ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಶಾಸಕರ ಹಿಂದೆ ಇಂತಹ ಪತ್ನಿಯಿರಬೇಕು!

By Prasad
|
Google Oneindia Kannada News

Bharati Srinivas
ಬೆಂಗಳೂರು, ಅ. 22 : ಗುಬ್ಬಿ ಶಾಸಕ ಶ್ರೀನಿವಾಸ್ ಗೆ ಹಣದ ಆಮಿಷ ತೋರಿ ಸಾಕ್ಷಿ ಸಮೇತ ಬಿಜೆಪಿ ಸಿಕ್ಕಿಬಿದ್ದಿದ್ದು ಹೇಗೆ? ಎಂಬುದೇ ಎಲ್ಲಕಡೆ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾದ ಸಂಗತಿ. ಅದು ಹೀಗಿದೆ...

ಆಪರೇಷನ್ ಕಮಲವನ್ನು ಯುದ್ಧೋಪಾದಿಯಲ್ಲಿ ಆರಂಭಿಸಿರುವ ಭಾರತೀಯ ಜನತಾ ಪಕ್ಷ ವಿರೋಧಪಕ್ಷದ ಸಿಕ್ಕಸಿಕ್ಕ ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆರಂಭಿಸಿದೆಯಷ್ಟೆ. ಚನ್ನಪಟ್ಟಣದ ಎಂಸಿ ಅಶ್ವತ್ಥ್, ಬಂಗಾರಪೇಟೆಯ ನಾರಾಯಣಸ್ವಾಮಿ ಮತ್ತು ಜಗಳೂರಿನ ರಾಮಚಂದ್ರ ಕಮಲದಳದ ಭಾಗವಾಗಿದ್ದಾರೆ. ಗುಬ್ಬಿಯ ಶಾಸಕ ಶ್ರೀನಿವಾಸರನ್ನು ಸೇರಿಸಿಕೊಳ್ಳಲು ಹೋಗಿ ಎಡವಿಬಿದ್ದು ಕಮಲದ ಪಕ್ಷದವರು ತಮ್ಮ ಕಾಲಕೆಳಗೇ ಮತ್ತಷ್ಟು ರಾಡಿ ಎಬ್ಬಿಸಿಕೊಂಡಿದ್ದಾರೆ.

ಆಪರೇಷನ್ ಖೆಡ್ಡಾ : ಬಿಜೆಪಿಯ ಬಂಟನಾಗಿ ಬಂದ ಸುರೇಶ್ ಗೌಡರನ್ನು ಆಪರೇಷನ್ ಖೆಡ್ಡಾಗೆ ಬೀಳಿಸಿದ್ದು ಹೇಗೆ ಎಂಬುದನ್ನು ಶ್ರೀನಿವಾಸ್ ಹೆಂಡತಿ ಭಾರತಿಯವರೇ ಎಳೆಎಳೆಯಾಗಿ ಮಾಧ್ಯಮದವರಿಗೆ ಬಿಡಿಸಿ ಹೇಳಿದ್ದಾರೆ. ಅಸಲಿಗೆ ಶ್ರೀನಿವಾಸ್ ಮತ್ತು ಸುರೇಶ್ ಗೌಡ ನಡುವೆ ನಡೆದ (ಅ)ವ್ಯವಹಾರವನ್ನು ಸೆರೆಹಿಡಿದಿದ್ದೇ ದಿಟ್ಟಮಹಿಳೆ ಭಾರತಿ! [ಗ್ಯಾಲರಿ ಕ್ಲಿಕ್ಕಿಸಿ]

ಬಿಜೆಪಿಯ ಕಡೆಯಿಂದ ಪಕ್ಷಾಂತರ ಮಾಡಲು ಕರೆಗಳು ಬರುತ್ತಿದ್ದಂತೆ ತಮ್ಮ ಅಸಮಾಧಾನವನ್ನು ಶ್ರೀನಿವಾಸ್ ಅವರು ಭಾರತಿಯವರ ಎದಿರು ತೋಡಿಕೊಂಡಿದ್ದಾರೆ. ಇದಕ್ಕೇನಾದರೂ ಮಾಡಲೇಬೇಕು ಎಂದು ನಿರ್ಧರಿಸಿದ ಶ್ರೀನಿವಾಸ್, ಭಾರತಿ ಮತ್ತು ಅವರ ಮಗ 'ಆಪರೇಷನ್ ಖೆಡ್ಡಾ'ಗೆ ಸ್ಕೆಚ್ ಹಾಕಿದ್ದಾರೆ.

