ಚಿತಾಭಸ್ಮದ ಜೊತೆ ನೀರು ಪಾಲಾದ ಎಂಟು ಮಂದಿ
ಮೃತರು ಗದಗ - ಬೆಟಗೇರಿ ಹಾಗೂ ಹುಬ್ಬಳ್ಳಿ ನಿವಾಸಿಗಳಾಗಿದ್ದಾರೆ. ಟೀಕಾಸಾ ಬಾಕಳೆ (40), ಅಮೃತಾಬಾಯಿ (32) ಅಂಬಿಕಾಬಾಯಿ (50), ವಿಷ್ಣು (36), ಮಾಣಿಕ್ಯ (48), ನಾಗರಾಜ್ (45), ರಾಜಣ್ಣ (40), ಯಲ್ಲಪ್ಪ (80). ವಿಷ್ಣು ಅವರ ತಂದೆ ಆನಂದ್ ಬದ್ದಿ ಅವರು 3 ದಿನಗಳ ಹಿಂದೆ ಮೃತಪಟ್ಟಿದ್ದರು. ಇವರ ಅಸ್ತಿಯನ್ನು ತುಂಗಭದ್ರಾ ನದಿಯಲ್ಲಿ ಬಿಡಲು 16 ಜನ ಸಂಬಂಧಿಕರು ಹೂವಿನಹಡಗಲಿ ತಾಲೂಕಿನ ಮೊದಲಘಟ್ಟ ಗ್ರಾಮದ ಗದಗ - ಬಳ್ಳಾರಿ ಸಂಪರ್ಕ ಸೇತುವೆ ಪಕ್ಕದ ಆಂಜಿನೇಯ ದೇವಸ್ಥಾನಕ್ಕೆ ಆಗಮಿಸಿದ್ದರು.
ನದಿಯ ದಡದಲ್ಲಿ ಅಸ್ತಿ ವಿಸರ್ಜಿಸುವ ಪೂಜಾ ವಿಧಿಗಳನ್ನು ವಿಷ್ಣು ಪೂರ್ಣಗೊಳಿಸಿದ ನಂತರ ಅಸ್ತಿಯನ್ನು ನದಿಯ ನೀರಲ್ಲಿ ಲೀನಗೊಳಿಸುವಾಗ ನೀರಿನ ಸೆಳೆತ ಹೆಚ್ಚಾಗಿ ಅವರು ಕಾಣೆ ಆದರು. ವಿಷ್ಣುವನ್ನು ಹುಡುಕುತ್ತಾ ನೀರಿಗಿಳಿದ ಏಳು ಜನರು ಕೂಡ ನೀರಿನ ಹಿರಿವಿನ ರಭಸದಲ್ಲಿ ಕಾಣೆ ಆದರು ಎಂದು ಮೃತರ ಸಂಬಂಧಿ, ಪ್ರತ್ಯಕ್ಷದರ್ಶಿ ಹನುಮಂತಪ್ಪ ಪವಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೇರಿ ನದಿ ಪ್ರಾಂತದಲ್ಲಿ ಸೋಮವಾರದಿಂದ ಸುರಿಯುತ್ತಿರುವ ಮಳೆ ಹಾಗೂ ಭದ್ರಾ ಜಲಾಶಯದಿಂದ ನೀರನ್ನು ಹೊರ ಬಿಟ್ಟ ಕಾರಣ ತುಂಗಭದ್ರಾ ನದಿಯಲ್ಲಿ ನೀರಿನ ಪ್ರವಾಹ ಏಕಾಏಕಿ ಹೆಚ್ಚಾಗಿದ್ದೇ ಈ ಘಟನೆಗೆ ಕಾರಣ. ಅಲ್ಲದೇ, ಈ ಘಟನೆ ನಡೆದ ಸ್ಥಳದಲ್ಲಿ ನೀರಿನ ಸುಳಿವು ಇತ್ತು. ಈ ಸ್ಥಳದಲ್ಲಿ ನಡೆದದ್ದು ಇದೇ ಮೊದಲ ಘಟನೆ ಎಂದು ಹೇಳಲಾಗಿದೆ.
ಮಧ್ಯಾಹ್ನ 2.30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಚಿತಾಭಸ್ಮವನ್ನು ನದಿಯಲ್ಲಿ ಬಂದವರು ನೀರು ಪಾಲಾಗಿದ್ದಾರೆ. ಮೃತರು ಗದಗ- ಬೇಟಗೇರಿ ಮತ್ತು ಹುಬ್ಬಳ್ಳಿಯವರಾಗಿದ್ದಾರೆ. ನೀರು ಪಾಲಾದವರು ಜೀವಂತವಾಗಿ ಉಳಿದಿರುವ ಸಾಧ್ಯತೆ ಕಡಿಮೆ. ತೆಪ್ಪಗಳ ಮೂಲಕ ಮೃತ ಶವಗಳ ಹುಡುಕಾಟ ಆರಂಭಿಸಲಾಗಿದೆ. 15 ಮಂದಿ ನುರಿತ ಈಜುಗಾರರು ಮೃತದೇಹಗಳನ್ನು ಹುಡುಕುತ್ತಿದ್ದಾರೆ. ಇಂದು ಸಂಜೆ ಇಲ್ಲವೇ ನಾಳೆ ಬೆಳೆಗ್ಗೆ ಶವಗಳನ್ನು ಪತ್ತೆ ಮಾಡಲಾಗುವುದು. ಮುಂಡರಗಿ ತಾಲ್ಲೂಕಿನ ಕಕ್ಕೂರು ಬಳಿ ಒಂದು ಶವ ಪತ್ತೆಯಾಗಿದೆ ಎಂದು ಹೂವಿನಹಗಲಿ ಡಿವೈಎಸ್ಪಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಶವಗಳ ಶೋಧ ಕಾರ್ಯ ನಡೆದಿದೆ. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













Click it and Unblock the Notifications