ಹಬ್ಬದ ದಿನದಂದು ಬಿಟ್ಟಿ ಬೈಗುಳ ತಿಂದ ಕಾಂಗ್ರೆಸ್

ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿದ್ದ, ಜನಜಾಗೃತಿ ಸಮಾವೇಶಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆಎಸ್ ಈಶ್ವರಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಜನಾರ್ದನ ರೆಡ್ಡಿ, ಶ್ರೀರಾಮುಲು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮುಂತಾದ ನಾಯಕರು ಕಾಂಗ್ರೆಸ್ ನಾಯಕರ ವರ್ತನೆಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸಮಾವೇಶದ ಸಂಕ್ಷಿಪ್ತ ವಿವರ: 50 ಸಾವಿರ ಜನಕ್ಕೆ ಆಸನ ವ್ಯವಸ್ಥೆ, 2-3 ಲಕ್ಷ ಜನ ಜಮಾವಣೆ, ವಾಸ್ತು ಪ್ರಕಾರ ನಿರ್ಮಾಣಗೊಂಡ 40 *120ಅಡಿಯ ವೇದಿಕೆ, 50 ಕ್ಕೂ ಹೆಚ್ಚು ಗಣ್ಯರು ವೇದಿಕೆಯಲ್ಲಿ ಆಸೀನರಾಗಲು ಸ್ಥಳಾವಕಾಶ. ಈಶಾನ್ಯ ಸಾರಿಗೆ ಸಂಸ್ಥೆಯು 2,575 ಬಸ್‌ಗಳನ್ನು ಸಮಾವೇಶಕ್ಕಾಗಿ ಹೊರಡಿಸಿತ್ತು.
ರೆಡ್ಡಿ ಸೋದರರು ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಅಲ್ಲಗಳೆದು, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡದೇ ಇಲ್ಲ ಎಂದು ಸಮರ್ಥಿಸಿಕೊಂಡರೆ, ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ಕಾಂಗ್ರೆಸ್ಸಿಗರ ಏಕವಚನ ಪ್ರಯೋಗ ಭಾಷೆಯ ಮೇಲೆ ಕಿಡಿ ಕಾರಿದರು. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದಂತೆ ಹರಸು ತಾಯಿ ಎಂದು ವರಮಹಾಲಕ್ಷ್ಮಿ ದೇವಿಯನ್ನು ಬೇಡಿದರು.
ಸುಷ್ಮಾ ಸಿಡಿಸಿದ ಬಾಂಬ್: ಬಳ್ಳಾರಿಯ ರೆಡ್ಡಿ ಸಹೋದರರನ್ನೇ ತಮ್ಮತ್ತ ಸೆಳೆದುಕೊಂಡು ಸರಕಾರ ಉರುಳಿಸಿ, ತಾವೇ ಸರಕಾರ ರಚಿಸುವ ಬಗ್ಗೆ ಎರಡು ಬಾರಿ ಪ್ರಯತ್ನಿಸಿತ್ತು. ಅದು ಕೂಡ ಸಂವಿಧಾನಾತ್ಮಕವಾಗಿ ಅತ್ಯಂತ ಉನ್ನತ, ಜವಾಬ್ದಾರಿಯುತ ಹುದ್ದೆಯಲ್ಲಿರುವವರ ಮೂಲಕವೇ ಈ ಪ್ರಯತ್ನ ನಡೆಯಿತು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕಿ, ಬಿಜೆಪಿ ಹಿರಿಯ ನೇತಾರೆ ಸುಷ್ಮಾ ಸ್ವರಾಜ್ ಅವರು ಆರೋಪಿಸಿದರು. ಆದರೆ, ಬಳ್ಳಾರಿ ಸಹೋದರರ ಬಿಜೆಪಿ ನಿಷ್ಠೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಹೊಗಳಿದರು.
ಅಂಧ್ರಕ್ಕೂ ಬಿಜೆಪಿ ಲಗ್ಗೆ: ಈ ಹಿಂದೆ ಎದ್ದಿದ್ದ ಊಹಾಪೋಹದಂತೆ ರೆಡ್ಡಿ ಸೋದರರ ಸಹಾಯದಿಂದ ಕೇಂದ್ರ ಬಿಜೆಪಿ, ಆಂಧ್ರಪ್ರದೇಶದಲ್ಲಿ ಭದ್ರವಾಗಿ ನೆಲೆಯೂರಲು ಯತ್ನಿಸುತ್ತಿದೆ. ದೇವಿ ವರಮಹಾಲಕ್ಷ್ಮಿಯ ಕೃಪೆಯಿದ್ದರೆ, ಬಳ್ಳಾರಿ ಹಾಗೂ ಕರ್ನಾಟಕದಂತೆಆಂಧ್ರ ಕೂಡಾ ಬಿಜೆಪಿಯ ತೆಕ್ಕೆಗೆ ಬೀಳುವ ದಿನಗಳು ದೂರವಿಲ್ಲ ಎಂದು ಸುಷ್ಮಾ ಹೇಳಿದರು.
ಕೊಂಡಯ್ಯಗೆ ಪ್ರತ್ಯುತ್ತರ : ಸುಷ್ಮಾರನ್ನು ಪ್ರಧಾನಿಯಾಗಿಸಲು 1000 ಕೋಟಿ ರೂಪಾಯಿ ಸೇರಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ಕೊಂಡಯ್ಯ ಟೀಕೆಗೂ ಉತ್ತರಿಸಿದ ಸುಷ್ಮಾ, 'ಕೊಂಡಯ್ಯ ಅವರೇ, ಪ್ರಧಾನಿಯಾಗುವುದು ನೋಟುಗಳಿಂದಲ್ಲ, ಜನತೆಯ ಪ್ರೀತಿಯ ಓಟಿನಿಂದ. ನೋಟಿನಿಂದ ಪ್ರಧಾನಿ ಆಯ್ಕೆಯಾಗುತ್ತಿದ್ದರೆ ಟಾಟಾ, ಬಿರ್ಲಾ, ಅಂಬಾನಿ ಕೂಡ ಎಂದೋ ಪ್ರಧಾನಿಯಾಗುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿಯವರು ಜನರ ಪ್ರೀತಿಯ ಓಟಿನಿಂದಲೇ ಅಲ್ಲವೇ ಪ್ರಧಾನಿಯಾಗಿದ್ದು' ಎಂದರು.
ಲಿಮ್ಕಾ ದಾಖಲೆಗೆ ಸಾಮೂಹಿಕ ವಿವಾಹ: ಜಿಲ್ಲಾ ಬಿಜೆಪಿ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ಹಮ್ಮಿಕೊಂಡಿರುವ 11ನೇ ವರ್ಷದ ಸಾಮೂಹಿಕ ವಿವಾಹಕ್ಕಾಗಿ ನಗರದ ಮ್ಯಾಕ್ ಸ್ಟೇಡಿಯಂ (ಬಿಡಿಎಎ ಪುಟ್‌ಬಾಲ್ ಮೈದಾನ)ನಲ್ಲಿ 329 ಜೋಡಿ ನವ ದಂಪತಿಗಳಾದರು. ಸುಮಾರು 1000 ಕ್ಕೂ ಹೆಚ್ಚಿನ ಸಂಖ್ಯೆಯ ಗಣ್ಯರು ಕೂಡಲು ಆಸನದ ವ್ಯವಸ್ಥೆ ಮಾಡಲಾಗಿತ್ತು. ವಧುವಿಗೆ ಸೀರೆ, ತಾಳಿ, ವರನಿಗೆ ಬಟ್ಟೆ ಅಲ್ಲದೆ ಪ್ರತಿ ಜೋಡಿಗೆ 10 ಸಾವಿರ ರೂ ನೀಡಲಾಯಿತು. ನವ ವಧುವರರನ್ನು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಆಶೀರ್ವದಿಸಿದರು.
ಒಂದಾದ ಶಾಂತಾ, ಶೋಭಾ ಕರಂದ್ಲಾಜೆ: ಸುಷ್ಮಾ ಸ್ವರಾಜ್ ಅವರ ವರಮಹಾಲಕ್ಷ್ಮಿ ಪೂಜೆಗೆ ಕೈ ಜೋಡಿಸಿದ ಶೋಭಾ ಕರಂದ್ಲಾಜೆ, ಬಳ್ಳಾರಿ ಸಂಸದೆ ಶಾಂತಾ ಜೊತೆಗೂಡಿ ಸಂಭ್ರಮದಿಂದ ಹಬ್ಬ ಆಚರಿಸಿದರು. ಈ ಮೂಲಕ ಶೋಭಾ ಸಂಪುಟ ಸೇರ್ಪಡೆ ಹಾದಿ ಸುಗಮವಾಗಿದೆ ಎಂಬ ಸೂಚನೆ ಹೊರಬಿದ್ದಿದೆ.
ಗ್ಯಾಲರಿ : ಬಳ್ಳಾರಿಯಲ್ಲಿ ಸುಷ್ಮಾ ವರಮಹಾಲಕ್ಷ್ಮಿ ಪೂಜೆ || ದಟ್ಸ್ ಕನ್ನಡ ಹೂವಿನಂಗಡಿ 24/7












Click it and Unblock the Notifications