ಉಗ್ರರ ದಾಳಿ ಮುನ್ನೆಚ್ಚರಿಕೆ : ರಾಜ್ಯದಲ್ಲಿ ಕಟ್ಟೆಚ್ಚರ

ರಾಜ್ಯ ಗೃಹ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ, ಈ ಸುದ್ದಿಯನ್ನು ದೃಢಪಡಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿರುವುದಾಗಿ ನುಡಿದರು. ಆದರೆ, ರಾಜ್ಯದೊಳಗೆ ಉಗ್ರರು ಈಗಾಗಲೆ ನುಸುಳಿರುವ ಸಾಧ್ಯತೆಯನ್ನು ತಳ್ಳಿಹಾಕಿದರು.
ಹೊಸವರ್ಷ ಆಚರಣೆಯ ಸಂದರ್ಭದಲ್ಲಿ ವಿದೇಶಿಯರಿರುವ ಜಾಗಗಳ ಮೇಲೆ, ಜನನಿಬಿಡವಾಗಿರುವ ದೇವಸ್ಥಾನಗಳ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ರಾಜ್ಯಕ್ಕೆ ಮುನ್ನೆಚ್ಚರಿಕೆ ನೀಡಿದೆ. ಹೊಸವರ್ಷದ ಸಂದರ್ಭದಲ್ಲಿ ಇಡೀ ಜಗತ್ತನ್ನೇ ಮೈಮರೆತಿರುವ ಸಂದರ್ಭದಲ್ಲಿ ದಾಳಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕೇಂದ್ರ ರವಾನಿಸಿರುವ 550 ಸಿಬ್ಬಂದಿಗಳಿರುವ ಪ್ಯಾರಾ ಮಿಲಿಟರಿ ದಳ ಕರಾವಳಿಯಲ್ಲಿ ಹದ್ದಿನ ಕಣ್ಣಿಡಲಿದೆ. ಪೊಲೀಸ್ ಪಡೆ ಕೂಡ ಹೆಚ್ಚಿನ ನಿಗಾವಹಿಸಿ ರಕ್ಷಣೆಗೆ ಆದ್ಯತೆ ನೀಡಲಿದ್ದಾರೆ. ಸಾಫ್ಟ್ ವೇರ್ ಕಂಪನಿ ಮತ್ತು ಬೃಹತ್ ಅಂಗಡಿ ಸಮುಚ್ಚಯಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಸಭೆಯಲ್ಲಿ ಗೃಹ ಸಚಿವ ಆರ್ ಅಶೋಕ್, ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್, ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ, ಪ್ರಧಾನ ಗೃಹ ಕಾರ್ಯದರ್ಶಿ ಕೆಎಂ ಶಿವಕುಮಾರ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು. [ಉಗ್ರರ ದಾಳಿ]












Click it and Unblock the Notifications