ವಿರಸವೆಂಬ ವಿಷಕ್ಕೆ ಬಲಿಯಾದ ವಿಧಾನಸಭಾ

ಹದಿನಾರು ಮಂದಿ ಭಿನ್ನಮತೀಯ ಶಾಸಕರನ್ನು ಅನರ್ಹಗೊಳಿಸಿ ಸಭಾಧ್ಯಕ್ಷ ಕೆಜೆ ಬೋಪಯ್ಯ ಅವರು ಹೊರಡಿಸಿದ ಆಜ್ಞೆ ಸಿಂಧುವಲ್ಲ. ಶಾಸಕರನ್ನು ಹಾಗೆಲ್ಲ ಅನರ್ಹಗೊಳಿಸುವ ಹಕ್ಕು ಸದನಕ್ಕಿಲ್ಲ ಎನ್ನುವುದು ಕಾನೂನು ತಜ್ಞರ ಅಭಿಪ್ರಾಯ. ಈ ಶಾಸಕರನ್ನು ಈ ಸಂದರ್ಭದಲ್ಲಿ ಕೆಜೆ ಬೋಪಯ್ಯ ಅವರು ಅನರ್ಹಗೊಳಿಸಿದ್ದು ಸರಿನಾ ಬೆಸನಾ ಎನ್ನುವ ಕಾನೂನು ಜಿಜ್ಞಾಸೆ ಸದನದ ನಡಾವಳಿ ಕಾಯುವವರನ್ನು ಬಹುದಿನಗಳ ಕಾಡುವುದು ನಿಶ್ಚಿತ.
ಕಾನೂನು ಅಂಶಗಳನ್ನು ಆಮೇಲೆ ವಿಚಾರಿಸಿಕೊಂಡರಾಯಿತು, ಮೊದಲು ಭಿನ್ನರನ್ನು ವಜಾ ಮಾಡಿ ಉಳಿದ 208 ಶಾಸಕರ ಲೆಕ್ಕದಲ್ಲಿ ವಿಶ್ವಾಸಮತ ಯಾಚಿಸಿದರೆ ತಮ್ಮ ಪಕ್ಷಕ್ಕೆ ಕನಿಷ್ಠ 106 ಮತಗಳು ದೊರೆತು ಪರೀಕ್ಷೆಯಲ್ಲಿ ಪಾಸಾಗುವುದೆಂಬ ಲೆಕ್ಕಾಚಾರವನ್ನು ಯಡಿಯೂರಪ್ಪ ಹಾಕಿದ್ದರು. ಆದರೆ ವಿರೋಧ ಪಕ್ಷಗಳು ಯಡ್ಡಿಯ ಈ ತಂತ್ರವನ್ನು ಅರಿಯದಷ್ಟು ಮೂರ್ಖರೇನೂ ಅಲ್ಲ. ಹಾಗಾಗಿ ಸದನದಲ್ಲಿ ದೊಂಬಿ ಎಬ್ಬಿಸಿ ಮತದಾನ ನಡೆದಂತೆ ತಡೆದರು. ಇದೇ ಅವಕಾಶವನ್ನು ಉಪಯೋಗಿಸಿಕೊಂಡ ಸಭಾಧ್ಯಕ್ಷರು ಒಂದೇ ನಿಮಿಷದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಿ ಯಡಿಯೂರಪ್ಪ ಅವರ ಗೆಲುವನ್ನು ಪ್ರಕಟಿಸಿ ಸಭೆಯನ್ನು ಅನಿರ್ದಾಷ್ಟವಧಿಗೆ ಮುಂದೂಡಿದರು. ಬಹುಶಃ ಈ ವಿಧಾನಸಭೆ ಮತ್ತೆ ಸೇರುವ ಯಾವ ಲಕ್ಷಣವೂ ಇಲ್ಲ.