ದೇವರ ಹೆಸರು ಹೇಳಿ ಪ್ರಮಾಣ ಸ್ವೀಕರಿಸುವ ನಾವು ಭ್ರಷ್ಟ ಹಣ ಇಸಿದುಕೊಂಡರೆ ದೇವರಿಗೇ ಮೋಸ ಮಾಡಿದಂತಾಗುತ್ತದೆ ಎಂದು ಬಿಜೆಪಿಯನ್ನೇ ಬಲೆಗೆ ಕೆಡವಲು ಪ್ಲಾನ್ ಮಾಡಿದೆವು. ನಮಗೆ ಯಾವುದೇ ರೀತಿಯ ಹಣದ ಅವಶ್ಯಕತೆಯಿಲ್ಲ. ನಮ್ಮದಿಯ ಜೀವನ ನಡೆಸಿದ್ದೇವೆ ಎಂದು ಹೇಳಿರುವ ಭಾರತಿ, ತಂದೆ ಹಾಕಿದ ಗೆರೆಯನ್ನು ಎಂದೂ ದಾಟದ ಮಗ ಶ್ರೀನಿವಾಸ್ ಎಂದು ತಮ್ಮ ಪತಿದೇವರನ್ನು ಶ್ಲಾಘಿಸಿದ್ದಾರೆ.

ಸುರೇಶ್ ಗೌಡ ಜೊತೆ ಶ್ರೀನಿವಾಸ್ 'ಕುದುರೆ ವ್ಯಾಪಾರ'ವನ್ನು ಕುದುರಿಸಿದ್ದು, ಕೋಟಿ ಕೋಟಿ ಲೆಕ್ಕದ ವ್ಯವಹಾರವನ್ನು ಕುದುರಿಸಲು ಯತ್ನಿಸಿದ್ದನ್ನು ಕಿಟಕಿಯ ಮುಖಾಂತರವೇ ಸ್ವತಃ ಭಾರತಿ ಸೆರೆಹಿಡಿದಿದ್ದಾರೆ. [ವಿಡಿಯೋ ನೋಡಿ] ಇದೆನ್ನೆಲ್ಲಾ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಬಯಲು ಮಾಡಿದನಂತರ ಆರ್ ಅಶೋಕ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಭಾರತಿಯವರನ್ನು ಮಾತನಾಡಿಸಲು ಯತ್ನಿಸಲಾಗಿದೆ. ಏನಮ್ಮಾ ನಮ್ಮನ್ನೇ ಬಲೆ ಬೀಳಿಸಿಬಿಟ್ಟಿಯಲ್ಲ ಎಂಬಂತೆ ಕೆಲವರು ಮಾತನಾಡಿದ್ದಾರೆ. ಇದಕ್ಕೆಲ್ಲ ಭಾರತಿಯವರು ಸೊಪ್ಪು ಹಾಕಲು ಹೋಗಿಲ್ಲ.

ಈ ಘಟನೆ ಸಂಭವಿಸಿದ ನಂತರ ಶ್ರೀನಿವಾಸ್ ಅವರ ಮನೆಯ ಸುತ್ತ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಶ್ರೀನಿವಾಸ್ ಮನೆ ಬಿಟ್ಟು ಕದಲುತ್ತಿಲ್ಲ. ಸುರೇಶ್ ಗೌಡ ಗುಬ್ಬಿಯತ್ತ ತಲೆಹಾಕುತ್ತಿಲ್ಲ. ಬಿಜೆಪಿಯ ನಾಯಕರುಗಳೆಲ್ಲ ಈ ಘಟನೆ ಕುರಿತು ತುಟಿ ಬಿಚ್ಚುತ್ತಿಲ್ಲ.

ರಾಜ್ಯದಲ್ಲಿ ಏನಾಗುತ್ತಿದೆ? ರಾಜಕೀಯ ಎತ್ತ ಸಾಗುತ್ತಿದೆ? ತಾವು ಮಾಡುತ್ತಿರುವುದು ಸರಿಯಾ ತಪ್ಪಾ ಎಂಬುದರ ಬಗ್ಗೆ ವಿವೇಚನೆಯಿಲ್ಲದೆ ಮಂತ್ರಿ ಮಹೋದಯರು, ಶಾಸಕಗಣಗಳೆಲ್ಲ ತಮಗೆ ತಿಳಿದಂತೆ ಕುದುರೆ ವ್ಯಾಪಾರದಲ್ಲಿ ನಿರತವಾಗಿವೆ. ಈ ಕುದುರೆ ವ್ಯಾಪಾರಕ್ಕೆಲ್ಲ ಲಗಾಮು ಹಾಕಲು ಎಲ್ಲ ಶಾಸಕರ ಹಿಂದೆ ಇಂತಹ ಪತ್ನಿಯಿರಬೇಕು!

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X