ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಾ, ಸೋಮಣ್ಣ ಇತರರ ಬಯೋ ಡಾಟಾ

By Mahesh
|
Google Oneindia Kannada News

Shobha Karandlaje
ಬೆಂಗಳೂರು, ಸೆ. 23: ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸೆ.22ರಂದು ಸೇರ್ಪಡೆಯಾದ ನೂತನ ಕ್ಯಾಬಿನೆಟ್ ದರ್ಜೆ ಸಚಿವರುಗಳ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.

ಆನೇಕಲ್ ನಾರಾಯಣ ಸ್ವಾಮಿ: [ಭಾವಚಿತ್ರ ನೋಡಿ]
ಆನೇಕಲ್‌ನ ಅಬ್ಬಯ್ಯ ಮತ್ತು ತಿಮ್ಮಕ್ಕ ಅವರ ಪುತ್ರನಾಗಿ 1957ರ ಮೇ 16ರಂದು ಜನಿಸಿದ ಎ.ನಾರಾಯಣ ಸ್ವಾಮಿ ಅವರು ಕಲಾ ಪದವೀಧರರು. ಹತ್ತು, ಹನ್ನೊಂದು, ಹನ್ನೆರಡು ಮತ್ತು ಹದಿಮೂರನೇ ವಿಧಾನಭೆಗೆ ಆನೇಕಲ್ ಮೀಸಲು ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಆಯ್ಕೆಯಾದ ಹೆಗ್ಗಳಿಕೆ ನಾರಾಯಣಸ್ವಾಮಿ ಅವರದಾಗಿದೆ.

ಕಳೆದ ಎರಡೂವರೆ ದಶಕಗಳಿಂದಲೂ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಾರಾಯಣ ಸ್ವಾಮಿ ಅವರು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದಾರೆ. ನಾರಾಯಣಸ್ವಾಮಿ ಅವರು ಪತ್ನಿ ವಿಜಯಕುಮಾರಿ ಹಾಗೂ ಮೂವರು ಪುತ್ರಿಯರನ್ನು ಹೊಂದಿದ್ದಾರೆ. ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ನೇಮಕಗೊಂಡಿದ್ದಾರೆ.

ಸಿ.ಸಿ. ಪಾಟೀಲ್: [ಭಾವಚಿತ್ರ ನೋಡಿ]
ಗದಗ ಜಿಲ್ಲೆಯ ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ್ ಅವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಚುಳಕಿಯಲ್ಲಿ 1958ರ ಅಕ್ಟೋಬರ್ 22ರಂದು ಜನಿಸಿದರು. ಪದವಿಪೂರ್ವ ಶಿಕ್ಷಣದ ವರೆಗೆ ವ್ಯಾಸಂಗ ಮಾಡಿರುವ ಸಿ.ಸಿ. ಪಾಟೀಲ್ ಅವರು ಕೃಷಿ, ವ್ಯಾಪಾರ ವೃತ್ತಿಯಲ್ಲಿ ತೊಡಗಿಸಿಕೊಂಡವರು.

ಬೆಳಗಾವಿ ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ ಪಾಟೀಲ್ ಅವರು, 2004ರ ಚುನಾವಣೆಯಲ್ಲಿ ನರಗುಂದ ಕ್ಷೇತ್ರದಿಂದ ರಾಜ್ಯ ವಿಧಾನಸಭೆ ಪ್ರವೇಶಿಸಿದರು. ನಂತರ 2008 ಚುನಾವಣೆಯಲ್ಲೂ ಅದೇ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ.

ತಮ್ಮನ್ನು ತೊಡಗಿಸಿಕೊಂಡಿರುವ ಇವರು ನರಗುಂದದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಸವದತ್ತಿಯ ಮಲಪ್ರಭಾ ನೂಲಿನ ಗಿರಣಿಯ ಅಧ್ಯಕ್ಷರಾಗಿ, ನವಲಗುಂದ ಶ್ರೀ ರೇಣುಕಾದೇವಿ ಗೋವಿನ ಜೋಳ ಸಂಸ್ಕರಣಾ ಘಟಕದ ಸಂಸ್ಥಾಪಕ ನಿರ್ದೇಶಕರಾಗಿ, ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ- ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಪಾಟೀಲ ಅವರು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಪಾಟೀಲ್ ಅವರಿಗೆ ಪತ್ನಿ ಶೋಭಾ ಹಾಗೂ ಒಂದು ಹೆಣ್ಣು, ಮೂರು ಗಂಡು ಮಕ್ಕಳಿದ್ದಾರೆ.

