• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಲ್ಲಿ ಒಂದು ಅದ್ಭುತ ಕಲಿಯುವ ಮನೆ

By * ಬಿ.ಎಂ.ಲವಕುಮಾರ್, ಮೈಸೂರು
|
ಅಲ್ಲಿ ಎಲ್ಲವೂ ಇದೆ. ಪಾಠದೊಂದಿಗೆ ಆಟ, ಕುಣಿತ, ಮನೋರಂಜನೆ ಹೀಗೆ... ಇದನ್ನು ಶಾಲೆ ಎನ್ನಲಾಗದು ಏಕೆಂದರೆ ಇಲ್ಲಿರುವ ಮಕ್ಕಳಿಗೆ ಇದು ಮಮತೆಯ ತಾಣ. ಹಾಗಾಗಿ ಇದನ್ನು ಕಲಿಯುವ ಮನೆ ಎನ್ನುವುದು ಸೂಕ್ತ.

ದಿವ್ಯದೀಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ಥಾಪನೆಗೊಂಡಿರುವ ಕಲಿಯುವ ಮನೆ ಮೈಸೂರು-ಮಾನಂದವಾಡಿ ರಸ್ತೆಯ ಕೆಂಚಲಗೂಡು ಗ್ರಾಮದಲ್ಲಿದೆ. ಈ ಶಾಲೆ ಇತರೆ ಶಾಲೆಗಳಿಗೆ ಹೋಲಿಸಿದರೆ ವಿಶಿಷ್ಟವಾಗಿಯೂ, ವಿಭಿನ್ನವಾಗಿಯೂ ಗಮನ ಸೆಳೆಯುತ್ತದೆ.

ಅಂಗವಿಕಲರು, ಅನಾಥರು, ಶಾಲೆಬಿಟ್ಟವರು, ಬಡತನದಿಂದಾಗಿ ಕಲಿಕೆಯಿಂದ ವಂಚಿತರಾದ ವಿದ್ಯಾರ್ಥಿಗಳು, ಬಾಲಕಾರ್ಮಿಕರು, ಬೀದಿ ಮಕ್ಕಳು ಹೀಗೆ ಎಂದಿನ ಬದುಕಿನಿಂದ ವಂಚಿತರಾದ ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಕಲಿಕೆಯೊಂದಿಗೆ ಹಸಿದ ಹೊಟ್ಟೆಗೆ ಅನ್ನ, ಮೈಮುಚ್ಚಲು ಬಟ್ಟೆ ಜೊತೆಗೆ ನಾವು ಅನಾಥರೆಂಬ ಭಾವನೆ ಬಾರದಂತೆ ಹೆತ್ತವರಂತೆಯೇ ಪ್ರೀತ್ಯಾದರ ತೋರಿ ಬೆಳೆಸಲಾಗುತ್ತಿದೆ.

ಇವತ್ತು ಕಲಿಯುವ ಮನೆಯಂತಹ ಒಂದು ಮಮತೆಯ ತಾಣ ನಿರ್ಮಾಣಗೊಳ್ಳಬೇಕಿದ್ದರೆ ಇದರ ಹಿಂದೆ ಹಲವು ದಾನಿಗಳ ಸಂಘ, ಸಂಸ್ಥೆಗಳ ಕೊಡುಗೆಯಿದೆ. ಆದರೆ ಇಂತಹ ಒಂದು ಕನಸು ಸಾಕಾರಗೊಳ್ಳಲು ಕಾರಣಕರ್ತರಾದವರೆಂದರೆ ಇಂಜಿನಿಯರ್ ಎಂ.ಆರ್.ಅನಂತಕುಮಾರ್. ಇವರಲ್ಲಿ ಕಲಿಯುವ ಮನೆ ಸ್ಥಾಪನೆಯ ಕಲ್ಪನೆ ಬಹಳ ವರ್ಷಗಳಿಂದಲೇ ಇತ್ತು.

