ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿಗನೇ ನೋಡು ಬಾ ಭರಚುಕ್ಕಿ ನರ್ತನ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Gaganachukki Waterfalls
ಮೈಸೂರು, ಸೆ.1:ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗೆ ಸೇರಿದ ಶಿವನಸಮುದ್ರದ ಭರಚುಕ್ಕಿ ಹಾಗೂ ಗಗನಚುಕ್ಕಿ ಜಲಧಾರೆಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯತೊಡಗಿವೆ.

ಈಗಾಗಲೇ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಈ ಜಲಧಾರೆಗಳು ಮೈಕೈ ತುಂಬಿಕೊಂಡು ವಯ್ಯಾರದ ನಗೆ ಬೀರುತ್ತಿವೆ.

ಬೇಸಿಗೆಯ ಬಿರುಬಿಸಿಲಿಗೆ ಸಿಲುಕಿ ಅದೃಶ್ಯವಾಗಿದ್ದ ಜಲಧಾರೆಗಳಲ್ಲಿ ಜೀವಕಳೆ ಬಂದಿದೆ. ಹಾಗೆ ನೋಡಿದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಕೊಡಗಿನಲ್ಲಿ ಮಳೆಯ ಪ್ರಮಾಣ ಕಡಿಮೆಯೇ ಹೀಗಾಗಿ ಭೋರ್ಗರೆತ ಕೊಂಚ ಕಡಿಮೆಯೇ ಎನ್ನಬೇಕು.

ಅವಳಿ ಜಲಪಾತ ಕಾಣುವ ಯೋಗ: ತಲಕಾವೇರಿಯಲ್ಲಿ ಜನ್ಮ ತಾಳುವ ಕಾವೇರಿ ನದಿ ಹಾಗೂ ಕೇರಳದ ವೈನಾಡಲ್ಲಿ ಕಬಿನಿ ಈ ಎರಡು ನದಿಗಳು ತಿ.ನರಸೀಪುರದ ತಿರುಮಕೂಡಲಿನಲ್ಲಿ ಸಂಗಮವಾಗಿ, ಶಿವನಸಮುದ್ರದಲ್ಲಿ ವಿಶಾಲಬಂಡೆಯಲ್ಲಿ ಹರಡಿ ಜಲಧಾರೆಯಾಗಿ ಧುಮುಕುತ್ತವೆ. ಈ ಸಂದರ್ಭ ಕಾಣುವ ದೃಶ್ಯ ಮಾತ್ರ ಮನಮೋಹಕ. ಕರಿಬಂಡೆಯ ಮೇಲೆ ಮುನ್ನೂರು ಅಡಿ ಕೆಳಗೆ ಧುಮುಕುವಾಗ ಒಡಲಾಳದಲ್ಲಿದ್ದ ಬೆಳ್ಳಿಯೆಲ್ಲಾ ಕರಗಿ ಹರಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.

ಇಂತಹ ದೃಶ್ಯವನ್ನು ನೋಡಲೆಂದೇ ಎಲ್ಲೆಡೆಯಿಂದ ಪ್ರವಾಸಿಗರು ಮುಗಿಬೀಳುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಬೇರೆಡೆಗಳಲ್ಲಿ ಒಂದು ಸ್ಥಳದಲ್ಲಿ ಒಂದೇ ಜಲಧಾರೆ ನೋಡಲು ಸಾಧ್ಯ ಆದರೆ ಶಿವನಸಮುದ್ರದಲ್ಲಿ ಹಾಗಲ್ಲ ಒಂದೇ ಕಡೆ ಕೇವಲ ಐದು ಕಿಲೋ ಮೀಟರ್ ಅಂತರದಲ್ಲಿ ಎರಡು ಜಲಪಾತಗಳನ್ನು ನೋಡಲು ಸಾಧ್ಯವಿದೆ.

ಇಲ್ಲಿ ಎರಡು ಜಲಧಾರೆಗಳು ಸಮೀಪದಲ್ಲಿಯೇ ಇದ್ದರೂ ಈ ಎರಡು ಜಲಧಾರೆಗಳ ಪೈಕಿ ಭರಚುಕ್ಕಿ ಚಾಮರಾಜನಗರಕ್ಕೆ ಸೇರಿದರೆ, ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ. ಹೀಗಾಗಿ ಇವುಗಳು ಅಭಿವೃದ್ಧಿಯಾಗಿಲ್ಲ. ನಿಸರ್ಗ ಸೃಷ್ಟಿಯ ಈ ಜಲಧಾರೆಗಳು ಬಹುಶ: ವಿದೇಶದಲ್ಲಿದ್ದಿದ್ದರೆ ಎಂತಹ ಮೆರಗು ಪಡೆಯುತ್ತಿತ್ತೇನೋ ಆದರೆ ಇಲ್ಲಿ ಮಾತ್ರ ಅಭಿವೃದ್ಧಿ ಎನ್ನುವುದು ಕನಸಿನ ಮಾತಾಗಿ ಉಳಿದಿದೆ.

ಪ್ರವಾಸೋದ್ಯಮ ನಿಂತ ನೀರಾಗಿದೆ: ಚಾಮರಾಜನಗರಕ್ಕೆ ಸೇರುವ ಭರಚುಕ್ಕಿ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ಪ್ರವಾಸೋದ್ಯಮ ಇಲಾಖೆ ಇಲ್ಲಿ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಪ್ರವಾಸಿಗರು ಜಲಧಾರೆಯನ್ನು ಒಂದೆಡೆ ನಿಂತು ನೋಡಲು ಸುರಕ್ಷಿತ ಸ್ಥಳವಿಲ್ಲ, ಜಲಧಾರೆಯ ಕೆಳಗೆ ಇಳಿದು ಹೋಗಲು ಮೆಟ್ಟಿಲುಗಳಿಲ್ಲ.

ಸುರಕ್ಷತೆಯ ಕೊರತೆಯಿಂದಾಗಿ ಇಲ್ಲಿ ಅನೇಕರು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಮೂರು ವರ್ಷಗಳ ಹಿಂದೆ ಇಲ್ಲಿ ಜಿಲ್ಲಾಡಳಿತದ ವತಿಯಿಂದ ಜಲಪಾತ ಉತ್ಸವ ಆಚರಿಸಲಾಗಿತ್ತು. ಆ ಸಂದರ್ಭ ದಲ್ಲಿ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಲಾಗಿತ್ತು. ಆದರೆ ಅದು ಭರವಸೆಯಾಗಿಯೇ ಉಳಿದಿದೆ.

ಇನ್ನೊಂದೆಡೆ ಮಂಡ್ಯ ಜಿಲ್ಲೆಗೆ ಸೇರಿದ ಗಗನಚುಕ್ಕಿ ಜಲಧಾರೆಯ ಅಭಿವೃದ್ಧಿಯತ್ತ ಮಂಡ್ಯ ಜಿಲ್ಲಾಡಳಿತ ಮುಂದಾಗಿದ್ದು, ಪ್ರವಾಸಿಗರನ್ನು ಸೆಳೆಯಲು ಪ್ರತಿ ವರ್ಷ ಜಲಪಾತೋತ್ಸವ ನಡೆಸುತ್ತಿದೆ. ಪ್ರಸಕ್ತ ವರ್ಷ ಸೆ.18 ಹಾಗೂ 19 ರಂದು ಜಲಪಾತೋತ್ಸವ ನಡೆಸಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X