ಸಿ.ಎಚ್. ವಿಜಯಶಂಕರ್ [ಭಾವಚಿತ್ರ ನೋಡಿ]
ಹಾವೇರಿ ಜಿಲ್ಲೆ ಬ್ಯಾಡಗಿಯವರಾದ ಸಿ.ಎಚ್. ವಿಜಯಶಂಕರ್ ಅವರು 1956ರ ಅಕ್ಟೋಬರ್ 21ರಂದು ಜನಿಸಿದರು. ಕಲಾ ಪದವೀಧರರಾಗಿರುವ ಇವರು ಕಾನೂನು ಪದವಿಯನ್ನೂ ವ್ಯಾಸಂಗ ಮಾಡಿರುತ್ತಾರೆ. 1994ರಲ್ಲಿ ಹುಣಸೂರು ಕ್ಷೇತ್ರದಿಂದ ರಾಜ್ಯ ವಿಧಾನಸಭಾ ಸದಸ್ಯರಾಗಿ ಸಾರ್ವಜನಿಕ ಬದುಕಿನಲ್ಲಿ ಎಲ್ಲರ ಗಮನ ಸೆಳೆದ ವಿಜಯಶಂಕರ್ ಅವರು 1998ರಲ್ಲಿ ಹಾಗೂ 2004ರಲ್ಲಿ ಮೈಸೂರು ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿರುತ್ತಾರೆ.

ಪ್ರಸ್ತುತ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ವಿಜಯಶಂಕರ್ ಅವರು ಸಮಾಜಸೇವೆಯಲ್ಲಿ ತೀವ್ರ ಕಾಳಜಿ ಹೊಂದಿದ್ದಾರೆ. ಪತ್ನಿ ಬಬಿತ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಹೊಂದಿರುವ ವಿಜಯಶಂಕರ್ ಅವರು ಸರಳತೆಗೆ ಮತ್ತೊಂದು ಹೆಸರಾಗಿದ್ದಾರೆ. ವಿಜಯಶಂಕರ್ ಅವರು ಉತ್ತಮ ಯೋಗಪಟು ಎಂಬುದೂ ಗಮನಾರ್ಹ.

ಶೋಭಾ ಕರಂದ್ಲಾಜೆ:[ಭಾವಚಿತ್ರ ನೋಡಿ]
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಚಾರ್ವಾಕ ಗ್ರಾಮದ ಕುಮಾರಿ ಶೋಭಾ ಕರಂದ್ಲಾಜೆ ಅವರು 1966ರ ಅಕ್ಟೋಬರ್ 23 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದರು. ತಂದೆ ಮೋನಪ್ಪ ಗೌಡ, ತಾಯಿ ಪೂವಕ್ಕ. ಶೋಭಾ ಅವರು ಪುತ್ತೂರಿನಲ್ಲಿಯೇ ಪದವಿ ಶಿಕ್ಷಣ, ನಂತರ ಮಂಗಳೂರಿನಲ್ಲಿ ಸಮಾಜ ಸೇವೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮಾರಧಾರಾ ನದಿಗೆ ಅಣೆಕಟ್ಟು ನಿರ್ಮಾಣ ವಿರುದ್ಧದ ಚಳವಳಿಯಲ್ಲಿ ಪಾಲ್ಗೊಂಡಿದ್ದ ಶೋಭಾ ಕರಂದ್ಲಾಜೆ ಅವರು, ಕೊಜೆಂಟ್ರಿಕ್ಸ್ ಯೋಜನೆ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.

1997 ರಲ್ಲಿ ಸಾರ್ವಜನಿಕ ಬದುಕಿಗೆ ಪ್ರವೇಶಿಸಿದ ಕುಮಾರಿ ಶೋಭಾ ಕರಂದ್ಲಾಜೆ ಅವರು 2004ರಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯೆಯಾಗಿ ಹಾಗೂ 2008 ರಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ರಾಜ್ಯ ವಿಧಾನ ಸಭಾ ಸದಸ್ಯರಾಗಿ ಆಯ್ಕೆಯಾದರು. ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿಯೂ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಕುಮಾರಿ ಶೋಭಾ ಕರಂದ್ಲಾಜೆ ಅವರು ಈಗ ಮತ್ತೊಮ್ಮೆ ರಾಜ್ಯ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವರಾಗಿದ್ದಾರೆ.

ವಿ.ಸೋಮಣ್ಣ:[ಭಾವಚಿತ್ರ ನೋಡಿ]
ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮರಳವಾಡಿ ಗ್ರಾಮದಲ್ಲಿ 1951ರ ಜುಲೈ 20ರಂದು ಜನಿಸಿದ ವಿ. ಸೋಮಣ್ಣ ಅವರು ಕಲಾ ಪದವೀಧರರು. ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ 1983 ರಲ್ಲಿ ಸಾರ್ವಜನಿಕ ಬದುಕಿಗೆ ಪ್ರವೇಶಿಸಿದ ಸೋಮಣ್ಣ ಅವರು, 1991ರಲ್ಲಿಯೂ ಪಾಲಿಕೆಯ ಸದಸ್ಯರಾಗಿ ಎಲ್ಲರ ಗಮನ ಸೆಳೆದರು.