ಏಕೆಂದರೆ ಅವರು ಚಿಕ್ಕಂದಿನಲ್ಲಿಯೇ ಎಲ್ಲರನ್ನೂ ಕಳೆದುಕೊಂಡು ಅನಾಥಪ್ರಜ್ಞೆಯಿಂದ ಬೆಳೆದವರು. ಹಾಗಾಗಿ ಅಂತಹ ಮಕ್ಕಳಿಗೆ ಆಸರೆ ನೀಡಬೇಕೆಂಬುದು ಅವರ ಬಯಕೆಯಾಗಿತ್ತು. ಇದೇ ಕಲಿಯುವ ಮನೆ ಹುಟ್ಟಿಗೆ ಪ್ರೇರಣೆಯಾಯಿತೆಂದರೆ ಅದು ಅತಿಶಯೋಕ್ತಿಯಲ್ಲ.

ಅನಂತಕುಮಾರ್ 1992 ರಲ್ಲಿ ಮೈಸೂರಿನ ಶ್ರೀರಾಂಪುರದ ಬೀದಿ ಮಕ್ಕಳಿಗೆ, ಪರೀಕ್ಷೆಯಲ್ಲಿ ಫೇಲಾದ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ದಿವ್ಯ ಟ್ರಸ್ಟ್‌ಗೆ ಬುನಾದಿ ಹಾಕಿದರು. ಬಳಿಕ ಅಧಿಕೃತವಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿ ಸ್ಕ್ರೀನ್ ಪ್ರಿಂಟಿಂಗ್ ತೆರೆದು ತರಬೇತಿ ನೀಡುವ ಮೂಲಕ ಉದ್ಯೋಗದ ಮಾರ್ಗ ತೋರಿಸಿದರು. ಇವರ ಗರಡಿಯಲ್ಲಿ ಬೆಳೆದ ಮಕ್ಕಳು ತಯಾರಿಸಿದ ಗ್ರೀಟಿಂಗ್ಸ್ ಕಾರ್ಡ್, ಮತ್ತಿತರ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ದೊರೆತು ಒಂದಷ್ಟು ಆದಾಯವನ್ನು ತಂದು ಕೊಟ್ಟಿತು.

2005ರಲ್ಲಿ ಕಲಿಯುವ ಮನೆಯನ್ನು ಮಾನಂದವಾಡಿ ರಸ್ತೆಯಲ್ಲಿರುವ ಕೆಂಚಲಗೂಡು ಗ್ರಾಮದಲ್ಲಿ ದಾನಿಗಳ ಸಹಕಾರದೊಂದಿಗೆ 2 ಎಕರೆ 38 ಕುಂಟೆ ವಿಸ್ತೀರ್ಣದ ಪ್ರದೇಶದಲ್ಲಿ ಆರಂಭಿಸಲಾಯಿತು. ಮೊದಲಿಗೆ ಸುಮಾರು 14 ಮಕ್ಕಳು ಈ ಶಾಲೆಯಲ್ಲಿ ಆಶ್ರಯ ಪಡೆದಿದ್ದರೆ, ಈಗ 58 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಅವರಲ್ಲಿ 25ಮಕ್ಕಳು ಇಲ್ಲಿಯೇ ಆಶ್ರಯ ಪಡೆದಿದ್ದರೆ, ಉಳಿದ ಮಕ್ಕಳು ಸುತ್ತಮುತ್ತಲಿನ ಗ್ರಾಮದಿಂದ ಬಂದು ಕಲಿಯುತ್ತಿದ್ದಾರೆ.

ಅನಂತ್‌ಕುಮಾರ್ ಅವರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಅವರ ಪತ್ನಿ ಪದ್ಮಅನಂತ್‌ಕುಮಾರ್. ಇವತ್ತು ವಿವಿಧ ಸಂಘ ಸಂಸ್ಥೆಗಳು, ದಾನಿಗಳು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಹೀಗಾಗಿ ಕಲಿಯುವ ಮನೆ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗಿದೆ.

