ಗಣಿಗಾರಿಕೆ ತಡೆಯಲು ಸಾಧ್ಯವಾಗದಿದ್ದರೆ ರಾಜೀನಾಮೆ : ಸಿಎಂ

Yeddyurappa
ಬೆಂಗಳೂರು, ಜು. 12: ಕುರ್ಚಿ ಆಸೆ ನನಗಿಲ್ಲ. ರಾಜ್ಯದ ಹಿತವೇ ಮುಖ್ಯ. ಅಕ್ರಮ ಗಣಿಗಾರಿಕೆಯನ್ನು ತಡೆಯಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಜನರ ಬಳಿ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿ ಸಚಿವರು, ಶಾಸಕರ ವರ್ತನೆ ಖಂಡಿಸಿ ಪ್ರತಿಪಕ್ಷಗಳು ನಡೆಸುತ್ತಿರುವ ಧರಣಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲು ಸರಕಾರ ಸಿದ್ಧವಿದೆ. ರಾಜ್ಯದ ಸಂಪತ್ತು ಲೂಟಿ ಆಗಲು ಬಿಡುವುದಿಲ್ಲ. ಜನರ ಆಶಯದಂತೆ ಸರಕಾರ ನಡೆದುಕೊಳ್ಳಲು ಸಿದ್ಧವಿದೆ. ಪ್ರತಿಪಕ್ಷಗಳು ಸಹಕರಿಸಬೇಕು. ಪ್ರಧಾನಿ ಬಳಿ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಲು ನಿಮ್ಮ ಸಹಕಾರ ಅಗತ್ಯ ಎಂದು ಪ್ರತಿಪಕ್ಷಗಳಿಗೆ ಸಿಎಂ ಮನವಿ ಮಾಡಿಕೊಂಡರು.

ಅಕ್ರಮ ಗಣಿಗಾರಿಕೆಯಲ್ಲಿ ಎಲ್ಲ ಪಕ್ಷಗಳ ಮುಖಂಡರ ಪಾಲೂ ಇದೆ. ಅಲ್ಲದೇ ಮುಖಂಡರ ಸಂಬಂಧಿಕರೂ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಸಿದ್ಧನಿದ್ದೇನೆ. ಕುರ್ಚಿ ಆಸೆ ನನಗಿಲ್ಲ. ಅಂದು ನಂಬಿಕೆದ್ರೋಹವಾಗಿದೆ ಎಂದು ಜನರ ಬಳಿ ಹೋಗಿದ್ದೆ. ಇಂದು ಅಕ್ರಮ ಗಣಿಗಾರಿಕೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ರಾಜೀನಾಮೆ ನೀಡಿ ಜನರ ಬಳಿ ಹೋಗುತ್ತೇನೆ ಎಂದರು. ಘೋರ್ಷಡೆ ಕುಟುಂಬ, ಅನಿಲ್ ಲಾಡ್, ಮಂಜುನಾಥ ಕುನ್ನೂರು, ಆರ್ ವಿ ದೇಶಪಾಂಡೆ, ಆರ್ ಎಲ್ ಜಾಲಪ್ಪ ಇವರುಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಯಡಿಯೂರಪ್ಪ ಪರಿಷತ್ ನಲ್ಲಿ ಘೋಷಿಸಿದರು.

ಹೆಲ್ಮೆಟ್ ಧರಿಸಿ ಪ್ರತಿಭಟನೆ

ವಿಧಾನಸಭೆಯಲ್ಲಿ ನಡೆದ ಹಲ್ಲೆ ಯತ್ನ, ಪ್ರಾಣ ಬೆದರಿಕೆಯಂಥ ಘಟನೆಗಳನ್ನು ವಿರೋಧಿಸಿ ಜೆಡಿಎಸ್ ಶಾಸಕರು ಹೆಲ್ಮೆಟ್ ಧರಿಸಿ ಕಲಾಪಕ್ಕೆ ಹಾಜರಾಗುವ ಮೂಲಕ ಬಳ್ಳಾರಿಯ ಗಣಿಧಣಿಗಳ ಕ್ರಮವನ್ನು ತೀವ್ರವಾಗಿ ವಿರೋಧಿಸಿ ಧರಣಿ ನಡೆಸಿದರು. ಮೂವರು ಸಚಿವರು ಮತ್ತು ಇಬ್ಬರು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದರಿಂದ ದಿನವಿಡೀ ಕಲಾಪಗಳು ನೀರಿನಲ್ಲಿ ಹೋಮವಾದವು.

ಈ ಕುರಿತು ಸ್ಪೀಕರ್ ಬೋಪಯ್ಯ ಅವರು ಪ್ರತಿಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಂಧಾನ ಮುರಿದು ಬಿದ್ದಿದ್ದು, ರಾತ್ರಿ ಇಡೀ ಸದನದಲ್ಲೇ ಧರಣಿ ನಡೆಸಲು ನಿರ್ಧರಿಸಲಾಗಿದೆ. ನಾಳೆಯಿಂದ ಸದನದ ಕಲಾಪಗಳಲ್ಲಿ ಭಾಗವಹಿಸದಿರಲು ಸಹ ಪ್ರತಿಪಕ್ಷಗಳು ಚಿಂತನೆ ನಡೆಸಿವೆ. ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭವಾಗಿದೆ. ರಾತ್ರಿಯಿಡಿ ಧರಣಿ ನಡೆಸುವ ಕುರಿತು ಸಭೆ ತೀರ್ಮಾನಕ್ಕೆ ಬರಲಾಗುವುದು ಎಂದು ಮೂಲಗಳು ತಿಳಿಸಿದೆ.

ಬಳ್ಳಾರಿಯ ಮೂವರು ಸಚಿವರು, ಇಬ್ಬರು ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಜೊತೆಗೆ ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕು. ಇದಕ್ಕಾಗಿ ಜಂಟಿ ಸದನ ಸಮಿತಿಯನ್ನು ರಚಿಸಬೇಕು ಎಂದು ಪ್ರತಿಪಕ್ಷಗಳ ಮುಖ್ಯವಾದ ಬೇಡಿಕೆಯಾಗಿದೆ. ಪ್ರತಿಪಕ್ಷಗಳು ಹಿಡಿದ ಪಟ್ಟನ್ನು ಸಡಿಲಿಸುತ್ತಿಲ್ಲ. ಪ್ರತಿಪಕ್ಷಗಳ ಮನವೂಲಿಸುವಲ್ಲಿ ಸ್ಪೀಕರ್ ಬೋಪಯ್ಯ ಕೂಡಾ ವಿಫಲರಾಗಿದ್ದಾರೆ.

ಸದನದಲ್ಲಿ ಕೂಗಾಟ,ಚೀರಾಟ

ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳ ಶಾಸಕರು ಬಳ್ಳಾರಿಯ ರೆಡ್ಡಿಗಳು ಶಾಸಕರ ಮೇಲೆ ಹಲ್ಲೆ ಯತ್ನ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದು, ಕರ್ನಾಟಕದ ಜನತೆಯ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕೆಲ ಕಾಲ ಸದನದಲ್ಲಿ ಕೋಲಾಹಲ ಹಾಗೂ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಇದಕ್ಕೂ ಮೊದಲು ಜೆಡಿಎಸ್ ನ 18 ಶಾಸಕರು ಹೆಲ್ಮೆಟ್ ಧರಿಸಿ ಒಬ್ಬೂಬ್ಬರಂತೆ ಸದನದೊಳಕ್ಕೆ ಆಗಮಿಸುತ್ತಿದ್ತಂತೆಯೇ ಎಲ್ಲರೂ ಬೆರಗಾಗುವ ಸನ್ನಿವೇಶ. ಕಾರಣ ಗೊತ್ತಿರುವುದೇ, ಜೆಡಿಎಸ್ ಶಾಸಕರಿಗೆ ಮತ್ತು ಸಾಥ್ ಕಾಂಗ್ರೆಸ್ ಶಾಸಕರು ಆರಂಭದಲ್ಲೇ ಬಳ್ಳಾರಿಯ ಸಚಿವರು, ಶಾಸಕರು ತೀವ್ರ ವಾಗ್ದಾಳಿ ಆರಂಭಿಸಿದರು. ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಕೆ ಜೆ ಬೋಪಯ್ಯ ಅವರು, ಶಾಸಕರು ಹೆಲ್ಮೆಟ್ ಧರಿಸಿ ಕಲಾಪದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಶಾಸಕರು ಈ ರೀತಿ ಮಾಡುವುದು ಸಂವಿಧಾನದ ವಿರೋಧಿ ಕೆಲಸವಾಗಲಿದೆ ಎಂದಾಗ ಜೆಡಿಎಸ್ ಶಾಸಕರು ಸ್ಪೀಕರ್ ಮಾತಿಗೆ ಆಕ್ಷೇಪಿಸಿ ಪ್ರತಿಭಟನೆ ಆರಂಭಿಸಿದರು.

ಸ್ಪೀಕರ್ ಅವರ ಹೇಳಿಕೆಗೆ ಬಾವಿಗಿಳಿದ ಪ್ರತಿಪಕ್ಷದ ಶಾಸಕರು ಪ್ರತಿಭಟನೆ ನಡೆಸಿದರು. ಪ್ರತಿಪಕ್ಷದ ಶಾಸಕರಿಗೆ ಜೀವ ಬೆದರಿಕೆ ಇದೆ, ಹೀಗಾಗಿ, ಹೆಲ್ಮೆಟ್ ಧರಿಸಿ ಕಲಾಪದಲ್ಲಿ ಭಾಗವಹಿಸಲು ಅನುಮತಿ ನೀಡಿ ಹಾಗೂ ಹೆಲ್ಮೆಟ್ ಜೊತೆಗೆ ಬುಲೆಟ್ ಫ್ರೂಪ್ ಜಾಕೆಟ್ ಗಳನ್ನು ನೀಡಬೇಕು ಎಂದು ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಸರಕಾರವನ್ನು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+