ಕಳಕೊಂಡ 'ವಜ್ರ'ದ ಹುಡುಕಾಟದಲ್ಲಿ ಎಚ್ಡಿಕೆ!

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಬಿಡದಿಯ ಈಗಲ್ಟನ್ ರೇಸಾರ್ಟ್‌ನಲ್ಲಿ ಮಾತುಕತೆ ನಡೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಚುನಾವಣೆಯಲ್ಲಿ ಸ್ಥಳೀಯ ಮುಖಂಡರಿಗೆ ಮಣೆ ಹಾಕುವ ಸಾಧ್ಯತೆ ತೀರಾ ಕಡಿಮೆ. ಅಶ್ವತ್ಥ್ ನಂತರ ನನಗೆ ಪಟ್ಟ ಸಿಕ್ಕುತ್ತದೆಂದು ಬಾಸಿಂಗ ಕಟ್ಟಿಕೊಂಡು ಶೃಂಗಾರವಾಗಿದ್ದ ಮಂದಿ ಇಂಗು ತಿಂದ ಮಂಗದಂತಾಗಿದ್ದಾರೆ.
1990ರಲ್ಲಿ ರಾಮನಗರದಿಂದ ಆಯ್ಕೆಯಾದ ದೇವೇಗೌಡ ಮುಖ್ಯಮಂತ್ರಿಯಾಗಿ ನಂತರ ಪ್ರಧಾನಿಪಟ್ಟ ಆಲಂಕರಿಸಿದರು. ಆಗ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ 1996ರಲ್ಲಿ ನಡೆದ ಮರು ಚುನಾವಣೆಯಲ್ಲಿ ಅಂಬರೀಷ್ ಅಂದಿನ ಜನತಾ ದಳದಿಂದ ಸ್ಪರ್ಧಿಸಿ, ಕಾಗ್ರೆಸ್‌ನ ಸಿ.ಎಂ. ಲಿಂಗಪ್ಪ ಅವರ ವಿರುದ್ಧ ಸೋಲುಂಡಿದ್ದರು. 2009ರಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ನಡೆದ ಮರು ಚುನಾವಣೆಯಲ್ಲಿ ಜೆಡಿಎಸ್‌ನಿಂದ ಅಂಬರೀಷ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಸಿದ್ಧತೆ ನಡೆಸಿತ್ತು ಆದರೆ, ಅದು ಫಲ ನೀಡಿರಲಿಲ್ಲ.
ಅಂಬಿ ಚುನಾವಣೆ ಕಣಕ್ಕಿಳಿಯಲು ಹಿಂದೇಟು ಹಾಕಿದರೆ ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದಾರೆ. ಅದರಂತೆ ಭವಾನಿ ರೇವಣ್ಣ ಅಥವಾ ಎಚ್.ಡಿ. ಬಾಲಕೃಷ್ಣೇಗೌಡ ಅವರನ್ನು ಕಣಕ್ಕಿಳಿಸಲು ಯೋಚಿಸಲಾಗುತ್ತಿದೆ.
ಸ್ಥಳೀಯರಿಗೆ ನಿಶ್ಚಿತ ಕೋಕ್? : ದೇವೇಗೌಡರ ಮಾನಸ ಪುತ್ರ ಎಂದೇ ಬಿಂಬಿತವಾಗಿದ್ದ ಮಾಜಿ ಸಚಿವ ಎಂ. ವರದೇಗೌಡ ಅವರು ತಮ್ಮ ಆಂತರಂಗದ ಗುರುವಿನ ಜತೆಗೆ ಮುನಿದು ಹೊರ ನಡೆದ ಮೇಲೆ ತಾಲೂಕಿನಲ್ಲಿ ಉದ್ಭವಿಸಿದ ಭಿನ್ನಮತದ ಬಿರುಕಿಗೆ ಪಕ್ಷದ ವರಿಷ್ಠರಾದಿಯಾಗಿ ಯಾರಿಗೂ ತೇಪೆ ಹಾಕಲು ಸಾಧ್ಯವಾಗಿಲ್ಲ. ಇದರಿಂದ ಇಲ್ಲಿ ಇರುವ ಭಿನ್ನಮತದ ಬಿರುಕು ಕವಲುಗಳಾಗಿ ಬೆಳೆಯುತ್ತಿವೆ. ಇದರಿಂದ ಸ್ಥಳೀಯ ಮುಖಂಡರಿಗೆ ಟಿಕೇಟ್ ನೀಡಿದಲ್ಲಿ ಈಗ ಕಳೆದುಕೊಂಡಿರುವ 'ವಜ್ರದ ಹರಳ'ನ್ನು ಹುಡುಕಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನೇ ಟಿಕೇಟ್ ತರುತ್ತೇನೆ. ಇಲ್ಲವೇ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿಕೊಂಡು ತಮ್ಮ ತಂಡದೊಂದಿಗೆ ಓಡಾಡುತ್ತಿದ್ದ ಬಮೂಲ್ ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್‌ಗೆ ಈಗ ಎದುರಾಗಿರುವ ಮರುಚುನಾವಣೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಆದರೆ, ಅವರಿಗೆ ಸ್ಥಳೀಯವಾಗಿ ಭಿನ್ನಮತ ಕೂಡ ಎದುರಿಸಬೇಕಾಗಿ ಬಂದಿದೆ.