ಕಲಿಯುವ ಮನೆಯಲ್ಲಿನ ವಾತಾವರಣವೇ ವಿಭಿನ್ನವಾಗಿದೆ. ಮಕ್ಕಳ ಅಭಿರುಚಿಗೆ, ಮನೋಭಾವಕ್ಕೆ ತಕ್ಕಂತೆ ಆದ್ಯತೆ ನೀಡಲಾಗುತ್ತದೆ. ಮಕ್ಕಳು ಆಡುತ್ತಾ ಕಲಿಯುವ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗದೆ. ಮಕ್ಕಳಿಗೆ ಯಾರೂ ಇಲ್ಲಿ ಗುರುವಲ್ಲ ಅವರೊಬ್ಬ ಅಕ್ಕರೆಯ ಅಣ್ಣ. ಬಡತನದಲ್ಲಿ ಬೆಂದ, ಹೆತ್ತವರನ್ನು ಕಳೆದುಕೊಂಡು ಅನಾಥರಾದ... ಹೀಗೆ ಸಮಾಜದ ತಾತ್ಸಾರಕ್ಕೊಳಗಾದ ಮಕ್ಕಳಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ ಆತ್ಮಸ್ಥೈರ್ಯ ತುಂಬಿ ನಾವೇನು ಯಾರಿಗೂ ಕಡಿಮೆಯಿಲ್ಲ ಎಂಬ ಭಾವನೆಯನ್ನು ಬೆಳೆಸುವುದು ಮುಖ್ಯ ಉದ್ದೇಶವಾಗಿದೆ.

ಮಕ್ಕಳಿಗೆ ಸ್ವಾತಂತ್ರ್ಯ ನೀಡುವ ಮೂಲಕ ಅವರು ಅಪೇಕ್ಷಿಸಿದನ್ನು ನೀಡಿ ಪಾಠ ಪ್ರವಚನಗಳನ್ನು ಕಲಿಸಲಾಗುತ್ತಿದೆ. ಆಟ, ಹಾಡು, ಕಂಪ್ಯೂಟರ್ ಮಾತ್ರವಲ್ಲದೆ, ಕಥೆ ಹೇಳುವುದು, ವ್ಯಾಯಾಮ, ಯೋಗಾಭ್ಯಾಸದೊಂದಿಗೆ ಅವರಿಗೆ ಪಾಠ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ವೈವಿಧ್ಯಮಯ ಕ್ರಮಗಳಿಂದಾಗಿ ಕಲಿಕೆಯಲ್ಲಿ ಹಿಂದೆ ಬಿದ್ದಿರುವ ಮಕ್ಕಳನ್ನು ಮತ್ತೆ ಶಿಕ್ಷಣದತ್ತ ಸೆಳೆಯಲು ಸಾಧ್ಯವಾಗುತ್ತಿದೆ.

ಕಲಿಯುವ ಮನೆಯಲ್ಲಿ ಕನ್ನಡದೊಂದಿಗೆ ಆಂಗ್ಲ ಭಾಷೆಯನ್ನು ಕೂಡ ಕಲಿಸಲಾಗುತ್ತಿದೆ. ಅಷ್ಟೇ ಅಲ್ಲ ಗಣಿತ, ವಿಜ್ಞಾನ, ಸಮಾಜಶಾಸ್ತ್ರ, ಹಿಂದಿ ಭಾಷೆಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ. ರಾಮಾಯಣ, ಮಹಾಭಾರತ, ಪಂಚತಂತ್ರ... ಹೀಗೆ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಕತೆಗಳ ಮೂಲಕ ಹೇಳಿಕೊಡಲಾಗುತ್ತದೆ. ಪರಿಸರ ಪ್ರಜ್ಞೆ ಮೂಡಿಸಲು ಗಿಡ-ಮರ ಬೆಳೆಸುವುದು, ಜೊತೆಗೆ ನಮ್ಮ ಬೆನ್ನೆಲುಬಾಗಿರುವ ಕೃಷಿಯ ಬಗ್ಗೆ ತೋಟದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಕೃಷಿಯತ್ತ ಆಸಕ್ತಿ ಮೂಡಿಸುವುದು, ಜೊತೆಗೆ ಮಕ್ಕಳಿಗೆ ತಾವು ಕಲಿತಿದ್ದನ್ನು ಪ್ರದರ್ಶಿಸಲು ಪರೀಕ್ಷೆಗಳು ಸಹ ನಡೆಯುತ್ತವೆ.

ಚಿಣ್ಣರ ಬ್ಯಾಂಕ್ ಸ್ಥಾಪನೆ: ಮಕ್ಕಳು ತಮ್ಮ ಸುತ್ತಮುತ್ತ ಸಿಗುವ ಕಚ್ಛಾ ವಸ್ತುಗಳಿಂದ ತಯಾರಿಸಿದ ಪರಿಸರ ಸ್ನೇಹಿ ಗ್ರೀಟಿಂಗ್ಸ್ ಕಾರ್ಡ್‌ಗಳು ಜನರ ಗಮನ ಸೆಳೆಯುತ್ತಿದ್ದು, ಒಂದಷ್ಟು ಆದಾಯವನ್ನು ತಂದು ಕೊಡುತ್ತಿದೆ. ಇದರೊಂದಿಗೆ ಬದುಕಿಗೆ ಅತ್ಯ ಅಮೂಲ್ಯವಾದ ಬ್ಯಾಕಿಂಗ್ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ 'ಮಕ್ಕಳ ಬ್ಯಾಂಕ್'ನ್ನು ಆರಂಭಿಸಲಾಗಿದೆ.

ಈ ಬ್ಯಾಂಕಿನಲ್ಲಿ ಪಾಸ್ ಬುಕ್, ಉಳಿತಾಯ ಖಾತೆ, ಚೆಕ್‌ಬುಕ್‌ನಂತಹ ಎಲ್ಲಾ ಸೌಲಭ್ಯಗಳಿವೆ. ಬ್ಯಾಂಕ್‌ಗಾಗಿಯೇ ಒಂದು ಕೊಠಡಿಯಿದ್ದು, ನಗದು ಕೌಂಟರ್ ಜೊತೆಯಲ್ಲಿಯೇ ವಸ್ತುಗಳ ಕೌಂಟರ್ ಸಹ ಇವೆ. ಬ್ಯಾಂಕಿನಲ್ಲಿ ಒಂದು ನಗದು ಪೆಟ್ಟಿಗೆ, ಲೆಕ್ಕಪತ್ರಗಳ ರಿಜಿಸ್ಟರ್, ಚಲನ್ ಪುಸ್ತಕ ಹಾಗೂ ಮಕ್ಕಳು ಉಪಯೋಗಿಸುವಂತಹ ವಸ್ತುಗಳಾದ ಸಾಬೂನು, ಟೂತ್‌ಪೇಸ್ಟ್, ಬ್ರಷ್, ಫೌಡರ್, ಪುಸ್ತಕ, ಲೇಖನಿ, ಸಿಹಿತಿಂಡಿಗಳು ಮುಂತಾದ ವಸ್ತುಗಳಿವೆ. ಇಲ್ಲಿನ ಪ್ರತಿ ಮಗುವಿಗೂ ಒಂದು ಪಾಸ್ ಪುಸ್ತಕ, ವೈಯಕ್ತಿಕ ಆದಾಯ, ಒಂದು ಚೆಕ್ ಪುಸ್ತಕ, ಜೊತೆಗೆ ಖರ್ಚು ವೆಚ್ಚಗಳನ್ನು ಬರೆಯುವ ಒಂದು ಪುಸ್ತಕ ಹಾಗೂ ಸ್ವಲ್ಪ ನಗದು ಹಣವನ್ನು ನೀಡಲಾಗಿದೆ. ಪ್ರತಿ ತಿಂಗಳು ಹಣವನ್ನು ಚೆಕ್ ರೂಪದಲ್ಲಿ ನೀಡಲಾಗುತ್ತದೆ.

ಪ್ರತಿ ವಿದ್ಯಾರ್ಥಿಯೂ ಸರತಿಯಂತೆ ಬ್ಯಾಂಕ್‌ನ ಕಾರ್ಯ ನಿರ್ವಾಹಕರಾಗಿ (ಮ್ಯಾನೇಜರ್) ಕೆಲಸ ನಿರ್ವಹಿಸುತ್ತಾರೆ. ಮಕ್ಕಳಿಗೆ ಹಣ ಹೇಗೆ ಬರುತ್ತದೆ ಎಂದು ನೀವು ಕೇಳಬಹುದು? ಅದಕ್ಕೆ ಉತ್ತರವೂ ತುಂಬಾ ಸುಲಭ. ಸಂಸ್ಥೆಯು ಮಕ್ಕಳಿಗೆ ಪ್ರತಿ ತಿಂಗಳು ವೈಯಕ್ತಿಕ ಅವಶ್ಯಕತೆಗಳಿಗಾಗಿ ವಸ್ತುಗಳನ್ನು ಖರೀದಿಸಲು ಹಣ ಕೊಡುತ್ತದೆ. ಇಲ್ಲಿ ಮಕ್ಕಳು ಹಣವನ್ನು ಸಾವಯವ ಕೃಷಿಯಿಂದ ತರಕಾರಿ ಬೆಳೆಸಿ ಸಂಸ್ಥೆಗೆ ಮಾರಾಟ ಮಾಡುವ ಮೂಲಕ ಅಥವಾ ಇನ್ನಿತರ ಕೆಲಸಗಳನ್ನು ಮಾಡುವ ಮೂಲಕ ಹಣ ಪಡೆಯುತ್ತಾರೆ. ಆ ಮೂಲಕ ಬ್ಯಾಂಕ್ ವ್ಯವಹಾರ ನಡೆಸುತ್ತಾರೆ.

ಈ ಚಿಣ್ಣರ ಬ್ಯಾಂಕ್ ಸ್ಥಾಪನೆ ಹೇಗಾಯಿತು ಎಂದು ಹುಡುಕುತ್ತಾ ಹೋದರೆ ನಮಗೆ ಉತ್ತರ ಸಿಗುತ್ತದೆ. ಶಾಲೆಯಲ್ಲಿದ್ದ ಹುಡುಗನೊಬ್ಬ ಲೆಕ್ಕದಲ್ಲಿ ಸ್ವಲ್ಪ ದಡ್ಡನೇ ಆಗಿದ್ದ. ಒಂದು ದಿನ ಆತ ಆ ಹಳ್ಳಿಯಲ್ಲಿದ್ದ ಅಂಗಡಿಯೊಂದಕ್ಕೆ ಅಕ್ಕಿ ಖರೀದಿಸಲೆಂದು ತೆರಳಿದ. 3 ಕೆ.ಜಿ. ಅಕ್ಕಿ ಖರೀದಿಸಿ 50 ರೂಪಾಯಿಯ ನೋಟೊಂದನ್ನು ಅಂಗಡಿಯವವನಿಗೆ ನೀಡಿದ. ಆದರೆ ಅಂಗಡಿಯವನು ಚಿಲ್ಲರೆಯನ್ನು ಸರಿಯಾಗಿ ನೀಡದಿರುವುದನ್ನು ಹುಡುಗ ಮನಸ್ಸಿನಲ್ಲಿಯೇ ಗುಣಿಸಿ, ಭಾಗಿಸಿ ತಿಳಿದುಕೊಂಡು ಅಂಗಡಿಯವನಿಂದ ಚಿಲ್ಲರೆಯನ್ನು ಕೇಳಿ ಪಡೆದುಕೊಂಡನು. ಈ ಅನುಭವವೇ ಮಕ್ಕಳ ಬ್ಯಾಂಕ್‌ನ್ನು ತೆರೆಯಲು ಪ್ರೇರಣೆ ನೀಡಿತು ಎನ್ನುತ್ತಾರೆ ಅನಂತ್‌ಕುಮಾರ್.

ಕಲಿಯುವಮನೆಯ ವಿಶೇಷತೆಯನ್ನು ಅರಿತು ಅಲ್ಲಿರುವ ಮಕ್ಕಳಿಗೆ ಏನಾದರು ಸಹಾಯ ಮಾಡಲು ಮುಂದೆ ಬರುವ ದಾನಿಗಳಿಗೂ ಅವಕಾಶವಿದೆ. ವಿಳಾಸ ಹೀಗಿದೆ. ಕಲಿಯುವ ಮನೆ, ದಿವ್ಯದೀಪ ಟ್ರಸ್ಟ್, ಸಾಲುಹುಂಡಿ ಹತ್ತಿರ, ರಾಯನಕೆರೆ ಪೋಸ್ಟ್, ಮಾನಂದವಾಡಿ ರಸ್ತೆ, ಮೈಸೂರು-570008, ಮೊಬೈಲ್ :ಅನಂತ್‌ಕುಮಾರ್-9341369901 ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more