ಖಜಾನೆ ಲೂಟಿಗೆ ಗ್ರಾಮ ಪಂಚಾಯಿತಿ ಸಜ್ಜು

ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವ ಮುನ್ನವೇ ಈ ಸಾಲಿನ ನರೇಗಾ (NREGA) ಸಂಬಂಧ ಚಟುವಟಿಕೆಗಳು ಗರಿಗೆದರಿದ್ದು, ಬಹುಮುಖ್ಯವಾಗಿ ಜಾಬ್‌ಕಾರ್ಡ್‌ಗಳಿಗೆ ಬೇಕಾಗಿರುವ ಕೂಲಿಕಾರ್ಮಿಕರನ್ನು ಪಟ್ಟಿ ಮಾಡುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಬದಲಾವಣೆ ಎಂಬಂತೆ ಈ ಬಾರಿ ಜಾರ್ಬ್‌ಕಾರ್ಡ್‌ಗಳಿಗೆ ಫೋಟೋ ತೆಗೆಸುವ ಕಾರ್ಯ ನಡೆಯುತ್ತಿದ್ದು, ಗ್ರಾಮಗಳಿಗೆ ತೆರಳಿ ಕೂಲಿಕಾರ್ಮಿಕರ ಕುಟುಂಬದ ಫೋಟೋ ತೆಗೆಸುವಲ್ಲಿ ಈಗಾಗಲೇ ಗ್ರಾ.ಪಂ. ಅಧಿಕಾರಿಗಳು ನಿರತರಾಗಿದ್ದಾರೆ.
ಕಳೆದ ಸಾಲುಗಳಂತೆ ಈ ಬಾರಿಯೂ ಅರ್ಜಿ ಹಾಕಿದವರೆಲ್ಲರಿಗೂ ಜಾಬ್‌ಕಾರ್ಡ್ ಸಿಗುತ್ತದೆ ಎಂದುಕೊಂಡರೆ ನಿಮ್ಮ ಊಹೆ ಸುಳ್ಳಾಗುವುದಂತೂ ದಿಟ. ಈ ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ತುಸು ಜಾಣರಾಗಿದ್ದಾರೆ, ಸಿಕ್ಕಸಿಕ್ಕವರಿಗೆಲ್ಲಾ ಜಾಬ್‌ಕಾರ್ಡ್ ನೀಡಿದರೆ ಅದು ನಮಗೇ ಮುಳುವಾಗುತ್ತದೆಂಬುದನ್ನರಿತ ಅಧಿಕಾರಿಗಳು, ಆಯಾ ಪ್ರದೇಶದ ಗುತ್ತಿಗೆದಾರರನ್ನು ಸಂಪರ್ಕಿಸಿ, ತಮಗೆ ಬೇಕಾಗಿರುವವರಿಗೆ ಮಾತ್ರ ಜಾಬ್‌ಕಾರ್ಡ್‌ಗಳನ್ನು ವಿತರಣೆ ಮಾಡಲು ಪಟ್ಟಿ ಮಾಡುತ್ತಿದ್ದಾರೆಂಬ ದೂರುಗಳು ಈಗಾಗಲೇ ಕೇಳಿಬಂದಿವೆ.
ಹೆಸರಿಗೆ ಮಾತ್ರ ಜಾಬ್‌ಕಾರ್ಡ್: ಮುಗ್ದ ಗ್ರಾಮೀಣ ಜನರನ್ನು ವಂಚಿಸಿ, ಅವರಿಗೆ ತಿಳಿಸದೇ ಅವರ ಹೆಸರಿನಲ್ಲಿ ಜಾಬ್‌ಕಾರ್ಡ್ ಸೃಷ್ಟಿಸುವುದು ಗ್ರಾಮ ಪಂಚಾಯತಿಗಳಿಗೆ ಕಷ್ಟದ ಕೆಲಸವೇನಲ್ಲ. ಉದ್ಯೋಗ ಬಯಸುವ ಕೂಲಿಕಾರ್ಮಿಕರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ಜಾಬ್‌ಕಾರ್ಡ್ ಗ್ಯಾರಂಟಿ ಎನ್ನುವ ನಿಯಮ ನರೇಗಾದಲ್ಲಿದೆ. ಆದರೆ ಇಲ್ಲಿ ಅರ್ಜಿ ಸಲ್ಲಿಸುವ ಅಗತ್ಯವೇ ಇಲ್ಲ.
ನರೇಗಾ ಕೆಲಸ ಬೇಡವಾಗಿರುವ ಸರ್ಕಾರಿ-ಅರೆ ಸರ್ಕಾರಿ ನೌಕರರಿಗೆ, ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ, ಗೃಹಿಣಿಯರಿಗೆ ಮುಂದುವರಿದು ವಿದ್ಯಾರ್ಥಿಗಳಿಗೂ ಸಹ ಇಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಉದ್ಯೋಗ ನೀಡಿ, ಪ್ರಾಮಾಣಿಕತೆ ಮೆರೆಯುತ್ತಾರೆ. ಇವರೆಲ್ಲರೂ ಸಹ ಅಲ್ಲಿಯೂ ಕೆಲಸ ಮಾಡಿಕೊಂಡು ಇಲ್ಲಿಯೂ ಉದ್ಯೋಗ ಮಾಡಬಹುದು. ಹೇಗಿದೆ ನರೇಗಾ ಮ್ಯಾಜಿಕ್?
ಈ ಬಾರಿಯೂ ಹಾಗೇ ಆಗಿದೆ. ಕಳೆದ ಬಾರಿ ಸಲ್ಲಿಸಿರುವ ಅರ್ಜಿಗಳಿಗೇ ಈ ಬಾರಿಯೂ ಜಾಬ್‌ಕಾರ್ಡ್ ನೀಡಲಾಗುತ್ತಿದೆ, ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವೇ ಇಲ್ಲ. ಒಂದು ಕುಟುಂಬದಲ್ಲಿರುವ ಸದಸ್ಯರೆಲ್ಲರ ಹೆಸರಿನಲ್ಲಿಯೂ ಜಾಬ್‌ಕಾರ್ಡ್‌ಗಳು ಸೃಷ್ಟಿಯಾಗುತ್ತಿವೆ. ಇದರಲ್ಲಿ ಮಕ್ಕಳು-ವಯಸ್ಕರೆನ್ನುವ ಬೇಧ-ಭಾವವಂತೂ ಇಲ್ಲ. ಎಲ್ಲರಿಗೂ ಸಮಾನ ಮೀಸಲಾತಿ ನೀಡಲು ಹೆಣಗಾಡುವ ಸರ್ಕಾರ ಇಲ್ಲಿ ತಲೆತಗ್ಗಿಸಬೇಕು. ಏಕೆಂದರೆ ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಪುರುಷ-ಮಹಿಳೆ-ಮಕ್ಕಳು ಎನ್ನದೆ ಎಲ್ಲರಿಗೂ ಸಮಾನ ಅವಕಾಶ ನೀಡುವ ಪುಣ್ಯ ಕಾರ್ಯ ಮಾಡುತ್ತಿದ್ದಾರೆ.
ಇನ್ನು ಈ ಜಾಬ್‌ಕಾರ್ಡ್‌ಗಳು ಹೆಸರಿಗೆ ಮಾತ್ರವೇ ಹೊರತು ನೀವು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಸಿಕ್ಕಿತೆಂದು ಬೀಗುವಂತಿಲ್ಲ. ನಿಮ್ಮ ಹೆಸರಲ್ಲಿ ಅಂಚೆ ಕಛೇರಿಯಲ್ಲಿ ಖಾತೆಯನ್ನೂ ತೆರೆಯಲಾಗುತ್ತದೆ, ಆದರೆ ನೀವು ಅಲ್ಲಿ ಹಣ ತೆಗೆದುಕೊಳ್ಳುವಂತಿಲ್ಲ!? ಈ ಬಗ್ಗೆ ಪ್ರಶ್ನಿಸಿದರೆ ನೀವೇನೂ ಕೆಲಸ ಮಾಡಿದ್ದೀರಾ ಹಣ ಪಡೆಯಲಿಕ್ಕೆ? ನಿಮ್ಮ ಊರಿನ ಅಭಿವೃದ್ದಿಗೆ ತಾನೇ ನಾವು ಹೀಗೆಲ್ಲಾ ಮಾಡಿರುವುದು, ಅಭಿವೃದ್ದಿ ಬೇಡವಾದರೆ ಹೇಳಿ ನಾವು ಕೆಲಸ ನಿಲ್ಲಿಸುತ್ತೇವೆ ಎಂಬ ಸಿದ್ದ ಉತ್ತರ ಅಧಿಕಾರಿಗಳ ಕಡೆಯಿಂದ ರಾಮಬಾಣವಾಗಿ ಬಂದು ನಿಮ್ಮೆದೆಗೆ ಬಡಿಯುತ್ತದೆ.