ಮುಂದ? ಎಂಬ ಪ್ರಶ್ನೆಗೆ ಉತ್ತರ ಕಷ್ಟವೇನೂ ಅಲ್ಲ, ಕ್ಲಿಷ್ಟವಾದದ್ದೂ ಅಲ್ಲ. ರಾಜಕೀಯವಾಗಿ ಸಕ್ರಿಯವಾಗಿರುವ ನಮ್ಮ ಸನ್ಮಾನ್ಯ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ತಮ್ಮ ವರದಿಯನ್ನು ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುವ ಕೇಂದ್ರ ಸರಕಾರದ ಸಮಿತಿಗೆ ಈಗಾಗಲೇ ರವಾನೆ ಮಾಡಿದ್ದಾರೆ. ಯುಪಿಎ ಸರಕಾರ ಇಂಥದೊಂದು ವರದಿಗಾಗಿ ಬಹುದಿನಗಳಿಂದ ಕಾಯುತ್ತಲೇ ಇತ್ತಲ್ಲ.
ಮೇಲು ನೋಟಕ್ಕೆ ಕರ್ನಾಟಕದಲ್ಲಿ ಹಲವಾರು ರಾಜಕೀಯ ತಿಕ್ಕಾಟಗಳು, ಸಾಂವಿಧಾನಿಕ ಬಿಕ್ಕಟ್ಟುಗಳು ಮತ್ತು ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಹೋಗಬಲ್ಲ ನೀಚತನ ಕಂಡುಬಂದರೂ ಮೂಲಭೂತವಾಗಿ ಇದು ಜಾತಿ ಜಗಳ. ಪಾಂಡವ ಕೌರವರ ದಾಯಾದಿ ಕಲಹ. ವೀರಶೈವ ಮತ್ತು ಗೌಡ ಜನಾಂಗದ ನಡುವೆ ಪರಂಪರಾಗತವಾಗಿ ಸಾಗಿಬಂದ ಮತ್ಸರ. ಮತ್ಸರಕ್ಕೆ ಇತರ ಜಾತಿ ನಾಯಕರು ಆಗಾಗ ಹಚ್ಚುವ ಉಪ್ಪು ಖಾರ.
ಸುಮ್ಮನೆ ಇರುವಂತೆ ನಾಟಕ ಆಡಿದ ಕಾಂಗ್ರೆಸ್, ಭಿನ್ನಮತೀಯರ ಕಷ್ಟ ನೋಡಲಾಗದೆ ಅವರ ನೆರವಿಗೆ ಗೋವಾಗೆ ಧಾವಿಸಿದ ಕುಮಾರಸ್ವಾಮಿ ಮತ್ತು ಶಾಸಕರನ್ನು ಅನರ್ಹಗೊಳಿಸಿದ ಯಡಿಯೂರಪ್ಪ ಅವರ ನಡೆಗಳು ಕೇವಲ ನಡೆಗಳಷ್ಟೆ. ಈ ಮೂರೂ ಪಕ್ಷಗಳದ್ದು ಒಂದೇ ಮಂತ್ರ : Either me or none. ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ನಿನ್ನ ಎರಡೂ ಕಣ್ಣಗಳು ಹೋಗಲಿ ಎನ್ನುವ ಛಲ. ರಾಜಕೀಯವೇ ಹೊಲಸು, ಅದನ್ನು ಮತ್ತಷ್ಟು ಹೊಲಸು ಮಾಡಿದ ಕೀರ್ತಿಗೆ ಪಾತ್ರರಾದ ನಮ್ಮ ಎಲ್ಲ ಶಾಸಕರನ್ನು ಮತ್ತು ಅವರ ನಾಯಕರನ್ನು ನಮ್ಮ ಮತಬಾಂಧವರು ಬರಲಿರುವ ದಿನಗಳಲ್ಲಿ ವಿಚಾರಿಕೊಳ್ಳುವರೆಂಬ ವಿಶ್ವಾಸದಿಂದ, ಇಂತಿ ನಿಮ್ಮ, ದಟ್ಸ್ ಕನ್ನಡ.
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications