ಮಾನವ ಕಳ್ಳಸಾಗಣೆಯಲ್ಲಿ ರಾಜ್ಯ ನಂ-1?

ರಾಜ್ಯದಲ್ಲಿ ಮಾನವ ಕಳ್ಳಸಾಗಣೆ ದಂಧೆಯಲ್ಲಿ ತೊಡಗಿರುವ ಸಮಾಜಘಾತಕರು ತಿಂಗಳಿಗೆ 25 ಕೋಟಿ ರುಪಾಯಿ ವಹಿವಾಟು ನಡೆಸುತ್ತಿದ್ದಾರೆ. ಆಂಧ್ರಕ್ಕೆ ಹೋಲಿಸಿದರೆ ಇದು ಶೇಕಡಾ 5 ರಷ್ಟು ಹೆಚ್ಚು ಎಂದು ರಾಜ್ಯ ಪೊಲೀಸ್ ಇಲಾಖೆ ಸಿದ್ಧಪಡಿಸಿರುವ ವರದಿಯಿಂದ ಬಹಿರಂಗಗೊಂಡಿದೆ. ಒಂದು ವರ್ಷದಿಂದೀಚೆಗೆ ರಾಜ್ಯದಲ್ಲಿ ಮಾನವ ಕಳ್ಳಸಾಗಣೆ ಹೆಚ್ಚಾಗಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ 2012ರ ವೇಳೆಗೆ ಆಂಧ್ರಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಹಾಗೂ ಮಕ್ಕಳು ಬಲಿಯಾಗಲಿದ್ದಾರೆ.
ಅಮಾಯಕ ಮಹಿಳೆ ಮತ್ತು ಮಕ್ಕಳ ಬಡತನವನ್ನು ಬಂಡವಾಳವಾಗಿಸಿಕೊಂಡು ದಂಧೆಕೋರರು ಅವರ ಪೋಷಕರಿಗೆ ಉದ್ಯೋಗ, ಹಣ ಹಾಗೂ ದಿಢೀರ್ ಶ್ರೀಮಂತಿಕೆಯ ಆಮಿಷ ತೋರಿಸಿ ಹೊರರಾಜ್ಯ ಮತ್ತು ಹೊರದೇಶಗಳಿಗೆ ಸಾಗಿಸಿ ವೇಶ್ಯಾವಾಟಿಕೆ, ಭಿಕ್ಷಾಟನೆ ಹಾಗೂ ಕೂಲಿ ಕೆಲಸಕ್ಕೆ ನೂಕಿ ಕೋಟ್ಯಂತರ ರುಪಾಯಿ ಹಣ ಗಳಿಸುತ್ತಿದ್ದಾರೆ ಎನ್ನುವ ಅಂಶ ಹೊರಬಿದ್ದಿದೆ.
ಕಳೆದ 5 ವರ್ಷಗಳಲ್ಲಿ ಸುಮಾರು 3.6 ಲಕ್ಷ ಮಹಿಳೆಯರು, ಮಕ್ಕಳು ನಾಪತ್ತೆಯಾಗಿದ್ದಾರೆ. ಬೆಳಗಾವಿ, ಬಿಜಾಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಗುಲ್ಬರ್ಗಾ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಅತಿ ಹೆಚ್ಚು ಯುವತಿಯರು ಹಾಗೂ ಮಕ್ಕಳು ಪ್ರತಿ ತಿಂಗಳು ಕಣ್ಮರೆಯಾಗುತ್ತಿದ್ದಾರೆ.












Click it and Unblock the Notifications