ಭಿನ್ನಮತೀಯರ ಅನರ್ಹತೆ : ನ್ಯಾಯಮೂರ್ತಿಗಳಲ್ಲೇ ಭಿನ್ನಮತ

ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯ ಅವರು ಶಾಸಕರನ್ನು ಅನರ್ಹಗೊಳಿಸಿದ್ದನ್ನು ಮುಖ್ಯ ನ್ಯಾಯಮೂರ್ತಿ ಖೇಹರ್ ಎತ್ತಿಹಿಡಿದಿದ್ದರೆ, ಗುಲಬರ್ಗಾದ ಸರ್ಕಿಟ್ ಬೆಂಚಿಗೆ ವರ್ಗಾವಣೆಗೊಂಡಿರುವ ನ್ಯಾ. ಕುಮಾರ್ ಅವರು ಸಭಾಧ್ಯಕ್ಷ ಅವರ ಕ್ರಮ ತಪ್ಪು ಎಂದು ತೀರ್ಪನ್ನು ನೀಡಿದ್ದಾರೆ. ಈ ಕಾರಣದಿಂದಾಗಿ ಪ್ರಕರಣವನ್ನು ಮೂರನೇ ನ್ಯಾಯಮೂರ್ತಿಗೆ ವರ್ಗಾಯಿಸಲಾಗಿದೆ. ಆ ನ್ಯಾಯಮೂರ್ತಿ ಯಾವ ತೀರ್ಪಿಗೆ ಬರುತ್ತಾರೆ ಎಂಬುದರ ಮೇಲೆ ಅನರ್ಹಗೊಂಡ ಶಾಸಕರ ಜಯ ಅಪಜಯ ನಿರ್ಧಾರವಾಗಲಿದೆ.
ಈ ಪ್ರಕರಣದಲ್ಲಿ ನಾಲ್ಕು ವಿಷಯಗಳನ್ನು ಚರ್ಚಿಸಲಾಗಿತ್ತು. ಅವು, ಸ್ವಾಭಾವಿಕ ನ್ಯಾಯ ಉಲ್ಲಂಘಿಸಲಾಗಿದೆಯೇ ಇಲ್ಲವೆ? ನಿಯಮ ಗಾಳಿಗೆ ತೂರಲಾಗಿದೆಯೇ ಇಲ್ಲವೆ? ಸಭಾಧ್ಯಕ್ಷ ನಿರ್ಣಯ ದುರುದ್ದೇಶದಿಂದ ಕೂಡಿದೆಯೆ ಇಲ್ಲವೆ? ಮತ್ತು ಭಿನ್ನಮತೀಯರು ಸ್ವಇಚ್ಛೆಯಿಂದ ಬಿಜೆಪಿ ಪಕ್ಷ ಬಿಟ್ಟು ಹೊರಹೋಗಿದ್ದಾರೆಯೆ ಇಲ್ಲವೆ? ಇವುಗಳಲ್ಲಿ ಮೊದಲ ಮೂರು ವಿಷಯಗಳಲ್ಲಿ ಇಬ್ಬರೂ ನ್ಯಾಯಮೂರ್ತಿಗಳು ಒಮ್ಮತ ಹೊಂದಿದ್ದರೆ, ನಾಲ್ಕನೇ ವಿಷಯದಲ್ಲಿ ಭಿನ್ನಮತ ಹೊಂದಿದ್ದಾರೆ.
ಪ್ರಕರಣವನ್ನು ಮೂರನೇ ನ್ಯಾಯಮೂರ್ತಿಗೆ ವರ್ಗಾಯಿಸಲಾಗಿದ್ದು, ಅಕ್ಟೋಬರ್ 20ರಂದು ವಿಚಾರಣೆ ನಡೆಯಲಿದೆ. ಅಲ್ಲಿ ಚರ್ಚಿಸಲಾಗುವ ವಿಷಯವೇನೆಂದರೆ, ಭಿನ್ನಮತೀಯರು ಸ್ವಇಚ್ಛೆಯಿಂದ ಪಕ್ಷ ಬಿಟ್ಟು ಹೋಗಿದ್ದಾರೆಯೇ ಇಲ್ಲವೆ ಎಂಬುದು.
ಪಕ್ಷೇತರ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಬರಬೇಕಾಗಿತ್ತು. ಆದರೆ, ನ್ಯಾ. ಕುಮಾರ್ ವರ್ಗಾವಣೆಯಾಗಿರುವುದರಿಂದ ಈ ಪ್ರಕರಣ ನವೆಂಬರ್ 2ರಂದು ವಿಚಾರಣೆಗೆ ಬರಲಿದೆ. ಸದ್ಯಕ್ಕೆ ಬಿಜೆಪಿ ಶಾಸಕರ ಅನರ್ಹತೆ ಕುರಿತ ಪ್ರಕರಣದಲ್ಲಿ ನೀಡಲಾಗಿರುವ ತೀರ್ಪು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಾಗಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7











Click it and Unblock the Notifications