ಇದರ ಜತೆಗೆ ಕೆಲ ತಿಂಗಳ ಹಿಂದೆ ನಡೆದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದರು ಎಂದು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ. ಅದರೂ ಲಿಂಗೇಶ್‌ಕುಮಾರ್ ಅವರು ಕುಮಾರಸ್ವಾಮಿ ಮತ್ತು ಬಾಲಕೃಷ್ಣ ಹಿಂದೆಯೇ ತಿರುಗಾಡಿಕೊಂಡಿದ್ದಾರೆ. ಅದರೂ ಟಿಕೇಟ್ ತರುವುದು ಮಾತ್ರ ಕಷ್ಟ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಹೊರಗಿನ ಅಭ್ಯರ್ಥಿ ಏಕೆ? : ಮಾಜಿ ಸಚಿವ ಎಂ. ವರದೇಗೌಡ ದೇವೇಗೌಡರ ಜತೆಗೆ ಮುನಿದು ಹೊರ ಬಿದ್ದ ನಂತರ ಸಾರಥಿ ಇಲ್ಲದ ಜೆಡಿಎಸ್‌ಗೆ ಮದ್ಯೋದ್ಯಮಿ ಅಶ್ವತ್ಥ್ ಅವರನ್ನು 2004ರಲ್ಲಿ ಕರೆತಂದು ಕೂರಿಸಲಾಯಿತು. ಆ ಚುನಾವಣೆ ಮತ್ತು 2008ರ ಚುನಾವಣೆಯಲ್ಲಿ ಸೋಲುಂಡರು. ಯೋಗೀಶ್ವರ್ ಆಪರೇಷನ್ ಕಮಲಕ್ಕೆ ಬಲಿಯಾದ ಮೇಲೆ ಉದ್ಭವಿಸಿದ ಮರುಚುನಾವಣೆಯಲ್ಲಿ ವಿಧಾನಸಭೆ ಪ್ರವೇಶಿಸಿದರು. ಅದರೂ ಅವರ ವಿರುದ್ಧ ಕ್ಷೇತ್ರದಲ್ಲಿ ಭಿನ್ನಮತ ಸ್ಪೋಟಿಸಲೇ ಇತ್ತು. ಈಗ ಅಶ್ವತ್ಥ್ ತಮ್ಮ ಶಾಸಕ ಸ್ಥಾನ ಮತ್ತು ಪಕ್ಷ ಬಿಟ್ಟು ಹೊರ ನಡೆದಿದ್ದಾರೆ. ಒಳಗಿನವರು ದಕ್ಕುವುದಿಲ್ಲ ಎಂದರಿತಿರುವ ಜೆಡಿಎಸ್ ನಾಯಕರು ಹೊರಗಿನವರನ್ನು ನೆಚ್ಚಿಕೊಳ್ಳುವಂತಾಗಿದೆ.
ಯೋಗಿ ವಿರುದ್ಧ ವದಂತಿ : ಅಶ್ವತ್ಥ್ ಬಿಜೆಪಿ ಪಾಳೇಯಕ್ಕೆ ಜಿಗಿದ ಮೇಲೆ ಯೋಗೀಶ್ವರ್ ಬಿಜೆಪಿ ಬಿಟ್ಟು ಜೆಡಿಎಸ್‌ಗೆ ವಲಸೆ ಬರಲಿದ್ದಾರೆ, ಮುಂಬರುವ ಮರು ಚುನಾವಣೆಯಲ್ಲಿ ಟಿಕೇಟ್ ನೀಡಲಾಗುತ್ತದೆ ಎಂದು ವದಂತಿ ದಟ್ಟವಾಗಿ ಹಬ್ಬಿದೆ. ಇದನ್ನು ಅಲ್ಲಗಳೆದಿರುವ ಕೆಎಸ್‌ಐಸಿ ಅಧ್ಯಕ್ಷ ಸಿ.ಪಿ. ಯೋಗೀಶ್ವರ್, ತಾವು ಅಂತಹ ತಪ್ಪು ಮಾಡುವುದಿಲ್ಲ. ನನಗೆ ರಾಜಕೀಯ ಬೇಸರ ತರಿಸಿದೆ. ಅದ್ದರಿಂದ ನಾನು ಎಲ್ಲಿಗೂ ಹೋಗುವುದಿಲ್ಲ. ಬಿಜೆಪಿಯಲ್ಲಿ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.











Click it and Unblock the Notifications