ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?

ಇವತ್ತು ಪತ್ರಿಕೆಗಳು, ನ್ಯೂಸ್ ವೆಬ್‌ಸೈಟ್‌ಗಳು ಕೂಡ ಸದಾ ಹೊಸತನಗಳಿಂದ ಕೂಡಿದ ಸಾಂದರ್ಭಿಕ ಲೇಖನಗಳನ್ನೇ ಬಯಸುವುದರಿಂದ ಅಂತಹ ವಿಷಯಗಳನ್ನೊಳಗೊಂಡ ಲೇಖನಗಳನ್ನು ಬರೆಯುವ ಪ್ರಯತ್ನವನ್ನು ಬರಹಗಾರರು ಮಾಡಬೇಕಾಗುತ್ತದೆ. ಮೊದಮೊದಲು ಹವ್ಯಾಸಕ್ಕೆಂದು ಬರೆದ ಹಲವು ಮಂದಿ ಇಂದು ಒಳ್ಳೆಯ ಬರಹಗಾರರಾಗಿದ್ದಾರೆ, ಪತ್ರಕರ್ತರಾಗಿದ್ದಾರೆ.
ನಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಗ್ರಹಿಸಿಕೊಂಡು ಅದನ್ನು ಪತ್ರಿಕೆಯಲ್ಲಿ ಪ್ರಕಟವಾಗುವ ಓದುಗರ ಪತ್ರ (ಪತ್ರಿಕೆಗಳು ತನ್ನದೇ ಹೆಸರನ್ನಿಟ್ಟಿರುತ್ತವೆ) ವಿಭಾಗಕ್ಕೆ ಬರೆಯುವ ಮೂಲಕ ಸಂಬಂಧಿಸಿದವರ ಗಮನಸೆಳೆಯಬಹುದು. ಪತ್ರಿಕೋದ್ಯಮಕ್ಕೆ ಕಾಲಿಡುವ ಪತ್ರಕರ್ತರು ಓದುಗರ ಪತ್ರ ಬರೆಯುವ ಮೂಲಕ ಬರವಣಿಗೆ ಆರಂಭಿಸಬಹುದು. ಏಕೆಂದರೆ ಪತ್ರಿಕೋದ್ಯಮದ ಮೊದಲ ಕಲಿಕೆಯೇ ಓದುಗರ ಪತ್ರಬರೆಯುವುದು ಎಂದರೆ ತಪ್ಪಾಗಲಾರದು.
ನಾಗರಿಕ ಪತ್ರಕರ್ತರಿಗೆ ದಟ್ಸ್ ಕನ್ನಡದ ಮುಕ್ತ ಆಹ್ವಾನ!
ಪತ್ರಕರ್ತನಾಗ ಬಯಸುವನಿಗೆ ಮೊದಲಿಗೆ ತನ್ನ ಸುತ್ತಮುತ್ತ ಏನಿದೆ? ಏನು ನಡೆಯುತ್ತಿದೆ? ಯಾವುದು ಸಮಸ್ಯೆ ಎಂಬುವುದರ ಅರಿವಿರಬೇಕು. ಅಲ್ಲದೆ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸಿಸುವ, ಹೆಚ್ಚು, ಹೆಚ್ಚು ಓದುವ ಆಸಕ್ತಿಯನ್ನು ಹೊಂದಿರಬೇಕು. ಇಂದು ವಿವಿಧ ಪತ್ರಿಕೆಗಳಿಗೆ ಬರೆಯುತ್ತಿರುವ ಹವ್ಯಾಸಿ ಪತ್ರಕರ್ತರ ದೊಡ್ಡ ದಂಡನ್ನೇ ನಾವು ಕಾಣಬಹುದು. ಕೃಷಿ, ವ್ಯಾಪಾರ, ಶಿಕ್ಷಕ, ಉಪನ್ಯಾಸಕರಾಗಿದ್ದುಕೊಂಡು ಹವ್ಯಾಸಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಹಲವರು ನಮ್ಮ ಮುಂದಿದ್ದಾರೆ. ಇವರಿಗೆ ಯಾವ ಪತ್ರಿಕೆಗಳು ಎಂತಹ ಲೇಖನಗಳನ್ನು ಕೇಳುತ್ತವೆ ಎಂಬ ಅರಿವು ಇರುತ್ತದೆ. ಹಾಗಾಗಿ ಆಯಾಯ ಪತ್ರಿಕೆಗಳಿಗೆ ಸರಿಹೊಂದುವಂತಹ ಲೇಖನಗಳನ್ನು ಬರೆಯುತ್ತಾರೆ. ಇದರಿಂದ ಪ್ರಚಾರ ಜೊತೆಗೆ ಒಂದಷ್ಟು ಸಂಭಾವನೆಯೂ ಸಿಗುತ್ತದೆ.
ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ನ್ಯೂಸ್ ವೆಬ್‌ಸೈಟ್‌ಗಳನ್ನು ಹರಡಿಕೊಂಡು ಒಂದೆರಡು ಬಾರಿ ನೋಡಿದರೆ ಯಾವ ಪತ್ರಿಕೆ ಯಾವುದನ್ನು ಬಯಸುತ್ತದೆ ಎಂಬುವುದು ಗೊತ್ತಾಗಿ ಬಿಡುತ್ತದೆ. ಯಾವುದೇ ಒಂದು ವಿಷಯದ ಬಗ್ಗೆ ಬರೆಯಲು ಹೊರಟಾಗ ಆ ಬಗ್ಗೆ ಅಗತ್ಯ ಮಾಹಿತಿಗಳನ್ನು ಕಲೆಹಾಕಬೇಕು. ಬಳಿಕ ಬರೆಯಲು ಪ್ರಾರಂಭಿಸಬೇಕು. ಓದಿಸಿಕೊಂಡು ಹೋಗುವಂತೆ ಪದಗಳನ್ನು ತಪ್ಪಿಲ್ಲದಂತೆ ಜೋಡಿಸುವುದು ಸುಲಭದ ಕೆಲಸವಲ್ಲ ಅದು ಸಿದ್ದಿಸಿತೆಂದರೆ ಸರಾಗವಾಗಿ ಬರೆಯುತ್ತಾ ಹೋಗಬಹುದು. ಹೆಚ್ಚಿನ ಮಂದಿ ಪದಗಳನ್ನು ಬರೆಯುವಾಗ ತಪ್ಪುಗಳನ್ನು ಮಾಡುತ್ತಾರೆ. ಕನ್ನಡದ ಕೆಲವು ಪದಗಳಲ್ಲಿ ಅಕ್ಷರಗಳನ್ನು ಬರೆಯುವಾಗ ತಪ್ಪುಗಳನ್ನು ಮಾಡುತ್ತಾರೆ. ಯಾವುದಾದರೂ ಪದಗಳ ಬಗ್ಗೆ ಗೊಂದಲ ಉಂಟಾದಾಗ ತಕ್ಷಣ ಶಬ್ದಕೋಶಗಳನ್ನು ನೋಡಿ ಗೊಂದಲ ಪರಿಹರಿಸಿಕೊಳ್ಳಬೇಕು.
ಸಾಮಾನ್ಯವಾಗಿ ಪತ್ರಿಕೋದ್ಯಮ ಪದವಿ ಪಡೆದ ವಿದ್ಯಾರ್ಥಿಗಳಿಗೆ ತಕ್ಷಣಕ್ಕೆ ಪತ್ರಿಕೆಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿಲ್ಲ ಎಂದು ಚಿಂತಿಸುವ ಬದಲು ಫ್ರೀಲಾನ್ಸ್ ಪತ್ರಕರ್ತರಾಗಿ ಬರವಣಿಗೆ ಆರಂಭಿಸಿದರೆ ಮುಂದಕ್ಕೆ ಅವಕಾಶ ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ. ನೀವು ಬರೆದ ಲೇಖನಗಳೆಲ್ಲವನ್ನೂ ಪತ್ರಿಕೆಗಳು ಪ್ರಕಟಿಸುತ್ತವೆ ಎನ್ನಲಾಗುವುದಿಲ್ಲ. ಆ ಲೇಖನದ ವಿಷಯ, ಬರವಣಿಗೆಯ ಶೈಲಿ, ಪ್ರಸ್ತುತ ವಿದ್ಯಮಾನಗಳಿಗೆ ಅದು ಸೂಕ್ತವೇ ಎಲ್ಲವನ್ನೂ ಸಂಪಾದಕರು ಗಮನಿಸುತ್ತಾರೆ. ಬಳಿಕವಷ್ಟೆ ಪ್ರಕಟಣೆಗೆಗೆ ಯೋಗ್ಯವಾಗಿದ್ದರೆ ತೆಗೆದುಕೊಳ್ಳುತ್ತಾರೆ. ನೀವು ಕಳಿಸಿದ ಲೇಖನ ಪ್ರಕಟವಾಗಿಲ್ಲ ಎಂಬ ಕಾರಣಕ್ಕೆ ನಿರಾಶೆ ಪಡದೆ, ಬರವಣಿಗೆ ನಿಲ್ಲಿಸದೆ ಮುಂದುವರೆಸಿ, ಬರೆಯುತ್ತಿದ್ದಂತೆಯೇ ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ.
ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯನಿರತ ಪತ್ರಕರ್ತರಿಗೆ ಹೋಲಿಸಿದರೆ, ಫ್ರೀಲಾನ್ಸ್ ಪತ್ರಕರ್ತರಿಗೆ ಯಾವುದೇ ವಿಷಯದ ಬಗ್ಗೆ ಅಧ್ಯಯನ, ಮಾಹಿತಿ ಸಂಗ್ರಹಣೆ ಹಾಗೂ ಬರೆಯಲು ಹೆಚ್ಚಿನ ಸಮಯಾವಕಾಶವಿರುತ್ತದೆ. ಅವರೇ ವಿಷಯಗಳನ್ನು ಆಯ್ದುಕೊಳ್ಳುವುದರಿಂದ ಒತ್ತಡವೂ ಇರುವುದಿಲ್ಲ. ಆದರೆ ಕಾರ್ಯನಿರತ ಪತ್ರಕರ್ತರು ಸಮಯದೊಂದಿಗೆ ಓಡಬೇಕಾದ ಅನಿವಾರ್ಯತೆಯಿರುತ್ತದೆ.
ಯಾವುದನ್ನೆಲ್ಲಾ ಬರೆಯಬಹುದೆಂದರೆ ನಿಮ್ಮ ಊರಿನ ಕೃಷಿಕನ ಸಾಧನೆ, ಮತ್ತು ಬವಣೆ, ಸುತ್ತಮುತ್ತಲಿರುವ ಪ್ರೇಕ್ಷಣೀಯ ತಾಣಗಳು, ತಿಂಡಿ ತಿನಿಸುಗಳು, ಹಬ್ಬ ಹರಿದಿನಗಳು, ಹೀಗೆ ಪತ್ರಕರ್ತನಾಗಿ ನೋಡುತ್ತಾ ಹೋದರೆ ಹೊಸ ವಿಷಯಗಳು ಸಿಕ್ಕೇ ಸಿಗುತ್ತವೆ. ಬರೆಯುವ ಉತ್ಸಾಹ ನಿಮ್ಮಲ್ಲಿರಬೇಕಷ್ಟೆ.












Click it and Unblock the Notifications