ಹಗಲು ದರೋಡೆ : ನರೇಗಾ ಯೋಜನೆ ಎಂಬ ಹೆಸರು ಕೇಳಿದರೆ ಖುಷಿಯಾಗಬೇಕಿದ್ದವರು ಕೆಲಸವಿಲ್ಲದೆ ಕುಳಿತಿದ್ದ ಬಡ ಕೂಲಿ ಕಾರ್ಮಿಕರು ಆದರೆ ಇಲ್ಲಿ ಪರಿಸ್ಥಿತಿಯೇ ಬೇರೆಯಾಗಿದೆ. ನರೇಗಾ ಎಂದರೆ ಖುಷಿಯಾಗುವುದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಮಾತ್ರ. ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಕೂಲಿ ಕಾರ್ಮಿಕರನ್ನು ಕಟ್ಟಿಕೊಂಡು ಸಂಜೆವರೆಗೂ ದುಡಿಯುವ ಪ್ರಮೇಯವೇ ಇಲ್ಲ, ಎಲ್ಲಾ ಓಕೆ, ಕೂಲಿಕಾರ್ಮಿಕರು ಯಾಕೆ?' ಎಂಬ ಮಂತ್ರವನ್ನು ಅಳವಡಿಸಿಕೊಂಡಿರುವ ಗುತ್ತಿಗೆದಾರರು ಯಂತ್ರಗಳನ್ನು ಬಳಸಿ ಥಟ್ ಅಂತಾ ಕೆಲಸ ಮುಗಿಸಿ, ಬಿಲ್ ಹಣದಲ್ಲಿ ಅಧಿಕಾರಿಗಳಿಗೊಂದಿಷ್ಟು ನೈವೇದ್ಯ ಅರ್ಪಿಸಿ, ಅದೇ ತರಹದ ಇನ್ನೊಂದು ಕೆಲಸ ಗಿಟ್ಟಿಸುವುದನ್ನು ಕರಗತ ಮಾಡಿಕೊಂಡಿರುವುದು ಯಾರಿಗೂ ತಿಳಿಯದೆ ಇರುವ ವಿಷಯವೇನಲ್ಲ.
ಬೇಲಿಯೇ ಎದ್ದು ಹೊಲ ಮೇಯ್ತು' ಎಂಬ ಗಾದೆಯಂತೆ ಈ ಅವ್ಯವಹಾರಗಳನ್ನು ನಿಯಂತ್ರಿಸಬೇಕಿದ್ದ ಅಧಿಕಾರಿಗಳೇ ಇವರಿಗೆ ಕಾವಲಾಗಿ ನಿಂತು, ಅವರಿಗೆ ಬೇಕಾಗಿರುವ ಕಾಮಗಾರಿಗಳನ್ನು ಸೃಷ್ಟಿಸಿ, ನಿರ್ವಹಿಸಲು ನೀಡುತ್ತಿರುವುದು ಖಜಾನೆ ಲೂಟಿ ಮಾಡುವುದಕ್ಕೇ ವಿನಃ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಅಥವಾ ಕೂಲಿ ಕಾರ್ಮಿಕರ ಉದ್ದಾರಕ್ಕಂತೂ ಅಲ್ಲ. ಇದು ಹಗಲು ದರೋಡೆಯಲ್ಲದೆ ಮತ್ತೇನು?