ಬೆಂಗಳೂರು ನಗರದ ಬಿನ್ನಿಪೇಟೆ ಕ್ಷೇತ್ರದಿಂದ ಮೂರು ಬಾರಿ ಹಾಗೂ ಗೋವಿಂದರಾಜನಗರ ಕ್ಷೇತ್ರದಿಂದ ಒಂದು ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಶ್ರೀ ಸೋಮಣ್ಣ ಅವರು, ಗೋವಿಂದ ರಾಜನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಒಮ್ಮೆ ಸೋಲನ್ನು ಉಂಡರು. ನಂತರ 2010ರ ಜೂನ್ 10ರಂದು ರಾಜ್ಯ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ.

ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಬಂದೀಖಾನೆ, ಗೃಹರಕ್ಷಕ, ಸೈನಿಕ ಕಲ್ಯಾಣ, ಸಾರ್ವಜನಿಕ ಕುಂದು ಕೊರತೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದರು.2009ರಲ್ಲಿ ವಸತಿ ಮತ್ತು ಮುಜರಾಯಿ ಖಾತೆ ಸಚಿವರಾಗಿ ಕಾರ್ಯನಿರ್ವಹಣೆ. ಇದೀಗ ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ.

ಸಮಾಜ ಸೇವೆಯಲ್ಲಿ ಕಳಕಳಿ ಹೊಂದಿರುವ ಸೋಮಣ್ಣ ಅವರು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಜನಾನುರಾಗಿ ಎಂದೇ ಹೆಸರು ಗಳಿಸಿದ್ದಾರೆ. ಶಿಕ್ಷಣ ರಂಗದಲ್ಲಿಯೂ ಇವರ ದೇಣಿಗೆ ಅಪಾರ. ಇವರಿಗೆ ಪತ್ನಿ ಜಿ. ಶೈಲಜ ಹಾಗೂ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.

ಎಸ್.ಎ. ರಾಮದಾಸ್: [ಭಾವಚಿತ್ರ ನೋಡಿ]
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಧನಗೂರು ಗ್ರಾಮದಲ್ಲಿ ಅವರು ಅಶ್ವತ್‌ನಾರಾಯಣ ರಾವ್ ಹಾಗೂ ಸರೋಜಮ್ಮ ದಂಪತಿಯ ಮಗನಾಗಿ ಜನಿಸಿದ ಎಸ್.ಎ. ರಾಮದಾಸ್ ಅವರು ಕಲೆ ಮತ್ತು ಕಾನೂನು ಶಿಕ್ಷಣದಲ್ಲಿ ಪದವಿ ಹಾಗೂ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು.

ವಿದ್ಯಾರ್ಥಿ ದೆಸೆಯಿಂದಲೇ ಹಲವು ಚಳವಳಿಗಳ ಮೂಲಕ ನಾಯಕತ್ವದ ಬಳುವಳಿ ಪಡೆದ ರಾಮದಾಸ್ ಅವರು 1992ರಲ್ಲಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸಂಘಟನಾ ಚತುರರಾದ ಶ್ರೀ ರಾಮದಾಸ್ ಅವರು 1994ರಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ನಂತರ 1996ರಲ್ಲಿ ಪುನರಾಯ್ಕೆ ಹೊಂದಿದರೂ 2004ರಲ್ಲಿ ಸೋಲನುಭವಿಸಿದರು. 2008ರಲ್ಲಿ 3ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.

2002-03 ರಲ್ಲಿ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಮದಾಸ್ ಅವರು, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ಎರಡು ಬಾರಿ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ರಾಮದಾಸ್ ಅವರು, ಭಾರತೀಯ ರಿಸರ್ವ್ ಬ್ಯಾಂಕಿನ ನೋಟು ಮುದ್ರಣಾಲಯದ ಕಾರ್ಮಿಕರ ಸಂಘದ ಆಧ್ಯಕ್ಷರಾಗಿ, ಟೈಟನ್ ವಾಲ್ವ್ಸ್ ಕಾರ್ಖಾನೆ ನೌಕರ ಸಂಘದ ಅಧ್ಯಕ್ಷರಾಗಿ, ಆಸರೆ ಪ್ರತಿಷ್ಠಾನದ ಅಧ್ಯಕ್ಷರಾಗಿ, ಸ್ತ್ರೀ ದೀಪಾ ಮಹಿಳಾ ಸಂಘಗಳ ಒಕ್ಕೂಟದ ಗೌರವ ಅಧ್ಯಕ್ಷರಾಗಿ, ಅಗಸ್ತ್ಯ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ನಿರ್ದೇಶಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಡಿ-ಗ್ರೂಪ್ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ ಹೀಗೆ ಹತ್ತು ಹಲವು ಸಂಘಟನೆಗಳ ನಾಯಕತ್ವ ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X