ವಾರಣಾಸಿಯ ಗಂಗಾ ತೀರದಲ್ಲಿ ಬಾಂಬ್ ಸ್ಫೋಟ
ವಾರಣಾಸಿ, ಡಿ. 7 : ಉತ್ತರ ಪ್ರದೇಶದ ವಾರಣಾಸಿಯ ಗಂಗಾ ತೀರದಲ್ಲಿ ಇಂದು ಸಂಜೆ 6.35 ಆರತಿ ನಡೆಯುತ್ತಿದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸಿದೆ. ಈ ಸ್ಫೋಟದಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಒಬ್ಬರು ಸತ್ತಿರಬಹುದೆಂದು ಶಂಕಿಸಲಾಗಿದೆ. ಆದರೆ, ಇದು ದೃಢಪಟ್ಟಿಲ್ಲ.
ಗಂಗಾ ತೀರದ ಶೀಟ್ಲಾ ಘಾಟನಲ್ಲಿ ಸಾವಿರಾರು ಜನ ಸೇರಿದ್ದಂಥ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಜನಜಂಗುಳಿಯಲ್ಲಿ ಅನೇಕ ವಿದೇಶಿಯರು ಕೂಡ ಇದ್ದರು. ಆರತಿ ಪ್ರಾರಂಭವಾದ ಕೆಲವೇ ನಿಮಿಷದಲ್ಲಿ ಕಡಿಮೆ ಪ್ರಮಾಣದ ಬಾಂಬ್ ಸ್ಫೋಟ ಸಂಭವಿಸಿದೆ. 4ರಿಂದ 5 ವಿದೇಶಿಯರು ಕೂಡ ಗಾಯಗೊಂಡವರಲ್ಲಿ ಸೇರಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಹಾ ಅಂಗಡಿ ಬಳಿ ಸ್ಫೋಟ ಸಂಭವಿಸಿದೆ.
ಸ್ಫೋಟಗೊಂಡ ಸ್ಥಳದಲ್ಲಿ 150 ಮೀಟರ ವ್ಯಾಸದಲ್ಲಿ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟಗೊಳ್ಳುತ್ತಿದ್ದಂತೆ ಜನ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದ್ದಾರೆ. ಆಗ ಸಂಭವಿಸಿದ ಕಾಲ್ತುಳಿತದಲ್ಲಿ ಕೆಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವಾರಣಾಸಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಇಡೀ ಪ್ರದೇಶವನ್ನು ಸುತ್ತವರಿದಿದ್ದು, ಈ ಘಾಟನಲ್ಲಿ ಸೇರುವ ಹಿಂದೂಗಳು ಮತ್ತು ವಿದೇಶಿಯರನ್ನು ಗುರಿಯಾಗಿಟ್ಟುಕೊಂಡು ಈ ಕೃತ್ಯವೆಸಗಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ದುಷ್ಕೃತ್ಯ ನಡೆಸಿದವರ ಸುಳಿವಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪೊಲೀಸರ ಪ್ರಕಾರ ಯಾರೂ ಸಾವಿಗೀಡಾಗಿಲ್ಲ. ಈ ಘಟನೆಯ ನಂತರ ಉತ್ತರ ಪ್ರದೇಶದಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ಬೆಂಗಳೂರಿನಲ್ಲೂ ಕಟ್ಟೆಚ್ಚರ : ಈ ಸ್ಫೋಟದ ಹಿಂದೆ ಭಯೋತ್ಪಾದಕ ಸಂಘಟನೆಯ ಕೈವಾಡ ಇದ್ದಿರಬಹುದೆಂದು ಶಂಕಿಸಲಾಗಿದ್ದು, ಬೆಂಗಳೂರು ಸೇರಿದಂತೆ ಮುಂಬೈ, ಪುಣೆ, ದೆಹಲಿ ಮುಂತಾದ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.












Click it and Unblock the Notifications