ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕಮಾಂಡ್ ವಿರುದ್ಧ ಕಾಂಗ್ರೆಸ್ ಶಾಸಕರ ಅಸಮಾಧಾನ

By Prasad
|
Google Oneindia Kannada News

Siddaramaiah
ಬೆಂಗಳೂರು, ಅ. 13 : ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ್ದಕ್ಕೆ ಹೈಕಮಾಂಡ್ ವಿರುದ್ಧ ರಾಜ್ಯದ ಕಾಂಗ್ರೆಸ್ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೆಸಿಡೆನ್ಸಿ ರಸ್ತೆಯಲ್ಲಿರುವ ಚಾನ್ಸರಿ ಹೊಟೇಲಿನಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿರಿಕಿರಿ ಶಾಸಕರೆಲ್ಲರೂ ಹೈಕಮಾಂಡ್ ಅಸಹಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಸಚಿವರಾಗಿರುವ ಕೆಲ ಹಿರಿಯ ನಾಯಕರ ಕುಮ್ಮಕ್ಕಿನಿಂದ ಹೈಕಮಾಂಡ್ ಈ ಧೋರಣೆ ತಳೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರಕಾರ ಬೀಳಿಸಲು ಕಾಂಗ್ರೆಸ್ ಏನೆಲ್ಲಾ ಕಸರತ್ತು ಮಾಡುತ್ತಿರುವಾಗ ಹೈಕಮಾಂಡ್ ಸುಮ್ಮನಿರುವುದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ಕಾಂಗ್ರೆಸ್ ನವರೇ ಆದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಬಿಜೆಪಿಯನ್ನು ಅಕ್ಟೋಬರ್ 14ರಂದು ಮತ್ತೆ ಬಹುಮತ ಸಾಬೀತುಪಡಿಸಲು ಕರೆದಿರುವುದು ಮತ್ತು ಹೈಕಮಾಂಡ್ ಯಾವುದೇ ಸಹಕಾರ ನೀಡದಿರುವುದು ಶಾಸಕರ ಆಕ್ರೋಶಕ್ಕೆ ಮೂಲ ಕಾರಣ. ಹೈಕಮಾಂಡ್ ವಿರುದ್ಧ ಹಿರಿಯ ಶಾಸಕರೇ ತಲೆಯೆತ್ತಿ ಮಾತನಾಡಲು ಹೆದರುವಾಗ ಇಡೀ ಶಾಸಕರ ದಂಡೇ ಹೈಕಮಾಂಡ್ ವಿರುದ್ಧ ತಿರುಗಿಬಿದ್ದಿದೆ.

ಇಂದಿನ ಸಭೆಯಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೈಕಮಾಂಡ್ ಗೆ ಒಂದು ಕಠಿಣ ಸಂದೇಶ ಕಳುಹಿಸಬೇಕು ಎಂಬ ತೀರ್ಮಾನಕ್ಕೆ ಅನೇಕ ಶಾಸಕರು ಬಂದಿದ್ದಾರೆ ಎನ್ನಲಾಗಿದೆ. ಕೆಲವರು ಬಹಿರಂಗವಾಗಿ ತಮ್ಮ ಅನಿಸಿಕೆಗಳನ್ನು ಹೊರಗೆಡಹುತ್ತಿದ್ದಾರೆ. ಏನೇ ನಿರ್ಧಾರ ತೆಗೆದುಕೊಂಡರೂ ಇಂದು ಸಂಜೆ ಮತ್ತೆ ಚರ್ಚಿಸಿ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.

ಬಿಜೆಪಿ ಸರಕಾರವನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಲು ರಾಜ್ಯ ಕಾಂಗ್ರೆಸ್ ಎಲ್ಲಾ ತಂತ್ರಗಳನ್ನು ಹೂಡುತ್ತಿರುವಾಗ ಹೈಕಮಾಂಡ್ ತಟಸ್ಥ ನೀತಿ ಅನುಸರಿಸುವುದು ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಸರಕಾರವನ್ನು ಬೀಳಿಸಲು ಹೈಕಮಾಂಡ್ ಹಿಂದೇಟು ಹಾಕುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್ ಅನ್ಯ ಪಕ್ಷದೊಡನೆ ಕೈಜೋಡಿಸಲು ಮುಂದಡಿ ಇಟ್ಟಿರುವುದು ರಹಸ್ಯವಾಗೇನೂ ಉಳಿದಿಲ್ಲ.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, ರಾಜೀನಾಮೆ ನೀಡುವ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಯಾರೇ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಅದು ತಪ್ಪು. ಹೈಕಮಾಂಡ್ ಗೆ ನಮ್ಮ ನಿಲುವನ್ನು ತಿಳಿಯಪಡಿಸುತ್ತೇವೆ. ನಮ್ಮ ಮುಂದಿನ ನಿರ್ಧಾರವನ್ನು ನಾಳೆ ತಿಳಿಯಪಡಿಸುತ್ತೇವೆ ಎಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X