಯ ಗೂಡಾಗಿರುವಾಗ ಗುಳೆ ಎದ್ದು ಬರುತ್ತಿರುವ ಭಾರತೀಯರಿಗೆ ಇದು ಸ್ವಲ್ಪ ಸಮಾಧಾನಕರವಾಗಿದೆ.












Click it and Unblock the Notifications