ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಣಿಗೆ ಡೋಂಟ್ ಕೇರ್ : ಬಿಜೆಪಿ ಹೈಕಮಾಂಡ್

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ಜು. 14 : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಯಾವ ಕಾರಣಕ್ಕೂ ಬಗ್ಗಬಾರದು ಎಂದು ಬಿಜೆಪಿ ಹೈಕಮಾಂಡ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಆದರೆ, ಶತಾಯಗತಾಯ ಬಳ್ಳಾರಿ ಗಣಿಧಣಿಗಳನ್ನು ಸಂಪುಟದಿಂದ ಕಿತ್ತೆಸೆಯಬೇಕು ಎಂದು ಪಣತೊಟ್ಟಂತಿರುವ ರಾಜ್ಯಪಾಲರು ಬುಧವಾರ ಪ್ರಧಾನಮಂತ್ರಿ, ಗೃಹ ಸಚಿವರನ್ನು ಭೇಟಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ವಾರದ ಹಿಂದೆ ಬಳ್ಳಾರಿಯ ಮೂವರು ಸಚಿವರು ಮತ್ತು ಇಬ್ಬರು ಶಾಸಕರು ತೋಳ್ಬಲಕ್ಕೆ ಸಂಬಂಧಿಸಿದಂತೆ ಹೊತ್ತಿ ಉರಿಯುತ್ತಿರುವ ಕರ್ನಾಟಕದ ವಿಧಾನಸಭೆ ನಾಲ್ಕನೇ ದಿನಕ್ಕೂ ಮುಂದುವರಿದಿದೆ. ಇಂದು ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಪಕ್ಷಗಳು ಧರಣಿ ಆರಂಭಿಸಿದಾಗ ಸ್ಪೀಕರ್ ಕೆಜಿ ಬೋಪಯ್ಯ ಅವರು ಅಧಿವೇಶನವನ್ನು ಗುರುವಾರಕ್ಕೆ ಮುಂದೂಡಿದರು. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯನ್ನು ಗೂಂಡಾ ಮುಖ್ಯಮಂತ್ರಿ ಎಂದು ಜರಿದಿದ್ದು ಇಂದಿನ ಕಲಾಪದ ಹೈಲೈಟ್.

ರೆಡ್ಡಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಸಂದರ್ಭ ಇದಲ್ಲ. ಪ್ರತಿಪಕ್ಷಗಳು ನಡೆಸುತ್ತಿರುವ ಧರಣಿಯಲ್ಲಿ ರಾಜಕೀಯವಿದೆ ಹೊರತು ರಾಜ್ಯದ ಹಿತಾಸಕ್ತಿ ಅಡಗಿಲ್ಲ. ಸಂಪೂರ್ಣ ಸ್ವಾರ್ಥಕ್ಕಾಗಿ ನಡೆಸುತ್ತಿರುವ ಪ್ರತಿಭಟನೆಗೆ ಸರಕಾರ ಯಾವ ಕಾರಣಕ್ಕೂ ಜಗ್ಗಬಾರದು ಎಂದು ಬಿಜೆಪಿ ಹೈಕಮಾಂಡ್ ನಡೆಸಿದ ಕೋರ್ ಕಮೀಟಿಯಲ್ಲಿ ವರಿಷ್ಠರು ತೆಗೆದುಕೊಂಡ ಒನ್ ಪಾಯಿಂಟ್ ಡಿಸಿಜನ್.

ಪಕ್ಷದ ವರಿಷ್ಠರು ಕಳುಹಿಸಿದ ಸಂದೇಶ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ನೈತಿಕ ಬಲ ತುಂಬಿದಂತಾಗಿದ್ದು, ಪ್ರತಿಪಕ್ಷಗಳ ಪ್ರತಿಭಟನೆಯನ್ನು ತಗ್ಗಿಸಲು ಇನ್ನಷ್ಟು ರಣತಂತ್ರ ಹೂಡುವ ಸಾಧ್ಯತೆ ಇದೆ. ಕೋರ್ ಕಮೀಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ರಾಜನಾಥ್ ಸಿಂಗ್, ಅನಂತಕುಮಾರ್ ಭಾಗವಹಿಸಿದ್ದರು.

ಶ್ರೀರಾಮುಲು ಕಿಡಿ

ಕಾಂಗ್ರೆಸ್ ಪಕ್ಷದ ಮುಖಂಡರು ವಿನಾಕಾರಣ ಧರಣಿ ನಡೆಸುತ್ತಿದ್ದಾರೆ. ನಾವುಗಳು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದ್ದು ಸಾಬೀತು ಮಾಡಿದರೆ ಕೂಡಲೇ ರಾಜೀನಾಮೆ ನೀಡುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಘೋಷಿಸಿದ್ದಾರೆ. ಸಿದ್ಧರಾಮಯ್ಯ ಹಿರಿಯ ರಾಜಕಾರಣಿ, ಅವರು ಏಕೆ ಹೀಗೆ ವರ್ತಿಸುತ್ತಿದ್ದಾರೆ ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಇದನ್ನು ವಿರೋಧಿಸಿ ನಾನು ಕೂಡ ಬಳ್ಳಾರಿಯಿಂದ ಮೈಸೂರಿಗೆ ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್, ಜೆಡಿಎಸ್ ಬಣ್ಣ ಬಯಲು ಮಾಡುವುದಾಗಿ ಹೇಳಿದರು.

ಈಶ್ವರಪ್ಪ ಅಸಮಾಧಾನ

ವಿಧಾನಸೌಧ ಇರುವುದು ಮಾಂಸದೂಟ ಮಾಡಿ ಮಲಗುವುದಕ್ಕೆ ಅಲ್ಲ. ಪ್ರತಿಪಕ್ಷಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಧರಣಿಯನ್ನು ರಾಜ್ಯದ ನೋಡುತ್ತಿದ್ದಾರೆ. ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿರುವ ಪ್ರತಿಪಕ್ಷಗಳು ಅಧಿವೇಶನವನ್ನು ಹಾಳು ಮಾಡುತ್ತಿರುವುದು ಖಂಡನೀಯ ಕೆಲಸ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X