ದೆಹಲಿಯಲ್ಲಿ ಮೆರೆದ ಕನ್ನಡ ಆಡುಭಾಷೆಯ ಸೊಗಡು

ಮುಖ್ಯ ಅತಿಥಿಗಳಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಬಸ್ತಿ ವಾಮನ್ ಶೆಣೈ ನಮ್ಮೊಂದಿಗಿದ್ದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ.ವೆಂಕಟಾಚಲ ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನಪದ ವಿದ್ವಾಂಸ, ವಿಮರ್ಶಕ ಮತ್ತು ಸಾಹಿತ್ಯ ಸಮಿತಿಯ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಮಾತೃಭಾಷಾ ದಿನದ ಹುಟ್ಟು : ಸಾಹಿತ್ಯ ಸಮಿತಿಯ ಸಂಚಾಲಕಿ ಹಾಗೂ ಸಹ ಕಾರ್ಯದರ್ಶಿ, ರೇಣುಕಾ ನಿಡಗುಂದಿಯವರು ಮುಖ್ಯ ಅತಿಥಿಗಳನ್ನು ಸ್ವಾಗತಿಸುತ್ತ, ಮಾತೃಭಾಷಾ ದಿನಾಚರಣೆಯ ಹಿನ್ನೆಲೆಯನ್ನು ವಿವರಿಸಿದರು. ಹಿಂದೆ ಭಾರತ ವಿಭಜನೆಯ ನಂತರ ಫೆಬ್ರವರಿ 21, 1971ರಲ್ಲಿ ಪಾಕಿಸ್ತಾನ ಬಾಂಗ್ಲಾದೇಶದ ಮೇಲೆ ಆಡಳಿತ ಹಾಗೂ ಶೈಕ್ಷಣಿಕವಾಗಿ ಉರ್ದು ಭಾಷೆಯ ಒತ್ತಡವನ್ನು ಹೇರಿತು. ಬಾಂಗ್ಲಾದೇಶದ ಸಾವಿರಾರು ವಿದ್ಯಾರ್ಥಿಗಳು ಅದನ್ನು ಪ್ರತಿಭಟಿಸಿ ದಂಗೆಯೆದ್ದರು. ಈ ಭಾಷಾ ಆಂದೋಲನದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಾಣತೆತ್ತರು. ಇದೇ ಸಂದರ್ಭದಲ್ಲಿ ಯುರೋಪಿಯನ್ ದೇಶಗಳಲ್ಲೂ ಸ್ಥಾನಿಕ ಭಾಷೆಗಳ ದಮನವಾಗುತ್ತಿದೆಯೆಂಬ ಕೂಗು ಕೇಳತೊಡಗಿತ್ತು. ಇದೆಲ್ಲವನ್ನೂ ಗಮನಿಸಿದ ಯುನೆಸ್ಕೊ ಫೆಬ್ರವರಿ 21ನ್ನು ಅಂತಾರಾಷ್ಟ್ರಿಯ ಮಾತೃಭಾಷಾ ದಿನವನ್ನಾಗಿ ಘೋಷಿಸಿತ್ತು.
ಮುಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತ ಡಾ.ಬಿಳಿಮಲೆ ಅವರು, ಕ್ರಿ.ಶ. 850ರಲ್ಲಿ ಕವಿರಾಜಮಾರ್ಗದಲ್ಲಿ ಕವಿ ಕನ್ನಡಂಗಳ್ ಎಂದು ಇರುವುದನ್ನು ಉಲ್ಲೇಖಿಸಿ, ಇದು ಹಲವು ಬಗೆಯ ಕನ್ನಡದ ಅಸ್ತಿತ್ವವನ್ನು ಹೇಳುತ್ತದೆ ಎಂದರು. ಕ್ರಿ.ಶ. 450ರ ಹಲ್ಮಿಡಿ ಶಾಸನದ ಪೂರ್ವದ ಹಳೆಗನ್ನಡದಿಂದ ಇಂದಿನವರೆಗೆ ಕನ್ನಡವು ಅನೇಕ ಹಂತಗಳನ್ನು ದಾಟಿ ಬಂದಿರುವುದನ್ನು ಹೇಳಿ, ಕನ್ನಡ ಎಂದೂ ಒಂದೇ ಆಗಿರಲಿಲ್ಲ ಅದರಲ್ಲಿ ಅನೇಕ ಉಪಭಾಷೆ, ಪ್ರಭೇದಗಳಿದ್ದವು ಎಂದರು. ಇಂದು ಇಂಡೋ ಆರ್ಯನ್, ಇಂಡೋ ಟಿಬೆಟಿಯನ್ ಮತ್ತು ದ್ರಾವಿಡಿಯನ್ ಎಂಬ ಮೂರು ಬಗೆಯ ಭಾಷಾ ಪ್ರಭೇದಗಳು ಭಾರತದಲ್ಲಿ ಇದ್ದು, ಅದರಲ್ಲಿ ಕನ್ನಡವು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದೆ. ಈ ದ್ರಾವಿಡ ಭಾಷಾ ವರ್ಗದಲ್ಲಿ ಸುಮಾರು 24 ಸ್ವಂತ ಭಾಷೆಗಳಿವೆ. ಕನ್ನಡ ಭಾಷೆಯ ಸಂಸ್ಕೃತಿ ಮತ್ತು ಇತಿಹಾಸ ಬಗ್ಗೆ ವಿದ್ವತ್ಪೂರ್ಣವಾಗಿ ವಿವರಿಸಿದರು. ಅತಿಥಿಗಳಾದ ಬಸ್ತಿ ವಾಮನ್ ಶೆಣೈ ಅವರು, ಭಾಷೆಗಳ ದಮನದ ಭಯ ನಮಗಷ್ಟೇ ಅಲ್ಲ ಫ್ರೆಂಚ್, ಜರ್ಮನ್ ಭಾಷೆಗಳಿಗೂ ಉಂಟು. ಜಾಗತೀಕರಣದ ಈ ದಿನಗಳಲ್ಲಿ ನಾವಿಂದು ಭಾಷಾ ಪ್ರಭೇದಗಳನ್ನು ಉಳಿಸಿಕೊಂಡು ಮುಂದೆ ಹೋಗಬೇಕಾಗಿದೆ ಎಂದರು.
ಆಯಾ ಭಾಷೆಯಲ್ಲಿ ಭಾಷಣ : ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ತಮ್ಮ ತಮ್ಮ ಭಾಷೆಗಳಲ್ಲಿ ಮಾತನಾಡಿದರು. ಮೊದಲಿಗೆ ಪಿ.ಎನ್. ಅಪ್ಪಯ್ಯ ಕೊಡವ ತಕ್ ಭಾಷೆಯಲ್ಲಿ ತಮ್ಮ ಸಂಸ್ಕೃತಿ -ಪರಂಪರೆಯ ಬಗ್ಗೆ ಮಾತನಾಡಿದರು. ಕೊಡವ ಭಾಷೆ 2000 ವರ್ಷಕ್ಕೂ ಹಳೆಯ ಸ್ವತಂತ್ರ ಭಾಷೆ. ಇದಕ್ಕೆ ಲಿಪಿ ಇಲ್ಲ. ಬರೆಯಲು ಕನ್ನಡವನ್ನೇ ಬಳಸುತ್ತಾರೆ. ಇವರಲ್ಲಿ 21 ಜನಾಂಗಗಳು ಹಾಗೂ ಅವುಗಳ ತಕ್ಕ ರೂಪಭೇದಗಳಿವೆ. ತುಳು ಕೂಡ ಸ್ವಂತ್ರ ಭಾಷೆ. ಕನ್ನಡದಷ್ಟೇ ಹಳೆಯದು ಎಂದು ಭಾಷೆಯ ಬಂಧವನ್ನು ವಿವರಿಸಿದರು. ಕೆ.ಎಸ್.ಜಿ ಶೆಟ್ಟಿ ತಮ್ಮ ಬಾಲ್ಯದ ದಿನಗಳನ್ನು ತುಳು ಭಾಷೆಯಲ್ಲಿ ನೆನೆದರು.
ಶಿವಳ್ಳಿ ತುಳುವಿನಲ್ಲಿ ಕೆ.ಆರ್.ರಾಮಮೂರ್ತಿಯವರು ಮಾತನಾಡಿದರು. ಶ್ರೀನಿವಾಸ್ ಅವರು ಅರೆಭಾಷೆಯಲ್ಲಿ ಅಲ್ಲಿನ ಜನರ ಪಾನಪ್ರಿಯತೆ ಮತ್ತು ಹುತ್ತರಿ ಹಬ್ಬ ಮತ್ತಿತರ ಆಚರಣೆಗಳ ಹಾಸ್ಯಮಯ ಘಟನೆಗಳನ್ನು ನೆನಪಿಸಿಕೊಳ್ಳುತ್ತ ಸಭಿಕರೆಲ್ಲ ನಗುವಂತೆ ಮಾಡಿದರು. ಚಿತ್ತರಂಜನ್ ದಾಸ್ ಅವರು ಹವ್ಯಕ ಭಾಷೆಯ ಸೊಗಡಿನಲ್ಲಿ ಒಂದು ಮದುವೆ ಪ್ರಸಂಗವನ್ನು ಬಣ್ಣಿಸಿದರು. ಪಂಪ, ರನ್ನರ ಕಾವ್ಯಗಳಲ್ಲಿ ಕೂಡ ಹವ್ಯಕ ಪದಗಳು ಕಾಣಸಿಗುತ್ತವೆಂಬುದನ್ನು ಡಾ.ಬಿಳಿಮಲೆ ತಿಳಿಸಿದರು. ಮಂಡ್ಯ ಕನ್ನಡದಲ್ಲಿ ಪಿ.ಸಿ ಶ್ರೀನಿವಾಸ್ ಮತ್ತು ಜಿ.ಎಮ್.ಭಾರತಿ ಅವರು ಮಾತನಾಡಿದರೆ, ಬಿಜಾಪುರ ಕನ್ನಡದಲ್ಲಿ ಇಂಗಳೆಶ್ವರ್ ಅವರು ಜಟಕಾಸಾಬಿ ಜೊತೆಗಿನ ಸಂಭಾಷಣೆಯಲ್ಲಿ ಹೇಗೆ ಕನ್ನಡ ಉರ್ದು ಮಿಳಿತವಾಗುತ್ತವೆಂಬುದನ್ನು ತೋರಿಸಿದರು.
ರೇಣುಕಾ ನಿಡಗುಂದಿಯವರು ಧಾರವಾಡವೆಂದರೆ ಧಾರವಾಡ ಪೇಡೆ, ಕಟಕ ರೊಟ್ಟಿ, ಎಣೆಗಾಯಿ ಪಲ್ಲೇ, ಚಟ್ನಿ ನೆನಪಾಗುತ್ತವೆ. ವರಕವಿ ದ.ರಾ.ಬೇಂದ್ರೆ, ಆನಂದಕಂದ, ವಿ.ಕೆ.ಗೋಕಾಕ್, ಕೀರ್ತಿನಾಥ ಕುರ್ತಕೋಟಿ, ಗಿರೀಶ್ ಕಾರ್ನಾಡ, ಲೀಲಾ ಚಿಟ್ನಿಸ್ ಹೀಗೆ ಕನ್ನಡಕ್ಕೆ ಲೆಕ್ಕವಿಲ್ಲದಷ್ಟು ಹೆಸರಾಂತ ಸಾಹಿತಿಗಳನ್ನು, ಸಂಗೀತಕಾರರನ್ನು, ರಂಗ ಕಲಾವಿದರನ್ನು ಕೊಟ್ಟ ನಾಡಿನಲ್ಲಿ ಹುಟ್ಟಿದ್ದು ತಮ್ಮ ಪುಣ್ಯವೆಂದರು.
ಸಂತೋಷಕುಮಾರ್ ಉಪಾಧ್ಯಾಯ ಕುಂದಾಪುರ ಕನ್ನಡದಲ್ಲಿ ಮಾತನಾಡಿದರು. ನಂದಿನಿ ಮಲ್ಯ ಅವರು ಕೊಂಕಣಿಯ ಸವಿಯನ್ನು ಉಣಬಡಿಸಿದರು. ಎನ್.ಆರ್.ಶ್ರೀನಾಥ ಅವರು ಮೈಸೂರು ಕನ್ನಡದಲ್ಲಿ ಅನುಭವ ಹಂಚಿಕೊಂಡರು. ಬೆಳಗಾವಿ ಕನ್ನಡದಲ್ಲಿ ಮೃತ್ಯುಂಜಯ ನವಿಲಗಟ್ಟಿಯವರು ಆ ಕಡೆಯ ಬೈಗಳೂ ಕೂಡ ಪ್ರೀತಿಯಲ್ಲೇ ಆಡಿದವಾಗಿರುತ್ತವೆಂಬುದನ್ನು ಉದಾಹರಿಸಿದರು. ಎಸ್. ಗಿರೀಶ್ ಅವರು ಬೆಂಗಳೂರು ಗ್ರಾಮೀಣ ಭಾಗವಾದ ರಾಮನಗರ ಪ್ರಾಂತ್ಯದ ಕನ್ನಡದಲ್ಲಿ ಮಾತನಾಡುತ್ತ ಉತ್ತರ ಕರ್ನಾಟಕ ಮತ್ತು ಮಂಗಳೂರಿಗರು ಸೇರಿದಾಗ ಆಗುವ ಭಾಷಾ ಆವಾಂತರವನ್ನು ಬಣ್ಣಿಸಿ ಜನರನ್ನು ನಗೆಗಡಲಿನಲ್ಲಿ ತೇಲಿಸಿದರು.
ಮಳೆಯ ಮುನ್ಸೂಚನೆಯೇ ಇರದ ರಾಜಧಾನಿ ದೆಹಲಿ ಮುಂಜಾನೆಯ ಹೂಬಿಸಿಲಿನಲ್ಲಿ ಅರಳಿ, ಮಧ್ಯಾಹ್ನದವರೆಗೂ ಹಿತವಾಗಿದ್ದ ಬಿಸಿಲು ಇದ್ದಕ್ಕಿದ್ದಂತೆ ಮರೆಯಾಗಿ ಸಂಜೆ ಧಾರಾಕಾರವಾಗಿ ಸುರಿಯತೊಡಗಿತ್ತು. ಸುರಿವ ಮಳೆಯನ್ನು ಲೆಕ್ಕಿಸದೆ ಬಂದ ಕನ್ನಡಪ್ರಿಯ ಜನರೆಲ್ಲ ತಮ್ಮ ತಮ್ಮ ಊರಿನ, ಮನೆಯ ಆಡುಭಾಷೆಯ ಸೊಗಡಿನಲ್ಲಿ ಮಾತನಾಡುತ್ತ, ನಕ್ಕು ನಗಿಸಿ ಆನಂದಿಸಿದ್ದು ಮರೆಯಲಾರದ ಸುಂದರ ಸಂಜೆಯೆನಿಸಿತು. ಸಂಘದ ಅಧ್ಯಕ್ಷರು ಭಾಷೆಯ ಇತಿ-ಮಿತಿಗಳನ್ನು ಮೀರಿ ಸಂಘ ಬೆಳೆದಿದೆ. ನಮ್ಮ ಭೌದ್ಧಿಕ ವೈಚಾರಿಕತೆಯೂ ಕೂಡ ಎಲ್ಲವನ್ನು ಮೀರಿ ಬೆಳೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಧಾನ ಕಾರ್ಯದರ್ಶಿ, ಸಿ.ಎಮ್ ನಾಗರಾಜ್ ಅವರು ಎಷ್ಟೇ ಪ್ರಾದೇಶಿಕ ಉಪಭಾಷೆ -ಪ್ರಭೇದಗಳಿದ್ದರೂ ನಾವೆಲ್ಲ ಕನ್ನಡಿಗರೂ ಒಂದೇ ಎನ್ನುತ್ತ ವಂದಿಸಿದರು.












Click it and Unblock the Notifications