ಮುಚ್ಚಿ ಹೋದ ಅವ್ಯವಹಾರಗಳು : ನರೇಗಾ ಯೋಜನೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಕೆಲ ಗ್ರಾಮೀಣ ಪ್ರಜ್ಞಾವಂತರು ಮೇಲಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರುಗಳ ಕಡತ ಈಗ ಮೂಲೆ ಸೇರಿದೆ. ಕೆಲ ಗ್ರಾಮ ಪಂಚಾಯಿತಿಗಳ ನರೇಗಾ ಕಾಮಗಾರಿಗಳಲ್ಲಿ ಮೇಲ್ನೋಟಕ್ಕೆ ಅವ್ಯವಹಾರ ಕಾಣುತ್ತಿದ್ದರೂ ಮೇಲಧಿಕಾರಿಗಳು ಮಾತ್ರ ಏನೂ ಅಗಿಲ್ಲ ಎಂಬಂತೆ ಇರುವುದು ಅವರು ಸುಮ್ಮನಿರುವುದಕ್ಕೆ ಕಾರಣವನ್ನು ಅದೇ ನೀಡುತ್ತಿದೆ. ಇದರಲ್ಲಿ ಅವರ ಪಾತ್ರವೂ ಇದೆ ಎಂಬುದನ್ನು ಇನ್ನೊಮ್ಮೆ ನಿಮಗೆ ಹೇಳಬೇಕಾಗಿಲ್ಲ. ಹಾಗಾಗಿ ಹಿಂದೆ ನಡೆದಿರುವ ಅವ್ಯವಹಾರಗಳು ನೀರಿನಲ್ಲಿ ಹೋಮ ಮಾಡಿದಂತೆ ಕೊಚ್ಚಿಕೊಂಡು ಹೋಗಿವೆ. ಈಗೇನಿದ್ದರೂ ಹೊಸ ಸರದಿ. ಮುಂದೆ ಇನ್ಯಾವ ಹೊಸ ಅವ್ಯವಹಾರಗಳು ನಡೆಯುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ.
40% ಕೊಡಬೇಕು ಸ್ವಾಮಿ: ನೀವೇನೋ ಹೇಳುತ್ತೀರಿ ಯಂತ್ರಗಳಲ್ಲಿ ಕೆಲಸ ಮಾಡಬೇಡಿ, ಕೂಲಿಕಾರ್ಮಿಕರಿಂದ ಮಾಡಿಸಿ ಅಂತ, ಕಾಮಗಾರಿ ಹಣದಲ್ಲಿ ಅಧಿಕಾರಿಗಳಿಗೆ 40% ಕೊಡಬೇಕು, ಇಲ್ಲದಿದ್ದರೆ ಕೆಲಸವೇ ಇಲ್ಲ, ಮಿಕ್ಕ ಹಣದಲ್ಲಿ ನಾವು ಹೇಗೆ ಕೆಲಸ ಮಾಡುವುದು ಸ್ವಾಮಿ...
ಇದು ಸಣ್ಣ ಗುತ್ತಿಗೆದಾರರ ಅಳಲು. ಉಳಿದ 58% ಹಣದಲ್ಲಿ ನಾವು ಉತ್ತಮವಾಗಿ ಕೆಲಸ ಮಾಡಬೇಕು ಎಂದರೆ ಹೇಗಾಗುತ್ತದೆ ಎಂದು ಸಣ್ಣ ಗುತ್ತಿಗೆದಾರರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಅಷ್ಟು ಕೊಟ್ಟರೂ, ಉತ್ತಮವಾಗಿ ಕೆಲಸ ಮಾಡಿದರೂ ಬಿಲ್ ಮಾಡಿಸಿಕೊಳ್ಳುವಷ್ಟರಲ್ಲಿ ನಮಗೆ ಸಾಕುಬೇಕಾಗಿರುತ್ತದೆ. ನರೇಗಾ ಏನಿದ್ದರೂ ದೊಡ್ಡ ಗುತ್ತಿಗೆದಾರರಿಗೆ ಮಾತ್ರ, ನಮ್ಮಂಥವರಿಗಲ್ಲ ಎಂದು ನಿಟ್ಟುಸಿರು ಬಿಡುತ್ತಾರೆ. ಒಟ್ಟಾರೆ ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಹಣ ಮಾಡುವವರಿಗೆ ಹೇಳಿ ಮಾಡಿಸಿದಂತಿರುವ ನರೇಗಾ' ಯೋಜನೆ ಬಡ ಕೂಲಿಕಾರ್ಮಿಕರಿಗೆ ವರದಾನವಾಗದೆ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಸುಯೋಗ'ವಾಗಿರುವುದು ಆತಂಕಕಾರಿ ವಿಚಾರವಾಗಿದ್ದು, ಕೆಲ ಗಟ್ಟಿಗರ, ಅಧಿಕಾರಿಗಳ ಚಿತಾವಣೆಯಿಂದ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಹಾದಿತಪ್ಪಿರುವುದು ಮಾತ್ರ ದುರದೃಷ್ಟಕರ ಸಂಗತಿಯಾಗಿದೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications