ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಅಗ್ನಿ ದುರಂತಕ್ಕೆ ನಾಲ್ವರ ಸಜೀವ ದಹನ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Fire accident in Mysuru
ಮೈಸೂರು, ಡಿ. 25 : ಮೈಸೂರಿನ ಗುಜರಿ ಅಂಗಡಿಯೊಂದರಲ್ಲಿ ಸಂಭವಿಸಿದ ಆಕಸ್ಮಿಕ ಸ್ಪೋಟದಿಂದ ಭೀಕರ ಬೆಂಕಿ ಅನಾಹುತ ಸಂಭವಿಸಿ ನಾಲ್ವರು ಸಜೀವ ದಹನಗೊಂಡು, ಆರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ ಪರಿಣಾಮ ಮುಂದೆ ಸಂಭವಿಸಬಹುದಾಗಿದ್ದ ಹೆಚ್ಚಿನ ದುರಂತ ತಪ್ಪಿಸಿದಂತಾಗಿದೆ.

ನಗರದ ಮಂಡಿಮೊಹಲ್ಲಾದ ಉಮರ್ ಖಯಾಮ್ ರಸ್ತೆಯ ಬಿಟಿಮಿಲ್ ಎರಡನೇ ಈದ್ಗಾ ಬಳಿ ಹಳೆಯ ಏರ್‌ಫ್ರೆಶ್ನರ್‌ಗಳನ್ನು ಸಂಗ್ರಹಿಸಿ ರವಾನೆ ಮಾಡುವ ಗುಜರಿ ಅಂಗಡಿಯೊಂದಿದ್ದು, ಇಲ್ಲಿ ಕೆಲವು ಹಳೆಯ ಏರ್‌ಫ್ರೆಶ್ನರ್ ಬಾಟಲಿಗಳನ್ನು ಜಜ್ಜಿ ಅವುಗಳ ಮುಚ್ಚಳ ಹಾಗೂ ಬಾಟಲಿಗಳನ್ನು ಬೇರೆ ಮಾಡುವ ಕೆಲಸ ನಡೆಯುತ್ತಿತ್ತೆನ್ನಲಾಗಿದೆ. ಈ ಏರ್‌ಫ್ರೆಶ್ನರ್ ಬಾಟಲಿಗಳಲ್ಲಿ ಸೆಂಟ್ ಜೊತೆ ಗ್ಯಾಸ್ ಮಿಕ್ಸ್ ಮಾಡಲಾಗುವುದರಿಂದ ಬಾಟಲಿನಲ್ಲಿ ಗ್ಯಾಸ್ ಹಾಗೆಯೇ ಉಳಿದಿರುತ್ತವೆಯಂತೆ.

ಈ ನಡುವೆ ಮಧ್ಯಾಹ್ನ ಸುಮಾರು 1.45ರ ವೇಳೆಗೆ ಹಳೆಯ ಸ್ಟಾಕ್‌ಗಳ ಕೆಲವು ಬಾಟಲಿಗಳನ್ನು ಬಿಸಿಲಿನಲ್ಲಿಟ್ಟು ಅವುಗಳನ್ನು ಜಜ್ಜಿ ಒಡೆಯುತ್ತಿದ್ದ ಸಂದರ್ಭ ಸ್ಪೋಟಗೊಂಡಿದ್ದು, ಇದರಿಂದ ಹಾರಿದ ಬೆಂಕಿ ಕಿಡಿ ಸುತ್ತಮುತ್ತ ಹರಡಿದ್ದ ಪ್ಲಾಸ್ಟಿಕ್ ವಸ್ತುಗಳಿಗೆ ತಾಗಿತೆನ್ನಲಾಗಿದೆ. ಈ ಸಂದರ್ಭ ಒಳಗಿದ್ದ ಕೆಲಸಗಾರನೊಬ್ಬ ಚೀರಾಡುತ್ತಾ ಹೊರಬಂದಿದ್ದಾನೆ. ಈತನ ಬಟ್ಟೆಗೆ ಬೆಂಕಿ ತಗುಲಿ ಉರಿಯುತ್ತಿದ್ದುದನ್ನು ನೋಡಿದ ಸಾರ್ವಜನಿಕರು ಬೆಂಕಿಯನ್ನು ನಂದಿಸಿದರಲ್ಲದೆ, ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು.

ಅಷ್ಟರಲ್ಲಿಯೇ ಸಾರ್ವಜನಿಕರು ಹರಸಾಹಸ ಮಾಡಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದ ಮೂವರನ್ನು ಅಂಗಡಿಯೊಳಗಿನಿಂದ ಹೊರ ಎಳೆದು ತಂದರಾದರೂ ಅಲ್ಲೇ ಉಳಿದಿದ್ದ ನಾಲ್ವರು ಸಜೀವ ದಹನಗೊಂಡರು. ಅವರ ಪೈಕಿ ಓರ್ವನನ್ನು ಸೈಯ್ಯದ್ ಅಬ್ದುಲ್ ವಾಜಿದ್ ಎಂದು ಗುರುತಿಸಲಾಗಿದ್ದು, ಉಳಿದ ಮೂವರ ಬಗ್ಗೆ ತಿಳಿದು ಬಂದಿಲ್ಲ. ಗಾಯಗೊಂಡವರ ಪೈಕಿ ಚಾಂದ್ ಪಾಷಾ, ನಯಾಜ್, ವಾಸಿನ್, ತನ್ವೀರ್ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಅಕ್ರಂಪಾಷಾ, ಶಹಬುದ್ದೀನ್ ಅವರು ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಕಾಲದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದ್ದರಿಂದ ಇನ್ನಷ್ಟು ಅನಾಹುತ ತಪ್ಪಿದಂತಾಗಿದೆ. ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಭೀಕರ ದುರಂತ ಸಂಭವಿಸಿರುವುದು ಕ್ರಿಸ್ಮಸ್ ಹಬ್ಬದ ಆಚರಣೆಯ ಮೇಲೆ ಕಪ್ಪು ನೆರಳು ಹಾಸಿದಂತಾಗಿದೆ. ಈ ಹಿಂದೆ ಕೂಡ ಇಂಥ ಅಗ್ನಿ ಅನಾಹುತ ಸಂಭವಿಸಿದ್ದರೂ ಮುನ್ನೆಚ್ಚರಿಕೆ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. [ನಾಗರಿಕ ಪತ್ರಕರ್ತ]

English summary
Big fire accident in Thilak Nagar in Mysore at a scrap shop. 4 people charred to death and 6 seriously injured. Mysuru district news by BM Lavakumar, citizen journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X